ಎಂಟು ವರ್ಷಗಳ ಬಳಿಕ ಐಪಿಎಲ್ ಆಡಲು ಒಲವು ತೋರಿದ ಆರ್‌ಸಿಬಿ ಆಟಗಾರ

New-Project-3
Published on

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಎಂಟು ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಕಣಕ್ಕಿಳಿಯಲು ಆಸಕ್ತಿ ತೋರಿದ್ದು, 2024ರ ಆವೃತ್ತಿಗೆ ಮುನ್ನ ಮಿನಿ ಹರಾಜಿನಲ್ಲಿ ಹೆಸರು ನೋಂದಾಯಿಸಲಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿರುವ 33 ವರ್ಷದ ಸ್ಟಾರ್ಕ್ ಐಪಿಎಲ್‌ನಲ್ಲಿ ಆಡಲು ಒಲವು ತೋರಿದ್ದಾರೆ. 2015ರ ಐಪಿಎಲ್‌ನಲ್ಲಿ ಅವರು ಕೊನೆಯದಾಗಿ ಆಡಿದ್ದರು. ರಾಷ್ಟ್ರೀಯ ತಂಡದ ಪರ ಏಕದಿನ ಹಾಗೂ ಟೆಸ್ಟ್ ಆಡುವತ್ತ ಗಮನಹರಿಸಲು ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದ ಸ್ಟಾರ್ಕ್, 100 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಪ್ರನಿಧಿಸುವ ಗುರಿ ಹೊಂದಿದ್ದಾರೆ. ಪ್ರಸ್ತುತ 82 ಪಂದ್ಯಗಳನ್ನಾಡಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿರುವ ಸ್ಟಾರ್ಕ್, ಭಾರತ ವಿರುದ್ಧ ಸರಣಿಗೆ ಮರಳುವ ನಿರೀಕ್ಷೆಯಿದೆ.


ಐಪಿಎಲ್ ಭಾಗವಹಿಸುವಿಕೆಗಿಂತ ಹೆಚ್ಚಾಗಿ ರಾಷ್ಟ್ರೀಯ ಕರ್ತವ್ಯಕ್ಕೆ ಆದ್ಯತೆ ನೀಡುವ ಮಿಚೆಲ್ ಸ್ಟಾರ್ಕ್, ಆರ್‌ಸಿಬಿ ಪರ ಎರಡು ಸೀಸನ್‌ಗಳನ್ನು ಆಡಿದ್ದಾರೆ. ಆರ್‌ಸಿಬಿ ಪರ 27 ಪಂದ್ಯಗಳಲ್ಲಿ 34 ವಿಕೆಟ್ ಪಡೆದಿರುವ ಸ್ಟಾರ್ಕ್ ಅವರನ್ನು 2018ರಲ್ಲಿ ಕೆಕೆಆರ್ ತಂಡ 9.4 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಗುಳಿದಿದ್ದರು. 2015ರಲ್ಲಿ ಕೊನೆಯದಾಗಿ ಐಪಿಎಲ್‌ನಲ್ಲಿ ಕಣಕ್ಕಿಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net