

ಬೆಂಗಳೂರು: ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳಿಗಾಗಿ ಸಾಫ್ಟ್ವೇರ್ ಅಭಿವೃದ್ಧಿ, ಸ್ಟಾರ್ಟಪ್ ಗುರಿ ಹೊಂದಿದವರಿಗೆ ದಾವಣಗೆರೆಯಲ್ಲಿ ಕೋರ್ ಸಿಸ್ಟಂ ಆರಂಭ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು (ವಿಟಿಯು) ಗ್ಲೋಬಲ್ ಕ್ಯಾಂಪಸ್ ಆಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಾಗಿದೆ ಎಂದು ವಿಟಿಯು ಕುಲಪತಿ ಡಾ.ಎಸ್. ವಿದ್ಯಾಶಂಕರ್ ಮಾಹಿತಿ ನೀಡಿದ್ದಾರೆ. ಅವರು ಶುಕ್ರವಾರ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಗೊಂದಲಗಳನ್ನು ಪರಿಹರಿಸುವ ಜತೆಗೆ ವಿವಿಯ ದೂರದೃಷ್ಟಿ ಯೋಜನೆಗಳ ಕುರಿತು ವಿಸ್ತ್ರತವಾಗಿ ತಿಳಿಸಿದರು.
ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ಹೊರತುಪಡಿಸಿ ಉಳಿದವುಗಳಲ್ಲಿ ಪ್ಲೇಸ್ವೆುಂಟ್ ಸಮಸ್ಯೆ ಇದೆ. ಈ ಸಮಸ್ಯೆ ಬಗ್ಗೆ ರಾಯಚೂರಿನ ಸುನೀಲ್, ಹಾವೇರಿಯ ಬಸವರಾಜ ಎಂಬುವವರು ಪ್ರಶ್ನಿಸಿದರು. ತಮ್ಮ ಮಕ್ಕಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಪ್ಲೇಸ್ವೆುಂಟ್ ಸಮಸ್ಯೆ ಎದುರಿಸುತ್ತಿರುವುದನ್ನು ವಿವರಿಸಿದರು. ಮುಂದಿನ 15-20 ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪ್ಲೇಸ್ವೆುಂಟ್ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ವಿವಿಧ ಕೈಗಾರಿಕೋದ್ಯಮಿಗಳೊಂದಿಗೆ ರ್ಚಚಿಸಲಾಗಿದೆ ಎಂದು ವಿದ್ಯಾಶಂಕರ್ ಉತ್ತರಿಸಿದರು.
ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್, ಸಿವಿಲ್ ಮತ್ತು ಮೆಕಾನಿಕಲ್ ಹೀಗೆ ಯಾವುದೇ ಕೋರ್ಸ್ ಮಾಡಿದ್ದರೂ ಉದ್ಯೋಗ ದೊರೆಯಲಿದೆ. ಕೇವಲ ಕಂಪ್ಯೂಟರ್ ಸೈನ್ಸ್ ಓದಿದರೆ ಕೆಲಸ ಸಿಗಲಿದೆ ಎಂಬ ಭ್ರಮೆಯಿಂದ ವಿದ್ಯಾರ್ಥಿಗಳು ಮತ್ತು ಪಾಲಕರು ಹೊರಬರಬೇಕು ಎಂದು ಸ್ಪಷ್ಟಪಡಿಸಿದರು. ಪ್ರತಿಭೆ ಮತ್ತು ಕೌಶಲವಿದ್ದರೆ ಉದ್ಯೋಗ ಖಂಡಿತವಾಗಿಯೂ ಸಿಗುತ್ತದೆ. ಈ ಬಗ್ಗೆ ಅನುಮಾನ ಬೇಡ. ಇದಕ್ಕೆ ಉದಾಹರಣೆ ಇತ್ತೀಚೆಗೆ ನಡೆಸಿದ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಸರ್ಕಾರಿ ಕಾಲೇಜಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವಾರ್ಷಿಕ 90 ಲಕ್ಷ ರೂ.ವರೆಗೆ ವೇತನದ ಪ್ಯಾಕೇಜ್ ಪಡೆದಿದ್ದಾರೆ ಎಂದು ತಿಳಿಸಿದರು.
ವಿಟಿಯುನಲ್ಲಿ ಮೆಡಿಕಲ್ ಕಾಲೇಜು: ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ವಿಶ್ವವಿದ್ಯಾಲಯಗಳು ಬಹುಶಿಸ್ತೀಯ ವಿವಿಗಳಾಗಿ ಕಾರ್ಯ ನಿರ್ವಹಿಸಬೇಕಿದೆ. ಹೀಗಾಗಿ ವಿಟಿಯು ಅನ್ನು ಬಹುಶಿಸ್ತೀಯ ವಿಶ್ವವಿದ್ಯಾಲಯ ಮತ್ತು ಗ್ಲೋಬಲ್ ಕ್ಯಾಂಪಸ್ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಸಂಶೋಧನಾ ವಿವಿ ವಿಭಾಗದಲ್ಲಿ ‘ಸಂಶೋಧನಾ ವಿಜ್ಞಾನ’ವನ್ನು ಆರಂಭಿಸುತ್ತಿದ್ದಾರೆ. ಅದೇ ರೀತಿಯಲ್ಲಿ ವಿಟಿಯು ಕೂಡ ಹಿಂದೆ ಬೀಳದೆ ಮೆಡಿಕಲ್ ಕಾಲೇಜು ಆರಂಭಿಸುವ ಗುರಿ ಹೊಂದಿದ್ದೇವೆ. ವಿವಿ ಕಾಯ್ದೆಯಲ್ಲಿ ಕೆಲ ತಿದ್ದುಪಡಿಗಳನ್ನು ಮಾಡಿದ ನಂತರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಿಸುತ್ತೇವೆ. ಇಂಜಿನಿಯರಿಂಗ್ ಮಾತ್ರವಲ್ಲ, ವೈದ್ಯಕೀಯ, ಕಲೆ, ವಿಜ್ಞಾನ, ವಾಣಿಜ್ಯ, ಫಾರ್ಮಸಿ ಹೀಗೆ ಹತ್ತಾರು ವಿಷಯಗಳನ್ನು ಬೋಧಿಸುವ ವಿವಿಯಾಗಬೇಕು ಎಂದರು.