ಕರೊನಾ ಮೃತರ ಸದ್ಗತಿಗೆ ಸಾಮೂಹಿಕ ಪಿಂಡ ಪ್ರದಾನ: ಸಚಿವ ಅಶೋಕ್ ನೇತೃತ್ವದಲ್ಲಿ ಇಂದು ಅಪರ ಕಾರ್ಯ

Apara
ಬೆಳಕವಾಡಿಯಲ್ಲಿ ಅಸ್ಥಿ ವಿಸರ್ಜಿಸಿದ್ದ ಸಚಿವ ಅಶೋಕ್.
Published on

ಬೆಂಗಳೂರು/ನವದೆಹಲಿ: ಕರೊನಾ ಸಾಂಕ್ರಾಮಿಕದಿಂದ ಮೃತರಾದ ವಾರಸುದಾರರಿಲ್ಲದ 1000ಕ್ಕೂ ಅಧಿಕ ಜನರ ಅಸ್ಥಿಯನ್ನು ಕಾವೇರಿಯಲ್ಲಿ ವಿಸರ್ಜನೆ ಮಾಡಿದ್ದ ಕಂದಾಯ ಸಚಿವ ಆರ್.ಅಶೋಕ್ ಇದೀಗ ಸಾಮೂಹಿಕ ಪಿಂಡ ಪ್ರದಾನಕ್ಕೆ ಮುಂದಾಗಿದ್ದಾರೆ. ಮೃತರ ಆತ್ಮಕ್ಕೆ ಸದ್ಗತಿ ದೊರಕಿಸಲು ಪಿತೃಪಕ್ಷದ ಸಂದರ್ಭದಲ್ಲಿ ಪಿಂಡ ಪ್ರದಾನ ಮಾಡಲಾಗುತ್ತಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿ ಘಾಟ್​ನಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ಧಾರ್ವಿುಕ ವಿಧಾನ ಹಮ್ಮಿಕೊಳ್ಳಲಾಗಿದೆ.

ಕೋವಿಡ್ ಎರಡನೇ ಅಲೆ ವೇಳೆ ಮೃತಪಟ್ಟವರ ಅಸ್ಥಿಗಳನ್ನು ಮೃತರ ಸಂಬಂಧಿಕರು ಪಡೆಯಲು ಮುಂದೆ ಬಾರದ ಹಿನ್ನೆಲೆಯಲ್ಲಿ ಸರ್ಕಾರದಿಂದಲೇ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಬಳಿಕ ಅವರ ಅಸ್ಥಿಯನ್ನು ಸಂಪ್ರದಾಯಬದ್ಧವಾಗಿ ಬೆಳಕವಾಡಿ ಕಾಶಿ ವಿಶ್ವನಾಥ ಸ್ವಾಮಿ ದೇವಸ್ಥಾನ ಬಳಿಯ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗಿತ್ತು. ಅಪರ ಕರ್ಮದಲ್ಲಿ ಸರ್ಕಾರದ ಪರವಾಗಿ ಸಚಿವರಾದ ಅಶೋಕ್, ಕೆ.ಸಿ. ನಾರಾಯಣ ಗೌಡ ಭಾಗಿಯಾಗಿದ್ದರು. ಜತೆಗೆ ಮಂಡ್ಯ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಪಾಲ್ಗೊಂಡಿದ್ದರು. ಈ ವೇಳೆ ಪುರೋಹಿತರಿಂದ ನಾರಾಯಣ ಬಲಿ, ಅಕಾಲ ಮರಣ ಪ್ರಾಯಶ್ಚಿತ್ತ, ತಿಲಹೋಮ, ಪಿಂಡ ಪ್ರದಾನ, ಅಸ್ಥಿ ನಾರಾಯಣ ಪೂಜೆ ನಡೆಸಿ ಅಸ್ಥಿ ವಿಸರ್ಜನೆ ಮಾಡಲಾಗಿತ್ತು.

ಇದೇ ಮೊದಲ ಬಾರಿಗೆ ದೇಶದಲ್ಲಿ ಸರ್ಕಾರದ ವತಿಯಿಂದ ಅಸ್ಥಿ ವಿಸರ್ಜನೆ ಮಾಡುತ್ತಿದ್ದೇವೆ. ಸತ್ತವರಿಗೆ ಗೌರವಯುತವಾಗಿ ಶವಸಂಸ್ಕಾರ ಮಾಡಲು ಸರ್ಕಾರ ಮುಂದಾಗಿದೆ. ಯಾರೂ ಅನಾಥರಲ್ಲ, ಬದುಕಿದ್ದಾಗ ಎಲ್ಲರೂ ಸಹ ಸಮಾಜಕ್ಕೆ ಕೆಲಸ ಮಾಡಿದ್ದಾರೆ. ನಮ್ಮ ರಾಜ್ಯ ಮಾನವೀಯತೆ ಮೆರೆದಂತಹ ರಾಜ್ಯವಾಗಿದೆ. ಈಗ ನಾವು ನಮ್ಮ ಕರ್ತವ್ಯ ಮಾಡಬೇಕು ಎಂದು ಹೇಳಿಕೊಂಡಿದ್ದ ಅಶೋಕ್, ಇದೀಗ ಪಿತೃಪಕ್ಷದಲ್ಲಿ ಪಿಂಡ ಪ್ರದಾನ ಮಾಡಿ ಮೃತರ ಆತ್ಮಕ್ಕೆ ಸದ್ಗತಿ ಕೋರುವ ಸಂಪ್ರದಾಯವನ್ನು ನೆರವೇರಿಸಲು ತೀರ್ವನಿಸಿದ್ದಾರೆ.

ಅಶೋಕ್ ಅಂದು ಕೈಗೊಂಡ ನಿರ್ಧಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಬಿಜೆಪಿ ವರಿಷ್ಠರು ಸಹ ಶ್ಲಾಘಿಸಿದ್ದರು. ಸೋಮವಾರ ನಡೆಯುವ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಜ್ಯೋತಿಷಿ ವೇದಬ್ರಹ್ಮ ಡಾ.ವಿ.ಭಾನುಪ್ರಕಾಶ್ ನೇತೃತ್ವದಲ್ಲಿ ರೂಪುರೇಷೆ ಸಿದ್ಧಪಡಿಸಿಕೊಂಡು ಧಾರ್ವಿುಕ ಕಾರ್ಯಗಳಿಗೆ ಅಣಿಯಾಗಿದ್ದಾರೆ. ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸಮ್ಮುಖದಲ್ಲಿ ಸಾಮೂಹಿಕವಾಗಿ ಪ್ರೇತಸಂಸ್ಕಾರ, ನಾರಾಯಣ ಬಲಿ ಬಳಿಕ ಎಡೆ ಪೂಜೆಗಳನ್ನು ನೆರವೇರಿಸಿ ತಿಲತರ್ಪಣದೊಂದಿಗೆ ಪಿಂಡಪ್ರದಾನವನ್ನು ಜೀವನದಿ ಕಾವೇರಿಯಲ್ಲಿ ಸಲ್ಲಿಸಲಾಗುತ್ತದೆ.

ಕೋವಿಡ್​ನಿಂದ ಮೃತ ಪಟ್ಟವರ ಶವಗಳ ವಾರಸುದಾರರು ಬಾರದೇ ಇದ್ದ ಕಾರಣಕ್ಕೆ ಅಸ್ಥಿ ವಿಸರ್ಜಿಸಲಾಗಿತ್ತು. ಈಗ ಪಿಂಡ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

| ಆರ್.ಅಶೋಕ್ ಕಂದಾಯ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net