ಚೀನಾ ಸೈನಿಕರದ್ದು ಪೈಶಾಚಿಕ ಕೃತ್ಯ; ಗಾಯಾಳು ಭಾರತ ಯೋಧರು ತೆರೆದಿಟ್ಟ ಸತ್ಯ

Galwan valley
Published on

ನವದೆಹಲಿ: ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಸೈನಿಕರ ಮೊಂಡುತನಕ್ಕೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ಯೋಧರ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ. ಗಾಯಾಳು ಭಾರತೀಯ ಯೋಧರು ಚೀನಿಯರ ಕ್ರೌರ್ಯವನ್ನು ಬಯಲು ಮಾಡಿದ್ದಾರೆ. ಎಂಟು ತಾಸಿಗೂ ಅಧಿಕ ಹೊತ್ತು ದಾಳಿ- ಪ್ರತಿ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿತ್ತು. ಜೂನ್​ 6ರಂದು ನಡೆದಿದ್ದ ಮಾತುಕತೆ ಪ್ರಕಾರ, ಚೀನಾದ ಸೈನಿಕರು ತಾವಿದ್ದ ಸ್ಥಳ ತೆರಳಿ ಹಿಂದಕ್ಕೆ ಹೋಗಬೇಕಿತ್ತು. ಆದರೆ, ಇದಕ್ಕೆ ಚೀನಿಯರು ಒಪ್ಪಿರಲಿಲ್ಲ.

ಗಾಲ್ವಾನ್​ ಪ್ರದೇಶದ ಪೆಟ್ರೋಲಿಂಗ್​ ಪಾಯಿಂಟ್​ 14ರ ( ಗಸ್ತು ತಾಣ) ಬಳಿ ಚೀನಾ ಟೆಂಟ್​ ತೆರವು ಮಾಡಿರಲಿಲ್ಲ. ಹಿರಿಯ ಅಧಿಕಾರಿಗಳು ಬಿಹಾರ್​ ರೆಜಿಮೆಂಟ್​ನ ಕರ್ನಲ್​ ಸಂತೋಷ್ ಬಾಬು ತಂಡಕ್ಕೆ ಆ ಟೆಂಟ್​ ತೆರವುಗೊಳಿಸುವ ಜವಾಬ್ದಾರಿ ವಹಿಸಿದ್ದರು. ಅದರಂತೆ ಸ್ಥಳಕ್ಕೆ ತೆರಳಿದ ತಂಡ ಟೆಂಟ್​ ತೆರವುಗೊಳಿಸಲು ಮುಂದಾಯಿತು. ಇದಕ್ಕೆ ಚೀನಿ ಸೈನಿಕರು ಪ್ರತಿರೋಧ ಒಡ್ಡಿದಾಗ ಅದಕ್ಕೆ ಬೆಂಕಿ ಹಚ್ಚಿ ನಾಶಪಡಿಸಲಾಯಿತು. ಈ ಘಟನೆ ನಡೆದಿದ್ದು ಭಾನುವಾರ. ಇದಾಗುತ್ತಿದ್ದಂತೆ ಚೀನಿಯರು ಕಲ್ಲು ತೂರಾಟದಲ್ಲಿ ತೊಡಗಿದ್ದಾರೆ. ಸೋಮವಾರ ರಾತ್ರಿ ಗುಂಪುಗುಂಪಾಗಿ ಬಂದು ನಿರಾಯುಧರಾಗಿದ್ದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದಾರೆ.

ಕಬ್ಬಿಣದ ಸರಳು, ಮುಳ್ಳುತಂತಿ ಸುತ್ತಿದ್ದ ಬಡಿಗೆಗಳನ್ನು ಹಿಡಿದು ಚೀನಿಯರು ದಾಳಿ ನಡೆಸಿದ್ದಾರೆ. ಭಾರತೀಯ ಯೋಧರು ತಪ್ಪಿಸಿಕೊಳ್ಳಲು ಯತ್ನಿಸಿದರೂ ಬೆನ್ನತ್ತಿ ಹೊಡೆದಿದ್ದಾರೆ. ಕೆಲವರು ಸರೋವರಕ್ಕೆ ಧುಮುಕಿ ಪಾರಾಗಲು ಯತ್ನಿಸಿದರೂ ಬಿಟ್ಟಿಲ್ಲ ಎಂದು ಗಾಯಾಳು ಯೋಧರು ತಿಳಿಸಿದ್ದಾರೆ.

ಘಟನೆಯಲ್ಲಿ 110ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದು, ಲೇಹ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 10ಕ್ಕೂ ಅಧಿಕ ಯೋಧರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮಾತುಕತೆ ಬಳಿಕವೂ ಚೀನಿಯರು ಆಕ್ರಮಿತ ಸ್ಥಳದಿಂದ ಏಕೆ ಹಿಂದೆ ಸರಿಯಲಿಲ್ಲ ಎಂಬುದು ನಿಗೂಢವಾಗಿದೆ. ದಾಳಿಗೆ ಸಂಚು ರೂಪಿಸಿ ಕೃತ್ಯ ಎಸಗಿದ್ದಾರೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net