

ಕೊಳ್ಳೇಗಾಲ: ಪಟ್ಟಣದ ಡಾ.ರಾಜಕುಮಾರ್ ರಸ್ತೆಯಿಂದ ಶ್ರೀ ವಾಸವಿ ಕಾಲೇಜು ರಸ್ತೆಗೆ ಸಂಪರ್ಕ ಬೆಸೆಯುವ ರಸ್ತೆಯಲ್ಲಿರುವ ಶ್ರೀ ಕುಕ್ಕೆ ಟಿಫನ್ ಸೆಂಟರ್‌ಗೆ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಮತ್ತು ನಗರಸಭೆ ಹೆಲ್ತ್ ಇನ್‌ಪೆಕ್ಟರ್ ಶನಿವಾರ ಭೇಟಿ ನೀಡಿ ಹೋಟೆಲ್‌ನಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ಮಾಡದಂತೆ ಸೂಚನೆ ನೀಡಿದರು.
ಕೊಳ್ಳೇಗಾಲದಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತ ಎಂಬ ಶೀರ್ಷಿಕೆಯಡಿ ಅ.11 ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಬಿತ್ತರಿಸ ಲಾಗಿತ್ತು. ತಳ್ಳುಗಾಡಿ, ಹೋಟೆಲ್, ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಗಮನ ಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಶ್ರೀ ಕುಕ್ಕೆ ಟಿಫನ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ತಿಂಡಿ ಪಾರ್ಸಲ್‌ಗಳಿಗೆ ಬಳಸಲಾಗುತ್ತಿದ್ದ ಕವರ್‌ಗಳು ಹಾಗೂ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಕಂಡು ಮಾಲೀಕರಿಗೆ ಪ್ಲಾಸ್ಟಿಕ್ ಬಳಸದಂತೆ ನಿಯಮವಿದ್ದರೂ ಏಕೆ ಬಳಕೆ ಮಾಡುತ್ತಿದ್ದೀರಾ? ಪ್ರಶ್ನಿಸಿದರು. ಇನ್ಮುಂದೆ ನಿಯಮ ಉಲಂಘನೆ ಮಾಡಿದರೆ ಕ್ರಮ ವಹಿಸುವುದಾಗಿ ಎಚ್ಚರಿಕೆ ನೀಡಿದರು.
ನಗರಸಭೆ ಹೆಲ್ತ್ ಇನ್‌ಸ್ಪೆಕ್ಟರ್ ಚೇತನ್ ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿ, ಪ್ಲಾಸ್ಟಿಕ್ ಕವರ್‌ಗಳನ್ನು ಬಳಸುತ್ತಿದ್ದ ಶ್ರೀ ಕುಕ್ಕೆ ಟಿಫನ್ ಸೆಂಟರ್‌ಗೆ ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಶನಿವಾರ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಸೋಮವಾರ ದಂಢವನ್ನು ಕಟ್ಟಿಸಲಾಗುತ್ತದೆ. ನಂತರ, ಪ್ಲಾಸ್ಟಿಕ್ ಕವರ್ ಬಳಕೆ ಮಾಡುವ ಹೋಟೆಲ್, ಅಂಗಡಿಗಳು ಹಾಗೂ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕ್ರಮವಹಿಸಲಾಗುತ್ತದೆ ಎಂದರು.