

ಉಡುಪಿ: ಪರಿಸರ ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶಕ್ಕೆ ಅನ್ವಯವಾಗುವಂತೆ ಜುಲೈ 1ರಿಂದ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದ್ದು, ಇದರಲ್ಲಿ ವ್ಯಾಪಾರಸ್ಥರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶವಿಲ್ಲ. 64 ಬಗೆಯ ಪ್ಲಾಸ್ಟಿಕ್ ವಸ್ತುಗಳಿಂದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತ್ಯಾಜ್ಯ ನಿರ್ವಹಣೆ ಸವಾಲಿನ ಕೆಲಸವಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಶನಿವಾರ ನಗರಸಭೆಯಲ್ಲಿ ಸತ್ಯಮೂರ್ತಿ ಸಭಾಂಗಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ನಿಷೇಧ ಕುರಿತ ವರ್ತಕರ ಸಭೆಯಲ್ಲಿ ಮಾತನಾಡಿದರು.
ಅಧಿಕಾರಿಗಳು ಅಂಗಡಿಗಳಿಗೆ ಪರಿಶೀಲನೆಗೆ ಬಂದಾಗ ಗೌರವಯುತವಾಗಿ ನಡೆದುಕೊಳ್ಳಬೇಕು. ಅನುಚಿತವಾಗಿ ವರ್ತಿಸಿದರೆ ಕಾನೂನುಕ್ರಮ ಕೈಗೊಳ್ಳಲಾಗುವುದು. ಪ್ಲಾಸ್ಟಿಕ್ ಸಮಸ್ಯೆ ಬಗ್ಗೆ ಮನವರಿಕೆಯಾಗಬೇಕಾದರೆ ಕರ್ವಾಲು ಘನತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ, 15 ವರ್ಷದ ತ್ಯಾಜ್ಯಗಳು ಇನ್ನೂ ಕರಗಿಲ್ಲ. ಗ್ರಾಹಕರಿಗೂ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಪರಿಸರ ಇಲಾಖೆ ಅಧಿಕಾರಿ ಲಕ್ಷ್ಮೀಕಾಂತ್ ಮಾಹಿತಿ ನೀಡಿ, ಶೇ.95ರಷ್ಟು ಪ್ಲಾಸ್ಟಿಕ್‌ಗಳು ಜನವಸತಿ ಪ್ರದೇಶದಿಂದ ನದಿಗಳ ಮೂಲಕ ಸಮುದ್ರಕ್ಕೆ ಸೇರುತ್ತಿವೆ. ಪ್ರವಾಸಿಗರಿಂದ ಸಮುದ್ರಕ್ಕೆ ಸೇರುವ ಕಸದ ಪ್ರಮಾಣ ಶೇ.5ರಿಂದ 6ರಷ್ಟು ಮಾತ್ರವಿದೆ. ನೈಸರ್ಗಿಕವಾಗಿ ಕೊಳೆದುಹೋಗದ ಎಲ್ಲಾ ಪ್ಲಾಸ್ಟಿಕ್ ವಸ್ತುಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ್ದು, ಪ್ರತೀದಿನ ಸಾಯಂಕಾಲ 4 ಗಂಟೆಗೆ ಪ್ಲಾಸ್ಟಿಕ್ ನಿಷೇಧ ಅನುಷ್ಠಾನದ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ. 51 ಮೈಕ್ರೋಗೇಜ್‌ಗಿಂತ ಕಡಿಮೆಯಿಲ್ಲದ ಪ್ಲಾಸ್ಟಿಕ್ ಕವರ್ ಮೇಲೆ ಉತ್ಪಾದಕರ ವಿಳಾಸ ಮತ್ತು ಪರವಾನಗಿ ಸಂಖ್ಯೆ ದಾಖಲಿಸುವುದು ಕಡ್ಡಾಯವಾಗಿದೆ. ಬೇಕರಿ ಅಥವಾ ಅಂಗಡಿಗಳಲ್ಲಿ ಇಂಥ ಪ್ಲಾಸ್ಟಿಕ್‌ನಲ್ಲಿ ಪದಾರ್ಥಗಳನ್ನು ಹಾಕಿ ಸೀಲ್ ಮಾಡಿ ಮಾರಾಟ ಮಾಡಬಹುದು ಎಂದು ಹೇಳಿದರು.
ಸಭೆಯಲ್ಲಿ ಪೌರಾಯುಕ್ತ ಡಾ. ಉದಯ್ ಶೆಟ್ಟಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಉಪಸ್ಥಿರಿದ್ದರು.