

ಯೋಗಾಯೋಗದಿಂದ ನಂತರ ಅವರದೇ ಜನತಾ ಪಕ್ಷ ಸೇರಿದೆ. 1983ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಹಳಿಯಾಳದಿಂದ ಮೊದಲ ಬಾರಿ ಆಯ್ಕೆಯಾದೆ. 1985ರಲ್ಲಿ ಮರಳಿ ಆಯ್ಕೆಯಾದೆ. ಆಗ ಮುಖ್ಯಮಂತ್ರಿಗಳಾಗಿದ್ದ ಹೆಗಡೆಯವರೇ ನನ್ನನ್ನು ಸಚಿವನನ್ನಾಗಿಸಿದರು. ಪ್ರಮಾಣವಚನ ಸಮಾರಂಭದಲ್ಲಿ ನನ್ನನ್ನು ಅಂದಿನ ರಾಜ್ಯಪಾಲ ಅಶೋಕನಾಥ್ ಬ್ಯಾನರ್ಜಿಯವರಿಗೆ ಪರಿಚಯಿಸುತ್ತ, ‘ಇದೇ ವ್ಯಕ್ತಿ ನನ್ನನ್ನು 1977ರಲ್ಲಿ ಸೋಲಿಸಿದ್ದು. ಇಲ್ಲವಾದರೆ ಆಗ ಕೇಂದ್ರ ಹಣಕಾಸು ಸಚಿವನಾಗುತ್ತಿದ್ದೆ’ ಎಂದು ಮುಗುಳ್ನಗುತ್ತಲೇ ಹೇಳಿದ್ದರು. ಹೆಗಡೆಯವರ ಉದಾರತೆಯ ಮುಂದೆ ಆಗ ತುಂಬ ಮುಜುಗರ ಅನುಭವಿಸಿದೆ. ಏಕೆಂದರೆ ಅವರಲ್ಲಿ ಕಿಂಚಿತ್ತೂ ಸೇಡಿನ ಭಾವನೆ ಇರಲಿಲ್ಲ. ಹಿಂದಿನ ಸೋಲಿನ ವಿಷಾದ ಇರಲಿಲ್ಲ. ಈ ಒಂದು ಮಾತಿನಿಂದ ಅವರು ನನ್ನನ್ನು ಒಂದು ಅರ್ಥದಲ್ಲಿ ಸೋಲಿಸಿಬಿಟ್ಟಿದ್ದರು. ಹೀಗೆ ಅವರು ತಮ್ಮ ಮಾತುಗಳಿಂದ ಮತ್ತು ವ್ಯಕ್ತಿತ್ವದಿಂದ ಜನರ ಮನಸ್ಸನ್ನು ಗೆಲ್ಲುತ್ತಿದ್ದರು. ಜನರಲ್ಲಿ ಬೆರೆಯುವ ಹಾಗೂ ಜನರನ್ನು ಬೆಳೆಸುವ ಶಕ್ತಿ ಅವರಿಗೆ ಇತ್ತು. ಅವರ ಆಕರ್ಷಣೆಯ ವರ್ತಲದೊಳಗೆ ಬಂಧಿಯಾಗಿ ಹೋದೆ.
ಮುಂದಿನ ಎರಡು ದಶಕಗಳ ಕಾಲ ಅವರ ರಾಜಕೀಯ ಪಂಥದ ಅನುಯಾಯಿಯಾದೆ. ಅವರ ರಾಜಕೀಯ ಸುಖ- ದುಃಖಗಳೇ ನನ್ನ ಸುಖ-ದುಃಖಗಳಾಗಿ ಹೋದವು. ಅವರು ನನ್ನನ್ನು ಹತ್ತಿರ ಹತ್ತಿರ ತೆಗೆದುಕೊಳ್ಳುತ್ತ ಹೋದರು. ಜವಾಬ್ದಾರಿಗಳನ್ನು ನೀಡುತ್ತ ಹೋದರು. ನಾನು ತುಂಬ ಏರಿಳಿತಗಳಿಂದ ಕೂಡಿದ್ದ 1983ರಿಂದ 1999ರವರೆಗಿನ ರಾಷ್ಟ್ರೀಯ ಹಾಗೂ ರಾಜ್ಯದ ಹೆಗಡೆ ರಾಜಕೀಯದ ಭಾಗವೇ ಆಗಿಹೋದೆ. ಅವರು ನಮ್ಮ ಕೆಲವರ ಮೇಲೆ ಅಪಾರ ವಿಶ್ವಾಸವಿಟ್ಟರು. ನಾವು ಅವರಿಗೆ ಬೆಂಬಲದ ಆಧಾರಸ್ತಂಭಗಳಾಗಿ ನಿಂತೆವು. ಖಂಡಿತಕ್ಕೂ ಆ ಪುಣ್ಯಾತ್ಮ ನಮ್ಮನ್ನೆಲ್ಲ ರಾಜಕೀಯವಾಗಿ ಬೆಳೆಸಿದವರು. ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ನನ್ನ 35ನೇ ವಯಸ್ಸಿನಲ್ಲಿಯೇ ನನ್ನನ್ನು ಕ್ಯಾಬಿನೆಟ್ ದರ್ಜೆಯ ಸಚಿವನನ್ನಾಗಿಸಿ ಮಹತ್ವದ ಖಾತೆಗಳನ್ನು ನೀಡಿದರು. ಕರ್ನಾಟಕ ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕನನ್ನಾಗಿಸಿದರು. ಆಗ ಜತೆಯಾಗಿ ಇದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಹಾಗೂ ಜೆ.ಎಚ್.ಪಟೇಲ್ರವರು ಕೂಡ ನನ್ನ ಮೇಲೆ ತುಂಬ ವಿಶ್ವಾಸವಿಟ್ಟಿದ್ದರು. ಬೃಹತ್ ಕೈಗಾರಿಕೆಯಂತಹ ದೊಡ್ಡಖಾತೆಯನ್ನು ನೀಡಿ ರಾಜ್ಯಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದರು.
ಅದೊಂದು ಋಣಾನುಬಂಧ: 1996ರಲ್ಲಿ ಜನತಾದಳ ದಿಂದ ಉಚ್ಚಾಟಿಸಲ್ಪಟ್ಟು, ತೀವ್ರ ಮಾನಸಿಕ ನೋವಿನಿಂದ ಜರ್ಜರಿತರಾಗಿದ್ದ ರಾಮಕೃಷ್ಣ ಹೆಗಡೆಯವರ ಜತೆ ನಾನು ನಿಂತೆ. ಅವರು ಸೃಷ್ಟಿಸಿದ್ದ ‘ನವನಿರ್ವಣ ವೇದಿಕೆ’ ಸೇರಿ ಅದರ ಸಂಚಾಲಕನಾದೆ. ನನ್ನ ಮತ್ತು ರಾಮಕೃಷ್ಣ ಹೆಗಡೆಯವರ ನಡುವಿನ ಸಂಬಂಧ ಕೇವಲ ರಾಜಕೀಯದ್ದಾಗಿರಲಿಲ್ಲ. ಅದೊಂದು ಋಣಾನುಬಂಧ. ರಾಜಕೀಯವನ್ನು ಮೀರಿದ ಅನುಬಂಧ.
1996ರ ನಂತರದ ವರ್ಷಗಳಲ್ಲಿ ಕ್ರಮೇಣವಾಗಿ ನಾವಿಬ್ಬರೂ ರಾಜಕೀಯವಾಗಿ ವಿರುದ್ಧ ಧ್ರುವಗಳಲ್ಲಿ ಸಂಚರಿಸಬೇಕಾಗಿ ಬಂತು. ಅದು ನನಗೆ ರಾಜಕೀಯದಲ್ಲಿ ನೋವಿನ ಕಾಲ. ಅವರ ಬೆಂಬಲಿಗರೆಲ್ಲರಿಗೂ ರಾಜಕೀಯ ಸಂದಿಗ್ಧತೆಯ ಸಮಯ. ಏಕೆಂದರೆ 1996ರ ನಂತರ ಹೆಗಡೆಯವರು ರಾಜಕೀಯದಿಂದ ಬಳಲಿದಂತಿದ್ದರು. ಹೀಗೆ ಅವರ ಕಟ್ಟಾ ಬೆಂಬಲಿಗರಲ್ಲಿ ಹಲವರಿಗೆ ತಮ್ಮ ಪ್ರಾದೇಶಿಕ ಅನಿವಾರ್ಯತೆಗಳನ್ನು ಗಮನಿಸಿ ರಾಜಕೀಯ ಭವಿಷ್ಯ ಗುರುತಿಸಿಕೊಳ್ಳುವ ಅವಶ್ಯಕತೆ ಬಂತು. ಕ್ರಮೇಣವಾಗಿ ನಾನು ಕಾಂಗ್ರೆಸ್ಸಿಗೆ ಮರಳಿ ಹೋಗಬೇಕಾಯಿತು. ಆದರೆ ಹಾಗೆಯೇ ಹೋಗಲಿಲ್ಲ. ಹೆಗಡೆಯವರಿಗೆ ತಿಳಿಸಿ ಹೋದೆ. ಮತ್ತೆ ರಾಜಕೀಯವಾಗಿ ದೂರವಾದರೂ ನನ್ನ ಅವರ ಸಂಬಂಧ, ಆತ್ಮೀಯತೆ ನಶಿಸಿರಲಿಲ್ಲ. ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿ, ವಿದೇಶಗಳಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಅಷ್ಟು ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದರೂ ನಿಜಕ್ಕೂ ಅವರ ಬಳಿ ಹಣವಿರಲಿಲ್ಲ. ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ ಅವರನ್ನು ನೆನೆಯಬೇಕು. ಆಗ ಅವರು ಮುಂದೆ ಬಂದು ಹೆಗಡೆಯವರ ಚಿಕಿತ್ಸೆಯ ವೆಚ್ಚಗಳನ್ನು ಸರ್ಕಾರವೇ ಭರಿಸುವುದಾಗಿ ಹೇಳಿದರು. ಅದಕ್ಕಾಗಿ ಸಂಬಂಧಪಟ್ಟ ಪ್ರಸ್ತಾವನೆಯನ್ನು ಕ್ಯಾಬಿನೆಟ್ನಲ್ಲಿ ಮಂಡಿಸಿದೆ. ಚಿಕಿತ್ಸೆ ನೀಡಿದರೂ ಹೆಗಡೆಯವರು ಉಳಿಯಲಿಲ್ಲ. ಅವರ ಅಂತಿಮ ಸಂಸ್ಕಾರದಲ್ಲೂ ಭಾಗವಹಿಸಿದೆ.
ಮನುಷ್ಯನಾದವನು ಯಾರೂ ಪರಿಪೂರ್ಣನಾಗಲು ಸಾಧ್ಯವಿಲ್ಲ. ಹೆಗಡೆಯವರಲ್ಲಿಯೂ ಕೆಲವು ವಿರೋಧಾಭಾಸ, ಗೊಂದಲ, ಹೊಯ್ದಾಟಗಳಿದ್ದವು. ಮುಖ್ಯವಾಗಿ 1996ರ ನಂತರದ ಅವರ ರಾಜಕೀಯದಲ್ಲಿ. ಅವೆಲ್ಲವೂ ರಾಷ್ಟ್ರೀಯ ರಾಜಕಾರಣದಲ್ಲಿ, ವಿಶೇಷವಾಗಿ ಮರುಧ್ರುವೀಕರಣಗೊಳ್ಳುತ್ತಿದ್ದ ಅಗಿನ ದೇಶದ ರಾಜಕೀಯ ಸ್ಥಿತಿಯಲ್ಲಿ ಸಹಜ ಕೂಡ. ಆದರೂ, ಅವರೊಬ್ಬ ಶ್ರೇಷ್ಠ ನಾಯಕ ಮತ್ತು ಮಾನವೀಯತೆ ತುಂಬಿದ ವ್ಯಕ್ತಿ. ಚತುರ ರಾಜಕಾರಣಿ. ಮಾಸ್ಲೀಡರ್. ತುಂಬ ಶ್ರೇಷ್ಠಮಟ್ಟದ ಮಾನವ ಕೌಶಲಗಳು ಅವರಿಗೆ ಲಭಿಸಿದ್ದವು. ದೊಡ್ಡ ವ್ಯಕ್ತಿತ್ವ ಅವರದು. ನನ್ನ ಜೀವನವನ್ನು ಬಹುವಾಗಿ ಪ್ರಭಾವಿಸಿದ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಹಾಗೆಯೇ ಅವರು ತುಂಬ ಭಾವನಾತ್ಮಕ ವ್ಯಕ್ತಿಯಾಗಿದ್ದರು. ನಜೀರ್ ಸಾಬ್ ತೀರಿಕೊಂಡಾಗ ಅವರು ಅತ್ತು ಬಿಟ್ಟಿದ್ದರು. ಹಾಗೆಯೇ ಅವರ ರಾಜಕೀಯ ನಿರ್ಣಯಗಳಲ್ಲಿ ಭಾವನಾತ್ಮಕ ಅಂಶಗಳು ಮುಖ್ಯಪಾತ್ರ ವಹಿಸುತ್ತಿದ್ದವು.
ಹೆಗಡೆಯವರು ಇದ್ದಾಗ ಹಾಗೂ ನಂತರ ಕೂಡ ಅವರಿಗಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದೆ. ಅವರ ರಾಜಕೀಯದ ಬೆಳ್ಳಿಹಬ್ಬದ ಸಮಿತಿಗೆ ಅಧ್ಯಕ್ಷನಾಗಿದ್ದೆ. ಅವರು ಬಹಳ ಸರಳ ವ್ಯಕ್ತಿತ್ವದವರಾಗಿದ್ದು, ಅಂತಹುದೆಲ್ಲ ಬೇಡ ಎಂದು ಹೇಳಿಬಿಟ್ಟಿದ್ದರು. ನಂತರ ಆಗ್ರಹ ಮಾಡಿ ಅವರನ್ನು ಒಪ್ಪಿಸಿದ್ದೆವು. ಜೀವನವನ್ನು ತುಂಬ ಪ್ರೀತಿಸುತ್ತಿದ್ದ ಹೆಗಡೆಯವರಿಗೆ ಅದೇ ಸಮಯದಲ್ಲಿ ಬದುಕಿನ ಕುರಿತಾಗಿ ತೀವ್ರ ವಿರಕ್ತಿಯೂ ಇತ್ತು. ಅವರ ತಾಯಿ ವಿನೋಬಾ ಭಾವೆಯವರ ಆಶ್ರಮದಲ್ಲಿದ್ದರು. ರಾಮಕೃಷ್ಣ ಹೆಗಡೆಯವರು ಕೂಡ ಆ ಆಶ್ರಮದಲ್ಲಿ ಕೆಲವು ಕಾಲ ಸೇವೆ ಸಲ್ಲಿಸಿದ್ದರು. ಅವರು ಸರಳತೆಯ ಪಾಠಗಳನ್ನು ಕಲಿತದ್ದು ಅಲ್ಲಿ ಎಂದು ಕೇಳಿದ್ದೇನೆ. ನಂತರ ನಾವು ಹೆಗಡೆಯವರ ಸ್ಮರಣೆಯ ಸಂಪುಟಗಳನ್ನು ಹೊರತಂದೆವು. ಅವುಗಳ ಮೂಲಕ ಅವರ ನೆನಪನ್ನು ಶಾಶ್ವತವಾಗಿಸಲು ಪ್ರಯತ್ನಿಸಿದೆವು. ಅವರ ಕುರಿತಾಗಿ ಶಿವರಾಮ ಕಾರಂತ, ವಿ.ಕೃ.ಗೋಕಾಕರಂಥ ದಿಗ್ಗಜ ಸಾಹಿತಿಗಳಿಂದ ಅಭಿಪ್ರಾಯಗಳನ್ನು/ಲೇಖನಗಳನ್ನು ಬರೆಸಿದವು. ಅವರ ಜನ್ಮದಿನದಂದು ರಾಮಕೃಷ್ಣ ಹೆಗಡೆಯವರ ನೆನಪಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದೇವೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆಯವರ ಅಧ್ಯಯನ ಪೀಠವೊಂದನ್ನು ಆರಂಭಿಸಬೇಕೆಂದು ಪ್ರಯತ್ನಿಸುತ್ತಲೇ ಬಂದಿದ್ದೇನೆ. ಇಂದಿಗೂ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇದ್ದೇನೆ.
ಅಪ್ಪಟ ಧಾರ್ವಿುಕರಾಗಿದ್ದ ಹೆಗಡೆಯವರು ಎಲ್ಲ ಜಾತಿ, ಧರ್ಮಗಳಿಗೆ ಸೇರಿದ ವ್ಯಕ್ತಿಯಾಗಿದ್ದರು. ಎಲ್ಲ ಧರ್ಮಗಳ, ಜನಾಂಗಗಳ ಜೊತೆ ಸುಲಭವಾಗಿ ಬೆರೆಯಬಲ್ಲವರಾಗಿದ್ದರು. ಈ ದೃಷ್ಟಿಯಲ್ಲಿ ಹೆಗಡೆ ಒಂದು ಮಾದರಿಯಾಗಿದ್ದರು. ಅಭಿವೃದ್ಧಿ ಪರವಾದ, ಜಾತ್ಯತೀತವಾದ, ಜನಪರವಾದ, ರಾಜಕೀಯ ಸಂಸ್ಕೃತಿಯನ್ನು ಹುಟ್ಟುಹಾಕಲು ಪ್ರಯತ್ನಿಸಿದ ರಾಮಕೃಷ್ಣ ಹೆಗಡೆ ಅಪೂರ್ವ ವ್ಯಕ್ತಿತ್ವ ಹೊಂದಿದವರು.
(ಲೇಖಕರು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು)