

ನವದೆಹಲಿ; ಕೇಂದ್ರ ಸರ್ಕಾರದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸಲು ನಕಾರ ವ್ಯಕ್ತಪಡಿಸಿರುವ ಟ್ವಿಟರ್ ವಿರುದ್ಧ ದೆಹಲಿ ಹೈಕೋರ್ಟ್ ನಲ್ಲಿ ಖಾಸಗಿ ಅರ್ಜಿ ದಾಖಲಾಗಿದೆ.
ದೆಹಲಿ ಹೈಕೋರ್ಟ್ ನ ಪ್ರ್ಯಾಕ್ಟಿಸಿಂಗ್ ವಕೀಲರಾಗಿರುವ ಅಮಿತ್ ಆಚಾರ್ಯ ಎನ್ನುವರು ಈ ಅರ್ಜಿ ದಾಖಲಿಸಿದ್ದಾರೆ. ಭಾರತದ ಸಾರ್ವಭೌಮತ್ವಕ್ಕೆದಕ್ಕೆ ತರುವ ಕ್ರಮವನ್ನು ಟ್ವಿಟ್ಟರ್ ಅನುಸರಿಸುತ್ತಿದ್ದು ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮಗಳಿಗೆ ಹೊಸ ಐಟಿ ನಿಯಮಗಳನ್ನು ಬಿಡುಗಡೆ ಮಾಡಿದೆ. ಪ್ರತಿಯೊಂದು ಕಂಪನಿ ಇವುಗಳನ್ನು ಅನುಸರಿಸಬೇಕು ಎಂದು ಮೂರು ತಿಂಗಳು ಗಡುವು ನೀಡಿತ್ತು. ಈಗ ಗಡುವು ಮುಗಿದಿದ್ದರಿಂದ ಕೆಲ ನಿಯಮಗಳನ್ನು ಒಪ್ಪಿಕೊಳ್ಳಲು ಸಾಮಾಜಿಕ ಜಾಲತಾಣ ದೈತ್ಯ ಟ್ವಿಟ್ಟರ್ ತಕರಾರು ತೆಗೆದು ಕೇಂದ್ರದ ಹೊಸ ನಿಯಮಗಳು ಬಳಕೆದಾರರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತದೆ ಎಂದು ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಅಲ್ಲದೇ ಭಾರತ ಸರ್ಕಾರದ ಹೊಸ ನಿಯಮಗಳು ಟ್ವಿಟ್ಟರ್ ನೌಕರರಿಗೆ ಬೆದರಿಕೆ ಒಡ್ಡುವಂತಿವೆ ಎಂದು ಆತಂಕ ವ್ಯಕ್ತಪಡಿಸಿದೆ.
ಆದರೆ ಕೇಂದ್ರ ಸರ್ಕಾರ ಟ್ವಿಟ್ಟರ್ ಮೊಂಡುತನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಟ್ವಿಟ್ಟರ್ ಹೇಳಿಕೊಡಬೇಕಾಗಿಲ್ಲ ಎಂದಿದೆ. ಇತ್ತೀಚೆಗೆ ದೆಹಲಿ ಪೊಲೀಸ್ ಕಾಂಗ್ರೆಸ್ ಟೂಲ್ ಕಿಟ್ ಹಗರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಕಚೇರಿಗಳ ಮೇಲೆ ದಾಳಿ ಮಾಡಿತ್ತು.