

ಬೆಂಗಳೂರು: ಸರ್ಕಾರದ ಹೆಸರಿನಲ್ಲಿ ನಕಲಿ ಆದೇಶಗಳ ಹಾವಳಿ ಹೆಚ್ಚಾಗಿದೆ. ಅಧಿಕಾರಿಗಳ ಹೆಸರಿನಲ್ಲಿ ನಕಲಿ ಆದೇಶ ಪತ್ರಗಳು ಹರಿದಾಡುತ್ತಿದ್ದು ಇದರಿಂದ ಭಾರೀ ಸಮಸ್ಯೆಯಾಗಿದೆ. ಸದ್ಯ ವಿಧಾನಸೌಧ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಒಳ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವ ಸಂಬಂಧ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ ಲೆಟರ್ ಹೆಡ್‌ನಲ್ಲಿ ನಕಲಿ ಆದೇಶ ಪತ್ರ ಸೃಷ್ಟಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ಕಳುಹಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ನಕಲಿ ಆದೇಶ ಪ್ರತಿಯ ವಿಚಾರ ಗೊತ್ತಾದ ಕೂಡಲೇ ಹೆಚ್ಚುವರಿ ಮುಖ್ಯ ಕಾರ್ಯರ್ದರ್ಶಿಯವರ ಆಪ್ತ ಕಾರ್ಯದರ್ಶಿ ಸಿದ್ದೇಶ ಪೋತಲಕಟ್ಟಿ ಅವರು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ.
ಮಾ.೧೬ರಂದು ಹೊರಡಿಸಲಾಗಿರುವ ನಕಲಿ ಆದೇಶ ಪತ್ರದಲ್ಲಿ ಎನ್‌ಎಚ್‌ಎಂ ನೌಕರರನ್ನು ಅಗತ್ಯ ಮತ್ತು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೇವೆ ಕಾಯಂಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಪ್ರಸ್ತಾವನೆ ಹಾಗೂ ಅನುಮೋದನೆ ಪಡೆದು ಕಡತ ಮಂಡಿಸಲು ಆದೇಶಿಸಲಾಗಿದೆ ಎಂಬ ಟಿಪ್ಪಣಿ ಬರೆಯಲಾಗಿತ್ತು. ಜತೆಗೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಸಹಿಯನ್ನೂ ಮಾಡಲಾಗಿತ್ತು. ಇದೇ ಆದೇಶ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್ಥಿಕ ಇಲಾಖೆ, ಕಾನೂನು ಇಲಾಖೆಗಳಿಗೂ ರವಾನಿಸಲಾಗಿದೆ.
ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತ ಸಿದ್ದೇಶ ಪೋತಲಕಟ್ಟಿ ಅವರು, ಆದೇಶ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಬೇರೆ ಯಾವ ಯಾವ ಇಲಾಖೆಗಳಿಗೆ ಈ ಆದೇಶ ರವಾನೆಯಾಗಿದೆ ಎಂಬುದನ್ನು ಪರಿಶೀಲಿಸಿ ಮಾ.೨೫ರಂದು ದೂರು ನೀಡಿದ್ದಾರೆ.
ಎನ್‌ಎಚ್‌ಎಂ ನೌಕರರು ಸಂತಸಗೊಂಡಿದ್ದರು:
ರಾಜ್ಯದಲ್ಲಿ ಎನ್‌ಎಚ್‌ಎಂ ಅಡಿಯಲ್ಲಿ ವೈದ್ಯರು ಸೇರಿ ೨೭ ಸಾವಿರ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವೆ ಕಾಯಂಗೊಳಿಸುವ ಕುರಿತ ಆದೇಶವು ದಶಕಗಳ ಕಾಲದಿಂದ ಹೋರಾಟ ನಡೆಸುತ್ತಿರುವ ಎನ್‌ಎಚ್‌ಎಂ ನೌಕರರ ವಲಯದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೇ ಸೇವೆ ಕಾಯಂಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆಯೆಂದು ಭಾವಿಸಿ ಸಂತಸಗೊಂಡಿದ್ದರು. ಆದರೆ, ಇದು ನಕಲಿ ಎಂಬುದು ಗೊತ್ತಾದ ಬಳಿಕ ನಿರಾಶರಾದರು. ನೌಕರರ ಬೆಂಬಲ ಹಾಗೂ ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ದುಷ್ಕರ್ಮಿಗಳು ನಕಲಿ ಆದೇಶ ಪ್ರತಿ ಸೃಷ್ಟಿಸಿರುವ ಶಂಕೆ ಇದೆ ಎನ್ನಲಾಗುತ್ತಿದೆ.
ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿ:
ಮತ್ತೊಂದು ಪ್ರಕರಣದಲ್ಲಿ ವಕ್ಪ ಬೋರ್ಡ್ ಕಾರ್ಯದರ್ಶಿ ಹೆಸರಿನಲ್ಲಿ ಕಾಂಟ್ರಾಕ್ಟ್ ಪಡೆದ ಆದೇಶ ಪ್ರತಿ ಹೊರಡಿಸಿ ಹಣ ಮಾಡಲು ಹೊರಟಿರುವುದು ಪತ್ತೆಯಾಗಿದೆ.
ನಕಲಿ ಸರ್ಕಾರಿ ಆದೇಶ ಸೃಷ್ಟಿ ಮಾಡಿ ಕಾಂಟ್ರಾಕ್ಟ್ ಪಡೆಯಲು ಆರೋಪಿಗಳು ಯತ್ನಿಸಿದ್ದಾರೆ. ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ಕಲ್ಯಾಣ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ದೊಡ್ಡಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಕಾಲೋನಿ ಮೂಲ ಸೌಕರ್ಯಗಳ ಅಭಿವೃದ್ಧಿ ಹೆಸರಿನಲ್ಲಿ ನಕಲಿ ಆದೇಶ ಹೊರಡಿಸಲಾಗಿದೆ. ಬೋರ್ಡ್‌ನ ಕಾರ್ಯದರ್ಶಿ ನಾಗರಾಜ್ ಅವರ ಹೆಸರಿನಲ್ಲಿ ನಕಲಿ ಆದೇಶ ಹೊರಡಿಸಲಾಗಿದ್ದು ನಕಲಿ ಆದೇಶದಲ್ಲಿ ನಾಲ್ಕು ಕೋಟಿ ರೂ.ಕಾಂಟ್ರಾಕ್ಟ್ ನೀಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ನಕಲಿ ಆದೇಶವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದ್ದ ನಕಲಿ ಕಾಂಟ್ರಾಕ್ಟರ್ ವಿರುದ್ಧ ನಾಗರಾಜ್ ಅವರು ದೂರು ನೀಡಿದ್ದಾರೆ. ಸದ್ಯ ಈ ಎರಡು ಪ್ರಕರಣಗಳನ್ನು ವಿಧಾನಸೌದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.