

ಮುಂದುವರಿದ ಭಾಗ...
ಈ ನೀಲಗಿರಿ ಮರಗಳನ್ನು ಬೇರುಸಹಿತ ನಿರ್ಮೂಲನೆ ಮಾಡಿ ಆ ಸ್ಥಳಗಳಲ್ಲಿ ಹಲವಾರು ಬಗೆಯ ಹಣ್ಣು-ಹಂಪಲು ನೀಡುವ ದೇಸಿ ಮರಗಳನ್ನು ಪೋಷಿಸಿ ಭೂಮಿ ತಂಪಾಗುವಂತೆ ಮಾಡುವ ಅಗತ್ಯತೆ ಇದೆ. ಹಾಗೆ ಮಾಡಿದಲ್ಲಿ, ಕೆಲವು ವರ್ಷಗಳ ನಂತರ, ಭೂಮಿ ಫಲವತ್ತಾಗಿ, ಹುಳ, ಹುಪ್ಪಟೆ, ಪ್ರಾಣಿ-ಪಕ್ಷಿಗಳು ಮತ್ತು ಇನ್ನಿತರ ಎಲ್ಲ ಜೀವಿಗಳು ಬದುಕಿ, ಭೂಮಿಯ ಒಡಲಲ್ಲಿ ನೀರು ನಿಂತಾಗ ಪರಿಸರ ಸಂರಕ್ಷಣೆಯಾಗಲಿದೆ.
ಈ ಭೂಮಿಯಲ್ಲಿ ಪ್ರತಿಯೊಂದು ಜೀವಿಯೂ ಒಂದನ್ನು ಪಡೆಯಬೇಕೆಂದರೆ, ಇನ್ನೊಂದನ್ನು ಕೊಟ್ಟು ಪಡೆದು, ಪರಸ್ಪರಾವಲಂಬನೆಯಿಂದ ಬದುಕುವುದು ಪ್ರಕೃತಿಯ ನಿಯಮ. ಅದೇ ರೀತಿ ನಾವೂ ಕೂಡ ಆಮ್ಲಜನಕ, ಊಟದ ಮೂಲಕ ಪ್ರೊಟೀನ್ ಇತರ ಪೋಷಕಾಂಶಗಳನ್ನೂ ಸಸ್ಯಗಳಿಂದ ತೆಗೆದುಕೊಳ್ಳುತ್ತೇವೆ. ನಾವುಗಳು ಬದುಕುತ್ತಿರುವುದೇ ಸಸ್ಯಗಳಿಂದ. ಆದ್ದರಿಂದ ನಾವು ಪ್ರಕೃತಿಗೆ ವಾಪಾಸ್ ಕೊಡಬೇಕಾದ ಸಾಲವಿದೆ.
ಇಂದಿನ ಮಕ್ಕಳು ಹುಟ್ಟುಹಬ್ಬದಂದು ಪಾಶ್ಚಿಮಾತ್ಯ ರೀತಿಯಲ್ಲಿ ಕೇಕ್ ಕತ್ತರಿಸುವುದರ ಜತೆಗೆ ಒಂದು ಸಸಿ ನೆಟ್ಟು ಪೋಷಿಸಿ ಬೆಳೆಸುವ ಅಭ್ಯಾಸ ಮಾಡಿಕೊಳ್ಳಬಹುದು. ಸಾರ್ವಜನಿಕರು ಬೀಗರ ಊಟದ ಸಮಯದಲ್ಲಿ ಮದುವೆಯ ನೆನಪಿಗಾಗಿ ಹಣ್ಣುಬಿಡುವ ಕೆಲವು ಸಸಿಗಳನ್ನು ನೆಡಬಹುದು. ಹಿರಿಯರು ತಮ್ಮ ಷಷ್ಠಿಪೂರ್ತಿ, ಮದುವೆಯ ಇಪ್ಪತ್ತೈದನೆಯ ಅಥವಾ ಐವತ್ತನೆಯ ವರ್ಷಪೂರ್ತಿ ಕಾರ್ಯಕ್ರಮದಲ್ಲಿ ಸಮಾರಂಭದ ಜತೆಗೆ ವರ್ಷಪೂರ್ತಿಗೆ ಸಮನಾಗಿ ಅಥವಾ ಎಷ್ಟು ಆಗುತ್ತೋ ಅಷ್ಟು ಸಸಿಗಳನ್ನು ನೆಟ್ಟು ಪೋಷಿಸಿದರೆ, ಅವುಗಳು ಮುಂದಿನ ನೂರಿನ್ನೂರು ವರ್ಷ ಬಾಳಿ, ತಮ್ಮ ಊರಿನ ಪ್ರಾಣಿ- ಪಕ್ಷಿಗಳಿಗೆ ಆಹಾರ ನೀಡುತ್ತವೆ. ಇಂತಹ ಕಾರ್ಯಕ್ಕೆ ವಿದ್ಯಾರ್ಥಿಗಳು ಪಾಲಕರನ್ನು ಪ್ರೇರೇಪಿಸಬೇಕು. ಗಿಡ ನೆಡುವುದು ಕರ್ತವ್ಯವೇ ಹೊರತು ಸೇವೆಯಲ್ಲ.