ಪ್ಲಾಸ್ಟಿಕ್‌ಮುಕ್ತ ಸಮಾಜಕ್ಕೆ ಸಹಕಾರ ಅಗತ್ಯ : ಪುರಸಭೆ ಅಧ್ಯಕ್ಷೆ ಸರಸ್ವತಿ ಅಭಿಮತ

27 bidadi photo 1
Published on

ಬಿಡದಿ : ಮನೆಗಳಲ್ಲಿ ಉತ್ಪತ್ತಿಯಾಗುವ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಪುರಸಭೆ ಕಸ ಸಂಗ್ರಹ ವಾಹನಕ್ಕೆ ನೀಡುವಂತೆ ಪುರಸಭೆ ಅಧ್ಯಕ್ಷೆ ಸರಸ್ವತಿ ರಮೇಶ್ ಮನವಿ ಮಾಡಿದರು.

ಪುರಸಭೆ ವ್ಯಾಪ್ತಿಯ ತೊರೆದೊಡ್ಡಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಬಿಡದಿ ಪುರಸಭೆ, ಕಾವೇರಿ ಪ್ಲಾಸ್ಟೋ ಕಂಟೇನರ್ ಸಂಸ್ಥೆ, ಸರ್ವೋದಯ ಸಂಸ್ಥೆ ಹಾಗೂ ಅಮೃತ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಸ್ಕೂಲ್ ಸಹಯೋಗದಲ್ಲಿ ಹಿಂದೂಸ್ಥಾನ್ ಕೋಕಾ-ಕೋಲಾ ಬಿವರೇಜಿಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ವರ್ತಕರು ಹಾಗೂ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಹಸಿ ಕಸ, ಒಣಕಸವನ್ನು ವಿಂಗಡಿಸಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡಬೇಕು. ನಾಗರಿಕರ ಸಹಕಾರವಿಲ್ಲದೆ ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣ ಅಸಾಧ್ಯ ಎಂದರು.

ಪುರಸಭೆ ಉಪಾಧ್ಯಕ್ಷ ಸಿ.ಲೋಕೇಶ್ ಮಾತನಾಡಿ, ಮಿತಿ ಮೀರಿದ ಮಾಲಿನ್ಯದಿಂದ ಅಂತರ್ಜಲ ಮತ್ತು ಉಸಿರಾಡುವ ಗಾಳಿ ಈಗಾಗಲೇ ಮಲೀನವಾಗಿದೆ. ಅಲ್ಲದೆ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಕೊಳವೆಬಾವಿ, ನದಿ, ಕೆರೆ ಕಟ್ಟೆಗಳ ನೀರಿನ ಮೇಲೆ ವಿಶ್ವಾಸವೇ ಹೋಗಿದೆ. ಕೊಳಾಯಿಗಳಲ್ಲಿ ಪೂರೈಕೆ ಆಗುವ ನೀರು ಯೋಗ್ಯವಲ್ಲ ಎಂಬುದು ನಿರ್ಧರಿತವಾಗಿದೆ. ಆದ್ದರಿಂದ ಪರಿಸರವನ್ನು ಮಲಿನವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

ಮುಂದಿನ ದಿನಗಳಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಜರುಗಿಸಲು ಗಂಭೀರ ಚಿಂತನೆ ಸಹ ನಡೆಸಲಾಗಿದೆ. ಕಸ ಬೇರ್ಪಡಿಸುವ ನಿಟ್ಟಿನಲ್ಲಿ ಪ್ರತಿಯೊಂದ ಮನೆಗೂ ಉಚಿತವಾಗಿ ಬುಟ್ಟಿಗಳನ್ನು ನೀಡಲಾಗುತ್ತಿದೆ ಎಂದರು.

ಪುರಸಭೆ ಸದಸ್ಯೆ ವೈಶಾಲಿ ಸೋಮಣ್ಣ ಮಾತನಾಡಿ, ಪ್ರತಿ ಮನೆಯಲ್ಲೂ ಸ್ವಚ್ಛ ಪರಿಸರದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ ಎಂದರು.

ಹಿಂದೂಸ್ಥಾನ್ ಕೋಕಾ-ಕೋಲಾ ಬಿವರೇಜಿಸ್ ಕಂಪೆನಿ ಸಹಾಯಕ ಉಪಾಧ್ಯಕ್ಷ ಎಂ. ಚಂದ್ರಶೇಖರ್, ಮಾಗಡಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಲತಾ ಕುಲಕರ್ಣಿ ಸ್ವಚ್ಛತೆ ಬಗ್ಗೆ ಉಪನ್ಯಾಸ ನೀಡಿದರು.

ಬಿಡದಿ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಾಸುದೇವ್, ಕಾವೇರಿ ಪ್ಲಾಸ್ಟೋ ಕಂಟೇನರ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಆರಿಫ್‌ಖಾನ್ ಮುಂತಾದವರು ಭಾಗವಹಿಸಿದ್ದರು. ಇದೇ ವೇಳೆ ತೊರೆದೊಡ್ಡಿ ನಿವಾಸಿಗಳಿಗೆ 600 ಕಸದ ಬುಟ್ಟಿಗಳನ್ನು ವಿತರಿಸಲಾಯಿತು ಹಾಗೂ ಪುರಸಭೆ ಪೌರ ಕಾರ್ಮಿಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಅಭಿನಂದಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net