ಕಠಿಣ ಸ್ಕ್ರಬ್, ಪೀಲ್-ಆಫ್ ಮಾಸ್ಕ್ಗಳಿಂದ ಚರ್ಮಕ್ಕೆ ಕಿರಿಕಿರಿ
ಉರಿಯೂತದ ಬಳಿಕ ಕಪ್ಪು ಕಲೆಗಳು ಕಾಣಿಸಿಕೊಳ್ಳಬಹುದು
ಎಎಚ್‌ಎ, ಬಿಎಚ್‌ಎ ಬಳಸುವಾಗ ಸೂಚನೆ ಪಾಲಿಸಿ
DIY Skincare: ಮುಖದ ಕಪ್ಪು ಕಲೆ, ಪಿಗ್ಮೆಂಟೇಶನ್ ಕಡಿಮೆ ಮಾಡಿಕೊಳ್ಳಲು ಹಲವರು ಮನೆಯಲ್ಲೇ ಸ್ಕ್ರಬ್, ಪೀಲ್-ಆಫ್ ಮಾಸ್ಕ್ ಸೇರಿದಂತೆ ಹಲವು ಡಿಐವೈ(DIY) ವಿಧಾನಗಳನ್ನು ಟ್ರೈ ಮಾಡ್ತಾರೆ. ಆದರೆ ಇದು ಎಲ್ಲರ ಚರ್ಮಕ್ಕೂ ಸೂಟ್ ಆಗಲ್ಲ. ತಪ್ಪಾದ ಉತ್ಪನ್ನ ಅಥವಾ ಅತಿಯಾದ ಬಳಕೆಯಿಂದ ಚರ್ಮದ ನೈಸರ್ಗಿಕ ರಕ್ಷಣಾ ಪದರಕ್ಕೆ ಹಾನಿಯಾಗಬಹುದು.
ಚರ್ಮದ ಮೇಲಿನ ಸ್ಕಿನ್ ಬ್ಯಾರಿಯರ್ ತೇವಾಂಶ ಕಾಪಾಡುವುದರ ಜೊತೆಗೆ ಹೊರಗಿನ ಕಿರಿಕಿರಿಯಿಂದ ಚರ್ಮವನ್ನು ರಕ್ಷಿಸುತ್ತದೆ. ಕಠಿಣ ಸ್ಕ್ರಬ್ ಅಥವಾ ಪದೇಪದೇ ಪೀಲ್-ಆಫ್ ಮಾಸ್ಕ್ ಬಳಸಿದರೆ ಒಣತನ, ಕೆಂಪಾಗುವಿಕೆ, ಉರಿ ಮತ್ತು ಸೂಕ್ಷ್ಮತೆ ಹೆಚ್ಚಾಗಬಹುದು.
ಚರ್ಮದಲ್ಲಿ ಮೆಲನಿನ್ ಹೆಚ್ಚಾದಾಗ ಕೆಲವು ಭಾಗಗಳು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ. ಇದನ್ನೇ ಹೈಪರ್‌ಪಿಗ್ಮೆಂಟೇಶನ್ ಅಂತ ಕರೀತಾರೆ. ಚರ್ಮಕ್ಕೆ ಉರಿಯೂತ ಅಥವಾ ಸಣ್ಣ ಗಾಯವಾದ ಬಳಿಕವೂ ಕಪ್ಪು ಕಲೆಗಳು ಕಾಣಿಸಿಕೊಳ್ಳಬಹುದು.
ಎಎಚ್‌ಎ, ಬಿಎಚ್‌ಎ ಇರುವ ಎಕ್ಸ್‌ಫೋಲಿಯೇಟಿಂಗ್ ಆ್ಯಸಿಡ್‌ಗಳು ಕೆಲವು ಚರ್ಮದ ಸಮಸ್ಯೆಗಳಿಗೆ ಸಹಾಯ ಮಾಡಬಹುದು. ಆದರೆ ಹೆಚ್ಚು ಪ್ರಮಾಣದಲ್ಲಿ ಅಥವಾ ಪದೇಪದೇ ಬಳಸಿದರೆ ಕಿರಿಕಿರಿ ಉಂಟಾಗಬಹುದು. ಉತ್ಪನ್ನದ ಬಳಕೆ ಸೂಚನೆ ಪಾಲಿಸಿ. ಉರಿ, ಕೆಂಪಾಗುವಿಕೆ ಅಥವಾ ಅತಿಯಾದ ಒಣತನ ಕಂಡುಬಂದರೆ ತಜ್ಞರ ಸಲಹೆ ಪಡೆಯಿರಿ.
ಪಿಗ್ಮೆಂಟೇಶನ್ ಇದ್ದವರು ಸೂರ್ಯನ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಬೇಕು. ಎಸ್‌ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿನ ಸನ್‌ಸ್ಕ್ರೀನ್ ಬಳಸುವುದು ಸಹಾಯಕ. ಹೊರಗೆ ಹೋಗುವಾಗ ಟೋಪಿ, ನೆರಳು ಸೇರಿದಂತೆ ಇತರ ಸೂರ್ಯರಕ್ಷಣೆ ಕ್ರಮಗಳನ್ನೂ ಪಾಲಿಸಬಹುದು.
ಚರ್ಮವನ್ನು ಪದೇಪದೇ ಅಥವಾ ಕಠಿಣವಾಗಿ ಸ್ಕ್ರಬ್ ಮಾಡಬೇಡಿ. ಮೃದುವಾದ ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್ ಬಳಸಿ. ಸೆರಮೈಡ್‌ಗಳಿರುವ ಮಾಯಿಶ್ಚರೈಸರ್ ಸ್ಕಿನ್ ಬ್ಯಾರಿಯರ್‌ಗೆ ಬೆಂಬಲ ನೀಡಬಹುದು.
ಪಿಗ್ಮೆಂಟೇಶನ್‌ಗಾಗಿ ಆಲ್ಫಾ ಅರ್ಬುಟಿನ್, ಅಜೆಲಾಯಿಕ್ ಆಸಿಡ್, ಕೊಜಿಕ್ ಆಸಿಡ್ ಅಥವಾ ಟ್ರಾನೆಕ್ಸಾಮಿಕ್ ಆಸಿಡ್ ಇರುವ ಉತ್ಪನ್ನಗಳನ್ನು ಬಳಸಬಹುದು. ಆದರೆ ನಿಮ್ಮ ಚರ್ಮಕ್ಕೆ ಯಾವುದು ಸೂಕ್ತ ಅನ್ನೋದನ್ನು ತಜ್ಞರ ಸಲಹೆಯೊಂದಿಗೆ ನಿರ್ಧರಿಸುವುದು ಉತ್ತಮ.
ಮನೆಯಲ್ಲೇ ನಿಂಬೆ ರಸ, ಕಠಿಣ ಸ್ಕ್ರಬ್ ಅಥವಾ ಹಲವು ಆ್ಯಸಿಡ್ ಉತ್ಪನ್ನಗಳನ್ನು ಒಟ್ಟಿಗೆ ಬಳಸಬೇಡಿ. ಇದರಿಂದ ಚರ್ಮಕ್ಕೆ ಮತ್ತಷ್ಟು ಕಿರಿಕಿರಿ ಆಗಬಹುದು.
ಕಪ್ಪು ಕಲೆಗಳು ಹೆಚ್ಚಾಗುತ್ತಿದ್ದರೆ, ತುರಿಕೆ ಅಥವಾ ಉರಿ ಇದ್ದರೆ ಅಥವಾ ಕಾರಣ ಗೊತ್ತಾಗದಿದ್ದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸುವುದು ಉತ್ತಮ.