

ಮಂಗಳೂರು : ನಗರದ ಬಾನೆತ್ತರದ ಕಾಂಕ್ರೀಟ್ ಕಟ್ಟಡಗಳ ನಡುವೆ, ಒತ್ತಡದ ಜೀವನದಿಂದ ಬೇಸತ್ತು ಹಸಿರ ಪರಿಸರದ ನಡುವೆ ಉಸಿರಾಡುತ್ತಾ ಕೆಲ ಗಂಟೆಗಳನ್ನು ಕಳೆಯಲು ಬಯಸುವವರಿಗೆ ಪಿಲಿಕುಳ ನಿಸರ್ಗಧಾಮವು ‘ಪ್ರಕೃತಿಯ ಜತೆ ನಡಿಗೆ’ ಬೆಳಗ್ಗಿನ ಸಂಚಾರ ಕಾರ್ಯಕ್ರಮ ಆರಂಭಿಸಿದೆ.
ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಹಸಿರು ತುಂಬಿದ ವಾತಾವರಣದಲ್ಲಿ ಸೂರ್ಯೋದಯದ ವೇಳೆಯ ಕೆಲ ಗಂಟೆಗಳ ಕಾಲ ನಡೆದಾಡುವ, ಪ್ರಕೃತಿ ಸೌಂದಯವನ್ನು ವೀಕ್ಷಿಸುವ, ಅಲ್ಲಿನ ಪಕ್ಷಿ ಜೀವ ಜಂತುಗಳ ಕಲರವವನ್ನು ಆಸ್ವಾದಿಸುವ ಈ ಕಾರ್ಯಕ್ರಮ ಕಳೆದೊಂದು ತಿಂಗಳಿನಿಂದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಡೆಯುತ್ತಿದೆ.
ಮಾನಸ ವಾಟರ್ ಪಾರ್ಕ್‌ನ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆರಂಭಗೊಂಡಿದ್ದು,ಒಂದು ತಿಂಗಳಿನಿಂದ ಸುಮಾರು 100ರಷ್ಟು ಪರಿಸರ ಪ್ರೇಮಿಗಳು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಾಧಿಕಾರದ ಆಯುಕ್ತ ಪ್ರವೀಣ್ ನಾಯಕ್ ತಿಳಿಸಿದ್ದಾರೆ.
ವಾಜಂಜೂರಿನ ಪಿಲಿಕುಳದ ನಿಸರ್ಗಧಾಮವು ಸುಮಾರು 365 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, ಇಲ್ಲಿ ವಿಜ್ಞಾನ ಕೇಂದ್ರ, ಸ್ವಾಮಿ ವಿವೇಕಾನಂದ 3ಡಿ ತಾರಾಲಯ, ಅರ್ಬನ್ ಹಾಥ್, ಸಂಸ್ಕೃತಿ ಗ್ರಾಮ, ಗುತ್ತುಮನೆಯಲ್ಲದೆ ಇಲ್ಲಿ ವಿಶಾಲವಾದ ಪ್ರದೇಶವನ್ನು ಪಶ್ಚಿಮ ಘಟ್ಟದ ಅಳಿವಿನಂಚಿನಲ್ಲಿರುವ ತಳಿಗಳಿಂದ ನಿರ್ಮಾಣವಾದ ಅರಣ್ಯವಿದೆ. ಅಕೇಶಿಯಾ ಮತ್ತು ಗೇರು ಮರಗಳಿಂದ ಕೂಡಿದ್ದ ಈ ಪ್ರದೇಶದಲ್ಲಿ 2000ದಿಂದ ಹಸುರೀಕರಣ ಕಾರ್ಯ ಆರಂಭಗೊಂಡಿತ್ತು. ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಇಲ್ಲಿ ಪಶ್ಚಿಮ ಘಟ್ಟದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಸ್ಥಳೀಯ ಗಿಡಗಳು, ಪುನರ್ ಸಂಶೋಧಿಸಿದ ಸಸಿಗಳು ಸೇರಿದಂತೆ ಸುಮಾರು 260 ವಿವಿಧ ತಳಿಗಳ ಗಿಡಗಳನ್ನು ನೆಟ್ಟು ಬೆಳೆಸಲಾಗಿದ್ದು, ಸದ್ಯ 60000ಕ್ಕೂ ಅಧಿಕ ಮರಗಳಿಂದ ದಟ್ಟ ಅರಣ್ಯವಾಗಿ ರೂಪು ಪಡೆದಿದೆ.
ಇಲ್ಲಿ ಬೆಳಗ್ಗಿನ ಹೊತ್ತು ವಿವಿಧ ರೀತಿಯ ಪಕ್ಷಿಗಳು, ಚಿಟ್ಟೆಗಳು ಕಾಣಸಿಗುತ್ತದೆ. ನಗರ ವಾಸಿಗಳು, ಹಸಿರಿನ ವಾತಾವರಣವನ್ನು ಬಯಸುವವರು ಬೆಳಗ್ಗೆ 6ರ ಬಳಿಕ ಸುಮಾರು ಎರಡು ಗಂಟೆಗಳ ಕಾಲ ಇಲ್ಲಿನ ಪ್ರಕೃತಿಯ ಸೊಬಗನ್ನು ಆಸ್ವಾದಿಸಬಹುದು. ಜತೆಗೆ ಗುತ್ತು ಮನೆಯ ವೀಕ್ಷಣೆಗೂ ಅವಕಾಶವಿರುತ್ತದೆ. ಬಳಿಕ ತುಳುನಾಡಿನ ಸಾಂಪ್ರದಾಯಿಕ ಉಪಹಾರದ ವ್ಯವಸ್ಥೆಯೂ ಇರಲಿದೆ. ನೈಸರ್ಗಿಕ ಅರಣ್ಯದಲ್ಲಿರುವ ವಿವಿಧ ರೀತಿಯ ಔಷಧೀಯ ಗಿಡಗಳ ಪರಿಚಯ, ನಿತ್ಯ ಜೀವನದಲ್ಲಿ ಅವುಗಳ ಬಳಕೆಯ ಬಗ್ಗೆಯೂ ಮಾಹಿತಿಯನ್ನೂ ಪಡೆಯಬಹುದು ಎಂದು ಪ್ರವೀಣ್ ನಾಯಕ್ ಮಾಹಿತಿ ನೀಡಿದ್ದಾರೆ.
ನಗರದ ಜೀವನದಲ್ಲಿ ಕೆಲಸದ ಒತ್ತಡದಿಂದ ದೂರವಾಗಿ ಕೆಲ ಹೊತ್ತು ಪ್ರಕೃತಿಯ ಜತೆಗೆ ಒಡನಾಟವನ್ನು ಬೆಳೆಸುವ ನಿಟ್ಟಿನಲ್ಲಿ ಪಿಲಿಕುಳದಲ್ಲಿ ಬೆಳಗ್ಗಿನ ಹೊತ್ತು ಪ್ರಕೃತಿಯ ಜತೆ ನಡಿಗೆ ಕಾರ್ಯಕ್ರಮ ಆರಂಭಿಸಲಾಗಿದೆ. ಉದ್ಯೋಗಿಗಳು, ಉದ್ಯೋಗಸ್ಥ ಸಂಘ ಸಂಸ್ಥೆಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಪ್ರವೀಣ್ ಬಿ. ನಾಯಕ್, ಆಯುಕ್ತರು, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ.