

ನ ದೇವಾ ಮೃಚ್ಛಿಲಾಮಯಾಃ |
ತೇ ಪುನಂತ್ಯುರುಕಾಲೇನ
ದರ್ಶನಾದೇವ ಸಾಥವಃ || (ಭಾಗವತ)
ಕೇವಲ ನೀರು, ಸರೋವರ, ನದಿಗಳು ತೀರ್ಥವಾಗುವುದಿಲ್ಲ. ಕೇವಲ ಮೃತ್ತಿಕೆ, ಶಿಲೆ ಮುಂತಾದವುಗಳಿಂದ ಮಾಡಿದ ವಿಗ್ರಹಗಳು ದೇವ ದೇವತೆಗಳಾಗುವುದಿಲ್ಲ. ಅನೇಕ ಕಾಲಗಳಿಂದ ಶ್ರದ್ಧೆ, ಭಕ್ತಿ ಹಾಗೂ ಸಮರ್ಪಣಾ ಭಾವನೆಯಿಂದ ಸೇವೆ ಮಾಡಿದಾಗಲೇ ಅವುಗಳು ಪವಿತ್ರವಾಗಬಲ್ಲವು. ಆದರೆ ಸತ್ಪುರುಷರು ತಮ್ಮ ದರ್ಶನದಿಂದಲೇ ಪವಿತ್ರವಾಗಿಸಿಬಿಡುತ್ತಾರೆ.
ಈ ಜಗತ್ತಿನಲ್ಲಿ ಪ್ರತಿ ನಿತ್ಯ, ಪ್ರತಿ ಕ್ಷಣ, ಜನಸಾಮಾನ್ಯರು ತೀರ್ಥಕ್ಷೇತ್ರ, ಪುಣ್ಯ ಕ್ಷೇತ್ರ ಮುಂತಾದವುಗಳಲ್ಲಿ ಸ್ಥಾಪಿತಗೊಂಡಿರುವ ಮಂದಿರ, ದೇವಾಲಯ, ಗುಡಿ, ಬಸದಿಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಯಾರೂ ಸಹ ತನ್ನ ಅಧ್ಯಾತ್ಮ ಜೀವನದಲ್ಲಿ ಪ್ರಗತಿಯಾಗಿದೆ ಎಂದು ತಿಳಿಸಿಲ್ಲ. ಈ ನಕಾರಾತ್ಮಕ ಉತ್ತರಗಳಿಗೆಲ್ಲಾ ಮೂಲ ಕಾರಣ ಅಂತಃಶುದ್ಧಿಯ ಕೊರತೆ.
ಆದರೆ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ವಿಚಾರವೇ ಅನನ್ಯ! ಅವರು ಬಾಲ್ಯದಲ್ಲಿ ಗದಾಧರ ಎಂಬ ಹೆಸರಿನಿಂದ ಎಲ್ಲರಿಂದಲೂ ಕರೆಯಿಸಿಕೊಳ್ಳುತ್ತಿದ್ದ ಸಂದರ್ಭ. ಸಹಪಾಠಿಗಳೊಂದಿಗೆ ಹಾಗೂ ಮನೆಯ ವಠಾರದ ಮಹಿಳೆಯರೊಂದಿಗೆ ಅವರ ಜನ್ಮಸ್ಥಾನವಾದ ಕಾಮಾರಪುಕುರಿನ ಸನಿಹದಲ್ಲಿರುವ ವಿಶಾಲಾಕ್ಷಿ ದೇವಿಯ ಮಂದಿರಕ್ಕೆ ಭೇಟಿಯಿತ್ತಾಗ ನಡೆದ ಘಟನೆಯು ಮುಂದೆ ಈ ಬಾಲಕನೇ ಅವತಾರ ವರಿಷ್ಠನಾಗಿ ಕೃಪೆಗೈಯ್ಯುತ್ತಾರೆ ಎಂಬುದಕ್ಕೆ ಸಾಕ್ಷಿ ಎನ್ನಬಹುದು. ಆನೂರು ಎಂಬ ಗ್ರಾಮದಲ್ಲಿ ದೇವಿ ವಿಶಾಲಾಕ್ಷಿಯ ಮಂದಿರ
ವಿತ್ತು. ಈ ದೇವಾಲಯದ ವಿಶೇಷತೆ ಅಂದರೆ ದೇವಿಯೇ ಅಲ್ಲಿಯ ಗೋಪಾಲಕರುಗಳಿಗೆ ಹಾಗೂ ಇತರ ಮಕ್ಕಳ ಸಲುವಾಗಿ ಇದ್ದ ದೇವಾಲಯವನ್ನೂ ತೊರೆದು ಬಟ್ಟ ಬಯಲಿನಲ್ಲಿ ಸ್ಥಾಪಿತಗೊಂಡಿದ್ದಾಳೆ. ವಿಶಾಲಾಕ್ಷಿಯ ದೇವಾಲಯ ಅಲ್ಲಿಯ ಸುತ್ತಮುತ್ತಲಿನ ಜನರಿಗೆ ಒಂದು ಜಾಗೃತ ಪೀಠವಾಗಿತ್ತು. ಸರಿ, ಬಾಲಕ ಗದಾಧರ ಹಾಗೂ ಸ್ತ್ರೀ ಭಕ್ತ ವೃಂದದವರು ರಸ್ತೆಯುದ್ದಕ್ಕೂ ದೇವಿ ನಾಮ ಸಂಕೀರ್ತನೆ, ದೇವದೇವಿಯ ಕಥೆ ವಿಚಾರಗಳ ವಿನಿಮಯ ನಡೆಯುತ್ತಾ ದೇವಾಲಯಕ್ಕೆ ತಲುಪಿದರು. ಪೂಜೆ ಆರಂಭವಾಯಿತು, ನೈವೇದ್ಯ, ಪುಷ್ಪಗಳನ್ನು ಅರ್ಪಿಸುತ್ತಾ ಇರುವ ಸಮಯದಲ್ಲಿ ಪುಟ್ಟ ಗದಾಧರ ಅದಾವುದೋ ಅನಿರ್ವಚನೀಯ ಮನಃಸ್ಥಿತಿಗೆ ತಲುಪಿ ಕೈಕಾಲುಗಳನ್ನು ಸೆಟೆದುಕೊಂಡು ನೆಲದ ಮೇಲೆ ಬಾಹ್ಯ ಪ್ರಜ್ಞೆಯಿಲ್ಲದೆ ಇರುವಂತಾಯಿತು. ಮಗುವಿಗೆ ಏನಾಯಿತು? ಎಂದು ತೀವ್ರವಾದ ಭಯದಿಂದ ವಿಚಲಿತರಾಗಿದ್ದಾಗ ಒಬ್ಬ ಹಿರಿಯ ಭಕ್ತೆ ಮಗುವಿನ ಕಿವಿಯಲ್ಲಿ ತಾಯಿ ವಿಶಾಲಾಕ್ಷಿಯ ನಾಮವನ್ನು ಉಚ್ಚರಿಸಿದರು. ಆಗ ನಿಧಾನವಾಗಿ ಗದಾಧರ ಸಹಜ ಸ್ಥಿತಿಗೆ ಮರಳಿದ. ಈ ಸಂದರ್ಭದಲ್ಲಿ ಗದಾಧರನ ಮುಖದಲ್ಲಿ ಅನಿರ್ವಚನೀಯ ಆನಂದ, ಮಂದಹಾಸ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಪರಮಾನಂದದ ಅನುಭವ ಪಡೆದಂತಿತ್ತು. ಬಹುಶಃ ಇದೇ ರಾಮಕೃಷ್ಣ ಪರಮಹಂಸರ ಸಮಾಧಿಯ ಅನುಭವ ಎನ್ನಲಾಗಿದೆ. ಇದೇ ಅಲ್ಲವೇ ನಿಜವಾದ ತೀರ್ಥಕ್ಷೇತ್ರ ದರುಶನದ ಮತ್ತು ಫಲದ ಅನುಭವ?
ರಾಮಕೃಷ್ಣರು ದೇವಾಲಯ, ಮಂದಿರ, ಪುಣ್ಯ ಕ್ಷೇತ್ರಗಳಿಗೆ ಭೇಟಿಯಿತ್ತಾಗೆಲ್ಲ ಅಲ್ಲಿಯ ಮೃಣ್ಮಯಿ ಮೂರ್ತಿಯಲ್ಲಿ ಚಿನ್ಮಯಿಯನ್ನು ಕಂಡು ದಿವ್ಯಾನಂದ ಅನುಭವಿಸುತ್ತಿದ್ದರು. ಜಗದಂಬೆ, ಭವತಾರಿಣಿ, ರಾಜೇಶ್ವರಿ, ಪರಮೇಶ್ವರಿ, ಕಾಳಿಕಾ ಎಂಬೆಲ್ಲಾ ಜಗಜ್ಜನನಿಯ ರೂಪಗಳನ್ನು ಕಂಡು ಸಾಕ್ಷಾತ್ಕಾರ ಪಡೆದು ಸದಾ ಆನಂದ ಪರವಶರಾಗಿ ಭಕ್ತಿಯ ಸಮುದ್ರದಲ್ಲಿ ತೇಲಿ ಮುಳುಗೇಳುತ್ತಿದ್ದರು. ಅಧ್ಯಾತ್ಮ ಉನ್ನತಿಯನ್ನು ಕರತಲದಲ್ಲಿರಿಸಿಕೊಂಡು ಇತರರಿಗೂ ಭಗವತಿಯ ದರ್ಶನಕ್ಕೆ ಸ್ಪುರಣ ನೀಡುತ್ತ ಬ್ರಹ್ಮಾನಂದ ಪಡೆಯುತ್ತಿದ್ದರು.
ಪರಮಹಂಸರು ತೀರ್ಥ ಯಾತ್ರೆಯ ಬಗ್ಗೆ ಹೀಗೆ ತಿಳಿಸಿದ್ದಾರೆ: ಹಲವು ಜನರು ಎಲ್ಲಿ ಭಗವದ್ದರ್ಶನಕ್ಕಾಗಿ ಧ್ಯಾನ, ಜಪ, ತಪಸ್ಸು, ಪೂಜೆ, ಪ್ರಾರ್ಥನೆಗಳನ್ನು ಮಾಡಿರುವರೋ ಆ ಪುಣ್ಯ ಕ್ಷೇತ್ರ ಭಗವಂತನು ವ್ಯಕ್ತಗೊಂಡಿರುವ ಪುಣ್ಯಕ್ಷೇತ್ರ ಎಂದೆನಿಸಿಕೊಳ್ಳುತ್ತದೆ. ಅಂತಹ ಭಗವದ್ಭಕ್ತರ ಭಕ್ತಿಯ ಪ್ರಭಾವದಿಂದ ಆಧ್ಯಾತ್ಮಿಕತೆಗಳು ಇಂತಹ ತೀರ್ಥಕ್ಷೇತ್ರಗಳಲ್ಲಿ ಘನೀಭೂತವಾದಂತೆ ಇರುವುವು. ಆದ ಕಾರಣ, ಅಲ್ಲಿ ಜನರಿಗೆ ಆಧ್ಯಾತ್ಮಿಕತೆ ಸುಲಭವಾಗಿ ಜಾಗೃತವಾಗಿ ಭಗವದ್ದರ್ಶನ ಸಾಧ್ಯ ಎಂಬುದನ್ನು ಪರಮಹಂಸರು ಈ ಜಗತ್ತಿಗೆ ಸಾರಿ ಹೇಳಿದ್ದಾರೆ. ದಕ್ಷಿಣೇಶ್ವರದ ಭವತಾರಿಣಿ ಮಂದಿರಕ್ಕೆ ಈ ನೂರ ಅರವತ್ತೆಂಟು ವರುಷದವರೆಗೆ ಸಾವಿರಾರು ಅರ್ಚಕರು ಅರ್ಚನೆ ಮಾಡಿದ್ದಾರೆ. ಆದಾಗ್ಯೂ ಅದೇ ಭವತಾರಿಣಿಯ ಅರ್ಚಕರಾಗಿ ಪರಮಹಂಸರು ಇಡೀ ಜಗತ್ತಿನಾದ್ಯಂತ ಅವತಾರ ವರಿಷ್ಠರಾಗಿ ಅರ್ಚಿಸಲ್ಪಡುತ್ತಿದ್ದಾರೆ. ಇದಕ್ಕೆ ಮೂಲ
ಕಾರಣ ಅವರು ತೀರ್ಥಕ್ಷೇತ್ರವಾದ ದಕ್ಷಿಣೇಶ್ವರದ ಭವತಾರಿಣಿಯನ್ನು ಕೇವಲ ಮೃಣ್ಮಯಿಯಾಗಿ ಕಾಣದೆ ಚಿನ್ಮಯಿಯಾಗಿ ಸಾಕ್ಷಾತ್ಕಾರ ಮಾಡಿಕೊಂಡುದು. ಇದೇ ಅಲ್ಲವೇ ನಿಜವಾದ ಅರ್ಥದಲ್ಲಿ ತೀರ್ಥಯಾತ್ರೆ.