ಎನ್‌ಇಪಿ ಕೈಬಿಟ್ಟಿರುವ ರಾಜ್ಯದ ಕ್ರಮ ಪ್ರಶ್ನಿಸಿದ್ದ ಪಿಐಎಲ್ ವಜಾ

highcourt
Published on

ಬೆಂಗಳೂರು: ಎನ್‌ಇಪಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುತ್ತಿರುವ ರಾಜ್ಯದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸಿದೆ.

ಈ ಕುರಿತಾಗಿ ನಗರದ ವಕೀಲ ಗಿರೀಶ್ ಭಾರಧ್ವಾಜ್ ಹಾಗೂ ಆರ್.ಆನಂದಮೂರ್ತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಡಿ. ರಾಮಚಂದ್ರ ಹುದ್ದಾರ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ, ‘ಒಂದು ರಾಷ್ಟ್ರ, ಒಂದು ಶಿಕ್ಷಣ ನೀತಿ’ ಧ್ಯೆಯದೊಂದಿಗೆ ಕೇಂದ್ರ ಸರ್ಕಾರ ಎನ್‌ಇಪಿ ಯೋಜನೆ ಜಾರಿ ಮಾಡಿದೆ. ಈಗ ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಈ ವಿಚಾರವಾಗಿ ಕೇಂದ್ರದ ಆದೇಶ ಪೂರ್ಣ ರಾಷ್ಟ್ರಕ್ಕೆ ಅನ್ವಯವಾಗುತ್ತದೆ. ಪ್ರತಿ ರಾಜ್ಯವೂ ಹಂತ- ಹಂತವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಹೀಗಿರುವಾಗ ಸರ್ಕಾರವು ರಾಜ್ಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಷ್ಟ್ರ ಶಿಕ್ಷಣ ನೀತಿಯನ್ನು ಕಾರ್ಯರೂಪಕ್ಕೆ ತರುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ನಾವು ಸರ್ಕಾರಕ್ಕೆ ನಿರ್ದಿಷ್ಟ ನೀತಿ ಅನುಸರಿಸಲು ಮತ್ತು ಅನುಸರಿಸದಂತೆ ಹೇಗೆ ನಿರ್ದೇಶಿಸಬಹುದು? ಯಾವ ಕಾನೂನಿನಡಿ ರಾಜ್ಯ ಸರ್ಕಾರವನ್ನು ಇದೇ ನೀತಿ ಸ್ವೀಕರಿಸಲು ಅಥವಾ ತಿರಸ್ಕರಿಸಲು ಒತ್ತಾಯಿಸಬಹುದು ಎಂದು ಮೌಖಿಕವಾಗಿ ಪ್ರಶ್ನೆ ಎತ್ತಿತ್ತು. ಮುಂದುವರಿದು, ಎನ್‌ಇಪಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ. ನೀತಿ ನಿರೂಪಣೆ ವಿಚಾರದಲ್ಲಿ ಅನಗತ್ಯವಾಗಿ ನ್ಯಾಯಪೀಠ ಮಧ್ಯಪ್ರವೇಶಿಸಲ್ಲ ಎಂದು ಅರ್ಜಿ ವಜಾಗೊಳಿಸಿ ಆದೇಶಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net