

ಕೆಲ ದಿನಗಳ ಹಿಂದಿನ ಮಾತಿದು. ಭಾನುವಾರದ ಮುಂಜಾವಿನ ವಾಯುವಿಹಾರ ಮುಗಿಸಿ ಮನೆಯತ್ತ ಹೊರಟಿದ್ದ ಮುಂಬೈನ ಮೀರಾ ರೋಡಿನ ಕಾಲನಿಯೊಂದರ ನಿವಾಸಿಯಾದ ಮಹೇಂದ್ರ ಪಟೇಲ್ಗೆ ರಸ್ತೆಯ ಮತ್ತೊಂದು ತುದಿಯಲ್ಲಿ ತಮ್ಮದೇ ಕಾಲನಿಯ ಆಶಾ ವ್ಯಾಸ್ ಪಾರಿವಾಳಗಳಿಗೆ ಕಾಳು ತಿನ್ನಿಸುತ್ತಿರುವುದು ಕಂಡುಬಂತು. ನೇರವಾಗಿ ಅಲ್ಲಿಗೆ ಧಾವಿಸಿದ ಪಟೇಲ್ ಪಾರಿವಾಳಗಳಿಗೆ ಕಾಳು ತಿನ್ನಿಸುವುದರಿಂದಾಗುವ ತೊಂದರೆಗಳ ಕುರಿತು ಆ ಮಹಿಳೆಗೆ ತಿಳಿಹೇಳಿದರು. ಅದ್ಯಾಕೋ ಪಟೇಲರ ಬುದ್ಧಿವಾದ ಆಶಾಗೆ ಹಿಡಿಸದ ಕಾರಣ ಆ ಕಡೆಯಿಂದ ಪ್ರತಿಕ್ರಿಯೆ ಕೊಂಚ ಖಾರವಾಗಿಯೇ ಬಂತು. ಪಟೇಲರೂ ಸುಮ್ಮನಿರುವ ವ್ಯಕ್ತಿಯಲ್ಲ. ಸರಿಯಾಗಿಯೇ ಇನ್ನೊಂದು ಕ್ಲಾಸ್ ತೆಗೆದುಕೊಂಡರು. ಮಾತಿಗೆ ಮಾತು ಬೆಳೆದು ಇಬ್ಬರ ದನಿಗಳೂ ಏರುಗತಿಯಲ್ಲಿ ಸಾಗಿ ಪಟೇಲರ ಮನೆಯ ಕಿಟಕಿಯವರೆಗೆ ತಲುಪಿತು. ಅಪ್ಪನ ಜೊತೆ ಯಾರೋ ಮಹಿಳೆ ಜಗಳವಾಡುತ್ತಿರುವುದನ್ನು ಕಂಡ ಪಟೇಲರ ಮಗಳು ಕೆಳಗಿಳಿದು ಬಂದು ತಾನೂ ಈ ವಾಗ್ವಾದದಲ್ಲಿ ಸೇರಿಕೊಂಡಳು. ಇದೀಗ ಈ ಗಲಾಟೆ ಆಶಾರ ಮನೆಯತ್ತ ಹೊರಳಿ ಅಲ್ಲಿಂದ ಅವರ ಮಕ್ಕಳು ಬಂದು ಸೇರಿಕೊಂಡು ಉರಿಯುತ್ತಿರುವ ಬೆಂಕಿಗೆ ತಾವೊಂದಿಷ್ಟು ತುಪ್ಪ ಸುರಿದರು. ಕಾಳು ತಿಂದ ಪಾರಿವಾಳವೇನೋ ಹೊಟ್ಟೆತುಂಬಿಸಿಕೊಂಡು ಗೂಡು ಸೇರಿಕೊಂಡಿತು. ಆದರೆ ಪಟೇಲ್ ಮತ್ತು ಆಶಾರ ಕುಟುಂಬಗಳೆರಡೂ ಏರಿದ್ದು ಪೊಲೀಸ್ ಠಾಣೆಯ ಮೆಟ್ಟಿಲುಗಳನ್ನು. ಪರಸ್ಪರ ದೂರು, ಪ್ರತಿದೂರು ದಾಖಲಿಸಿಕೊಂಡ ಪೊಲೀಸರು ಇದೀಗ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ.
ಮುಂಬೈಗೂ ಪಾರಿವಾಳಗಳಿಗೂ ಅದೇಕೊ ಅವಿನಾಭಾವ ಸಂಬಂಧ. ಅಲ್ಲಿನ ಐಕಾನಿಕ್ ಸ್ಥಳಗಳಾದ ಗೇಟ್ ವೇ ಆಫ್ ಇಂಡಿಯಾ, ಮರೀನ್ ಡ್ರೈವ್, ಚೌಪಾಟಿ, ಹಾಜಿ ಆಲಿ ದರ್ಗಾ, ಸಿಎಸ್ಟಿಗಳ ಚಿತ್ರಗಳನ್ನೊಮ್ಮೆ ನೋಡಿ ಅಲ್ಲೆಲ್ಲ ಓಡಾಡಿಕೊಂಡಿರುವ ಪಾರಿವಾಳಗಳು ಅದೆಷ್ಟು ವರ್ಷಗಳಿಂದ ಅಲ್ಲಿ ಬೀಡು ಬಿಟ್ಟಿವೆಯೋ ಗೊತ್ತಿಲ್ಲ. ಆದರೆ ಅವುಗಳಿಲ್ಲದ ಆ ಸ್ಥಳಗಳನ್ನು ಊಹಿಸಿಕೊಳ್ಳುವುದೂ ಕಷ್ಟ. ಈ ಎಲ್ಲ ಸ್ಥಳಗಳಲ್ಲಿ ತಮ್ಮನ್ನು ಪ್ರಾಪ್ಗಳಂತೆ ಬಳಸುತ್ತಿರುವ ಛಾಯಾಚಿತ್ರಕಾರ ಫ್ರೇಮಗಳ ಅಂದವನ್ನು ಈ ಪಾರಿವಾಳಗಳು ವರುಷಗಳಿಂದ ಹೆಚ್ಚಿಸಿವೆ. ಹೆಚ್ಚಿಸುತ್ತಲೇ ಇವೆ. ಇನ್ನು ಚಲನಚಿತ್ರದವರಿಗೂ ಈ ಪಾರಿವಾಳಗಳು ಅಚ್ಚುಮೆಚ್ಚು. ಮುಂಬೈಯ ಹಿನ್ನೆಲೆಯ ‘ಬಾಂಬೆ’, ‘ಫರಿಂದಾ’ದಂತಹ ಚಿತ್ರಗಳಲ್ಲಂತೂ ಪಾರಿವಾಳಗಳು ಚಿತ್ರಗಳ ಪಾತ್ರವೇ ಅನ್ನುವಷ್ಟರ ಮಟ್ಟಿಗೆ ಕತೆಯಲ್ಲಿ ಮಿಳಿತವಾಗಿವೆ. ಹಳೇ ಮುಂಬೈಯ ನಗರವಾಸಿಗಳ ಜೊತೆಗಿನ ಪಾರಿವಾಳಗಳ ನಂಟಂತೂ ಕೇಳಲೇ ಬೇಡಿ. ಇಂತಹ ಸ್ಥಳಗಳಲ್ಲಿ ಪಾರಿವಾಳಗಳಿಗೆ ಕಾಳು ಹಾಕುವ ರೂಢಿ ತುಂಬ ಹಳೆಯದಾಗಿದ್ದು ಇಂದಿಗೂ ಅದು ಮುಂದುವರಿದಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಅವುಗಳಿಗೆ ಕಾಳು ಹಾಕುವವರಲ್ಲಿ ಒಂದು ಗುಂಪು ಪಕ್ಷಿಪ್ರೇಮಿಗಳದ್ದಾಗಿದ್ದರೆ, ಮತ್ತೊಂದು ಗುಂಪು ಅದನ್ನೊಂದು ಪುಣ್ಯಕಾರ್ಯವೆಂದು ನಂಬುತ್ತದೆ. ಇಲ್ಲಿಯವರೆಗೆ ಮುಂಬೈ ಮಹಾನಗರದ ಸಂಸ್ಕೃತಿಯಂತಿದ್ದ ಈ ಪದ್ಧತಿಯ ಮೇಲೆ ಇತ್ತೀಚಿನ ಕೆಲ ಘಟನೆಗಳ ಕಾರಣ ಇದೀಗ ಕರಿನೆರಳು ಮೂಡಿದೆ.
ಪಾರಿವಾಳಗಳ ಮೂಲಕ ಮಾನವನಿಗೆ ಹರಡುತ್ತಿರುವ ರೋಗಗಳ ಕುರಿತು ಇತ್ತೀಚಿನ ಕೆಲ ವರ್ಷಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದ್ದು, ಆ ಮಾತಿಗೆ ಪುಷ್ಟಿ ನೀಡುವಂತೆ ಹಲವಷ್ಟು ಉದಾಹರಣೆಗಳು ಮುನ್ನೆಲೆಗೆ ಬರುತ್ತಿವೆ. ಹೀಗಾಗಿ ಪಾರಿವಾಳಗಳಿಗೆ ಆಹಾರವನ್ನು ಹಾಕದಂತೆ ತಜ್ಞರು ಮನವಿ ಮಾಡುತ್ತಿದ್ದಾರೆ. ಮತ್ತೊಂದೆಡೆ ಇದುವರೆಗೆ ಇಲ್ಲದ ಪಾರಿವಾಳ ಸಂಬಂಧಿ ರೋಗಗಳು ಹೇಗೆ ಇದ್ದಕ್ಕಿದ್ದಂತೆ ಉದ್ಭವವಾಗಿವೆ ಎಂಬ ಪ್ರಶ್ನೆಗಳೂ ಪಕ್ಷಿಪ್ರೇಮಿಗಳಿಂದ ಕೇಳಿಬರುತ್ತಿವೆ. ಹೀಗಾಗಿ ಈ ಪರ-ವಿರೋಧ ಚರ್ಚೆಗಳು ದೊಡ್ಡದಾಗಿ ಮುಂಬೈಯಲ್ಲಿ ಘರ್ಷಣೆಯ ಹಲವು ಘಟನೆಗಳು ವರದಿಯಾಗುತ್ತಿವೆ. ಅಂತಹುಗಳಲ್ಲಿ ಪಟೇಲರ ಘಟನೆಯೂ ಒಂದು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಮುಂಬೈ ಹೈಕೋರ್ಟ್ ಸ್ಪಷ್ಟ ಸೂಚನೆ ನೀಡಿದೆ. ಮುಂಬೈ ನಗರದಲ್ಲಿ ಪಾರಿವಾಳಗಳು ಭಾರಿ ಸಂಖ್ಯೆಯಲ್ಲಿ ಏರಿ ಅವುಗಳು ಜನರ ಆರೋಗ್ಯದ ಮೇಲೆ ದುಷ್ಪರಿಣಾಮವುಂಟು ಮಾಡುವುದರ ಜೊತೆಗೆ ಸಾರ್ವಜನಿಕ ಸ್ಥಳ ಮತ್ತು ಕಟ್ಟಡಗಳ ಶುಚಿತ್ವಕ್ಕೂ ಸವಾಲಾಗಿರುವ ಕಾರಣ ಸಾರ್ವಜನಿಕವಾಗಿ ಪಾರಿವಾಳಗಳಿಗೆ ಆಹಾರವನ್ನು ನೀಡಲೆಂದೆ ಮೀಸಲಾಗಿರುವ ಜಾಗೆಗಳಾದ ಕಬೂತರ್ ಖಾನೆಗಳನ್ನು ತಕ್ಷಣಕ್ಕೆ ಮುಚ್ಚಿ ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿಯನ್ನುಂಟು ಮಾಡುವಂತೆ ಹೈಕೋರ್ಟ್ ಬ್ರಹನ್ಮುಂಬೈ ಮುನ್ಸಿಪಲ್ ಕಾಪೋರೇಷನ್ಗೆ ಆದೇಶಿಸಿದೆ. ಇದಕ್ಕೆ ಪೂರಕವಾಗಿ ಮುಂಬೈಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್ಎಚ್ಎಸ್) ನಿರ್ದೇಶಕರು ಪತ್ರಿಕಾ ಹೇಳಿಕೆ ನೀಡಿ, ‘ಮುಂಬೈ ಸೇರಿದಂತೆ ಭಾರತದ ಬಹುತೇಕ ನಗರಗಳಲ್ಲಿ ಪಾರಿವಾಳಗಳ ಸಂಖ್ಯೆ ಮಿತಿ ಮೀರುತ್ತಿದ್ದು ಜನರ ಆರೋಗ್ಯ ಮತ್ತು ಜೀವವೈವಿಧ್ಯದ ರಕ್ಷಣೆಗೆ ಅವುಗಳ ನಿಯಂತ್ರಣದ ತುರ್ತು ಅಗತ್ಯವಿದೆ’ ಎಂದು ವಿವರಿಸಿದ್ದಾರೆ.
ಕೊಲಂಬಿಡೆ (Columbidae) ಕುಟುಂಬಕ್ಕೆ ಸೇರಿರುವ ಪಾರಿವಾಳಗಳಲ್ಲಿ ಮುನ್ನೂರಕ್ಕೂ ಹೆಚ್ಚು ಉಪಜಾತಿಗಳಿವೆ. ಅದರಲ್ಲಿ ನಮ್ಮ ಜೀವನಕ್ಕೆ ಹತ್ತಿರವಾಗಿರುವ ಪಾರಿವಾಳಗಳದ್ದು ಕೊಲಂಬಿಯಾ ಲಿವಿಯಾ ಅಂದರೆ blue rock pigeon ಎಂಬ ಪ್ರಜಾತಿ. ಮೂಲತಃ ಬೆಟ್ಟಗುಡ್ಡ, ಎತ್ತರದ ಪ್ರದೇಶದಲ್ಲಿ ಗೂಡು ಕಟ್ಟಿ ಸಂಸಾರ ಸಾಗಿಸುವ ಈ ಪಕ್ಷಿಗಳು ಕಾಡಿನಲ್ಲಿ ಆಹಾರದ ಲಭ್ಯತೆಗೆ ಅನುಗುಣವಾಗಿ ಬಾಣಂತನವನ್ನು ಯೋಜಿಸುತ್ತವೆ. ಕಾಡಿನಲ್ಲಿ ಶಿಕ್ರಾ, ಗಿಡುಗಗಳಂತಹ ಬೇಟೆಪಕ್ಷಿಗಳು ಪಾರಿವಾಳಗಳನ್ನು ಬೇಟೆಯಾಡಿ ತಿನ್ನುವುದರಿಂದ ಅಲ್ಲಿ ಅವುಗಳ ಸಂಖ್ಯೆ ನಿಯಂತ್ರಣದಲ್ಲಿರುತ್ತದೆ. ಆದರೆ ನಗರಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಿದೆ. ನಗರೀಕರಣ ಹೆಚ್ಚಿದಂತೆ ಕಾಡಿನ ವ್ಯಾಪ್ತಿ ಕಿರಿದಾಗಿ ಅಲ್ಲೆಲ್ಲ ಎತ್ತರದ ಬಹುಮಹಡಿ ಕಟ್ಟಡಗಳ ಸಂಖ್ಯೆ ಹೆಚ್ಚುತ್ತಿದೆ. ನೆಲೆ ಕಳೆದುಕೊಂಡ ಪಾರಿವಾಳಗಳು ಈ ಹೊಸ ಕಟ್ಟಡಗಳನ್ನೇ ಸೂರನ್ನಾಗಿಸಿಕೊಂಡಿವೆ. ನಗರೀಕರಣದ ಏಟಿಗೆ ಕಾಲುಕಿತ್ತ ಬೇಟೆಗಾರ ಪಕ್ಷಿಗಳ ಗೈರುಹಾಜರಿಯ ಜೊತೆಗೆ ವರ್ಷಪೂರ್ತಿ ಪಾರಿವಾಳಸ್ನೇಹಿ ಜನರಿಂದ ಆಹಾರ ಪೂರೈಕೆಯ ಮಜವನ್ನು ಸವಿಯುತ್ತ ಎಲ್ಲ ಮಾಸಗಳಲ್ಲೂ ವಂಶಾಭಿವೃದ್ಧಿಯನ್ನು ಮಾಡಿಕೊಳ್ಳುವ ಪಾರಿವಾಳಗಳ ಸಂಖ್ಯೆ ಏರುತ್ತಿದೆ.
ಏರುತ್ತಿರುವ ಪಾರಿವಾಳಗಳ ಸಂಖ್ಯೆ ಹಲವು ಸವಾಲುಗಳನ್ನು ಹುಟ್ಟುಹಾಕಿದೆ. ಕಡಿಮೆ ಸಮಯದಲ್ಲಿ ತಮ್ಮ ಸಂಖ್ಯೆಯನ್ನು ದ್ವಿಗುಣಗೊಳಿಸಿಕೊಳ್ಳುವ ಈ ಪಕ್ಷಿಗಳು ಬೇರೆಯ ಸ್ಥಳೀಯ ಪಕ್ಷಿಗಳ ಆವಾಸ ಮತ್ತು ಆಹಾರವನ್ನು ಆಕ್ರಮಿಸಿಕೊಂಡು ಅವುಗಳ ಬೆಳವಣಿಗೆಗೆ ಸವಾಲಾಗಿವೆ. ಜೊತೆಗೆ ಪಾರಿವಾಳಗಳು ಹಕ್ಕಿಯಿಂದ ಹಕ್ಕಿಗೆ ವರ್ಗವಾಗುವ ರೋಗಗಳ ವಾಹಕಗಳೂ ಹೌದು. ಈ ಎರಡು ಕಾರಣಗಳು ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸ್ಥಳೀಯ ಪಕ್ಷಿಗಳ ಅವನತಿಗೆ ಕಾರಣವಾಗುತ್ತಿದೆ. ಪಾರಿವಾಳಗಳ ಸಂಖ್ಯೆ ಹೆಚ್ಚಿದಷ್ಟೂ ಅವುಗಳು ವಿಸರ್ಜಿಸುವ ಹಿಕ್ಕೆಗಳ ತ್ಯಾಜ್ಯವೂ ದೊಡ್ಡ ಸವಾಲಾಗಿದೆ. ಗಾಳಿಯಲ್ಲಿ ತೇಲಾಡುವ ಪಾರಿವಾಳಗಳ ಹಿಕ್ಕೆಗಳನ್ನು ಹೆಚ್ಚುಕಾಲ ಉಸಿರಾಡುವುದರಿಂದ ಶ್ವಾಸಕೋಶದ ಅಲರ್ಜಿಗಳು ಉಂಟಾಗಬಹುದು. ಅವುಗಳು ವಿಸರ್ಜಿಸುವ ಹಿಕ್ಕೆಗಳು ಒಣಗಿ ಅವುಗಳಿಂದ ಹಿಸ್ಟೋಪ್ಲಾಸ್ಮಾ ಮತ್ತು ಕ್ರಿಪೋ›ಕೋಕಸ್ನಂತಹ ಶಿಲೀಂಧ್ರಗಳು ಗಾಳಿಯಲ್ಲಿ ಬಿಡುಗಡೆಯಾಗಿ ಅದು ಅಸ್ತಮಾದಂತಹ ಉಸಿರಾಟ ಸಂಬಂಧಿ ತೊಂದರೆಗಳನ್ನು ಹೊಂದಿರುವವರರಿಗೆ ಮಾರಕವಾಗುವ ಸಾಧ್ಯತೆ ಹೆಚ್ಚು. ಈ ಪಟ್ಟಿಗೆ ಇದೀಗ ಹೈಪರ್ ಸೆನ್ಸಿಟಿವ್ ನ್ಯೂಮೋನಿಯಾ ಕೂಡ ಸೇರಿಕೊಂಡಿದೆ.
ಒಂದು ಅಂದಾಜಿನಂತೆ 2000ರಿಂದ 2003ರೊಳಗೆ ಭಾರತದಲ್ಲಿ ಪಾರಿವಾಳಗಳ ಸಂಖ್ಯೆ ಶೇಕಡ ನೂರೈವತ್ತರ ಪ್ರಮಾಣದಲ್ಲಿ ವೃದ್ಧಿಯನ್ನು ಕಂಡಿದೆ. ಇದನ್ನು ತಕ್ಷಣ ಸರಿಪಡಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಪೆಡಂಭೂತವಾಗುವ ಸಾಧ್ಯತೆಗಳಿವೆ. ಹೀಗಾಗಿ ಪಾರಿವಾಳಗಳ ಸಂಖ್ಯೆಗೆ ಕಡಿವಾಣ ಹಾಕುವ ಪ್ರಯತ್ನಗಳು ವೇಗ ಪಡೆದುಕೊಳ್ಳುತ್ತಿವೆ. ಈ ನಡುವೆ ಕೋರ್ಟ್ ಆಜ್ಞೆಯಂತೆ ಮುಚ್ಚಲಾಗಿದ್ದ ಕಬೂತರ್ ಖಾನೆಗಳನ್ನು ಕೆಲ ಪಾರಿವಾಳ ಪ್ರೇಮಿಗಳ ಗುಂಪು ಒಡೆದು ಹಾಕಿರುವ ಘಟನೆಗಳೂ ವರದಿಯಾಗಿವೆ. ಇತ್ತ ಮುಂಬೈನಲ್ಲಿ ಕಬೂತರ್ ಜಾ ಜಾ ಎಂಬ ಕೂಗು ವೇಗ ಪಡೆದುಕೊಳ್ಳುತ್ತಿದ್ದರೆ ಅತ್ತ ಅಮೆರಿಕದ ಫ್ಲೋರಿಡಾದಲ್ಲಿ ಇಂತಹುದೇ ಪರಿಸ್ಥಿತಿ ಎದುರಿಸುತ್ತಿರುವ ಸ್ಥಳೀಯ ಆಡಳಿತ ವಿನೂತನ ಸಾಹಸಕ್ಕೆ ಕೈ ಹಾಕಿದೆ.
ಹನ್ನೆರಡರಿಂದ ಹದಿನಾರು ಅಡಿ ಉದ್ದ ಬೆಳೆಯುವ ಭಾರಿ ಗಾತ್ರದ ಬರ್ವಿು ಹೆಬ್ಬಾವುಗಳ ಮೂಲ ಆಗ್ನೇಯ ಏಷ್ಯಾ. ಅದರಲ್ಲೂ ವಿಶೇಷವಾಗಿ ದಕ್ಷಿಣ ಚೀನಾ, ಮ್ಯಾನ್ಮಾರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂನಲ್ಲಿ ಹೆಚ್ಚಾಗಿ ಕಂಡುಬರುವ ಈ ಹೆಬ್ಬಾವುಗಳನ್ನು 1980ರಿಂದ ವಿದೇಶಗಳಿಂದ ಶೋಕಿಗಾಗಿ ತಂದು ಸಾಕುವ ಖಯಾಲಿ ಅಮೆರಿಕದಲ್ಲಿ ಹೆಚ್ಚಾಗಿತ್ತು. ಹೀಗೆ ಕದ್ದು ತಂದ ಹಾವಿನ ಮರಿಗಳಲ್ಲಿ ಕೆಲವು ತಪ್ಪಿಸಿಕೊಂಡರೆ, ಮತ್ತೆ ಕೆಲವೆಡೆ ಮಾಲೀಕರೇ ಸುಸ್ತಾಗಿ ಹಾವಿನ ಮರಿಗಳನ್ನು ಹೊರಗೆ ಬಿಟ್ಟ ನಿದರ್ಶನಗಳಿವೆ. ಅಲ್ಪಸಮಯದಲ್ಲೇ ತಮ್ಮ ಸಂಖ್ಯೆಯನ್ನು ಏರಿಸಿಕೊಂಡು ಅಲ್ಲಿನ ಸ್ಥಳೀಯ ಪ್ರಾಣಿಪಕ್ಷಿಗಳನ್ನು ನುಂಗುತ್ತ ಅವುಗಳ ಪಾಲಿಗೆ ಯಮಕಂಟಕವಾಗಿರುವುದು ಅಲ್ಲಿನ ಅಧಿಕಾರಿಗಳ ಮಂಡೆಬಿಸಿಮಾಡಿದೆ. ಮೂಲಗಳ ಪ್ರಕಾರ, ಈ ಹಾವುಗಳು ಫ್ಲೋರಿಡಾದ ಕಾಡಿಗೆ ಪ್ರವೇಶಿಸಿದ ಮೇಲೆ ಅಲ್ಲಿನ ಸ್ಥಳೀಯ ಮತ್ತು ಮೂಲನಿವಾಸಿ ಪ್ರಾಣಿಗಳ ಸಂಖ್ಯೆ ಶೇಕಡ ತೊಂಬತೆôದರಷ್ಟು ಕಡಿಮೆಯಾಗಿದೆ. ಹೀಗೆ ಬಿಟ್ಟರೆ ಹಾವುಗಳು ಸ್ಥಳೀಯ ಜೀವವೈವಿಧ್ಯವನ್ನು ಸಂಪೂರ್ಣವಾಗಿ ನಾಶಮಾಡಲಿವೆಯೆಂಬ ವಿಷಯ ಅರಿತ ಸ್ಥಳೀಯ ಆಡಳಿತ ಹಲವಾರು ತಂತ್ರಗಳಿಗೆ ಮೊರೆ ಹೋಯಿತು. ಮೊಲಗಳನ್ನು ಬಳಸಿ ಅವಿತು ಕುಳಿತ ಬರ್ವಿು ಹೆಬ್ಬಾವುಗಳನ್ನು ಹೊರಗೆ ಬರುವಂತೆ ಮಾಡಿ ಹಾವಾಡಿಗರಿಂದ ಹಿಡಿಸುವುದು ಇದರಲ್ಲಿ ಪ್ರಮುಖವಾದುದು.
ಬರ್ವಿು ಹೆಬ್ಬಾವುಗಳ ಪ್ರಮುಖ ತೊಂದರೆಯೆಂದರೆ ಅವುಗಳ ಸಂತಾನಾಭಿವೃದ್ಧಿಯ ವೇಗ. ಪ್ರತಿ ಎರಡು ವರ್ಷಗಳಿಗೊಮ್ಮೆ ನೂರರ ಆಸುಪಾಸಿನಲ್ಲಿ ಮೊಟ್ಟೆಗಳನ್ನಿಡುವ ಈ ಹೆಬ್ಬಾವುಗಳು ಅದೇ ಕಾರಣಕ್ಕೆ ಬಲುಬೇಗ ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತವೆ. ಮೊಲಗಳನ್ನು ಬಿಟ್ಟು ಇವುಗಳನ್ನು ಹೊರಸೆಳೆಯುವ ಪ್ರಯತ್ನದಲ್ಲಿ ಈ ಹೆಬ್ಬಾವುಗಳ ಜೊತೆಗೆ ಬೇರೆ ಹಾವುಗಳೂ ಸೇರಿಕೊಂಡು ಆಟದ ಮಜಾ ಕೆಡಿಸುತ್ತಿದ್ದವು. ಈ ಎಲ್ಲ ತೊಂದರೆಗಳಿಗೆ ಫ್ಲೋರಿಡಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ರ್ತಾಕ ಅಂತ್ಯ ಕಾಣಿಸುವತ್ತ ವಿನೂತನ ಹೆಜ್ಜೆಯನ್ನಿಟ್ಟಿದ್ದಾರೆ. ಕೃತಕ ಬುದ್ಧಿಮತ್ತೆಯಿಂದ ನಿಯಂತ್ರಿತ ರೋಬಾಟಿಕ್ ಮೊಲಗಳನ್ನು ರೂಪಿಸಿದ್ದಾರೆ. ಗಾತ್ರ, ರೂಪ ಮತ್ತು ಹಾವಭಾವಗಳಲ್ಲಿ ಥೇಟು ಮೊಲಗಳನ್ನೇ ಅನುಕರಿಸುವ ಈ ಯಾಂತ್ರಿಕ ಮೊಲಗಳನ್ನು ಮನುಷ್ಯರನ್ನೇ ಯಾಮಾರಿಸುವ ಮಟ್ಟಿಗೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹೆಬ್ಬಾವುಗಳು ಮೈವಾಸನೆ ಮತ್ತು ದೇಹದ ಶಾಖದಿಂದ ತಮ್ಮ ಬೇಟೆಯನ್ನು ಗುರುತಿಸಿ ಬೆನ್ನಟ್ಟುವ ಕಾರಣಕ್ಕೆ ಈ ಮೊಲಗಳಲ್ಲಿ ಪುಟ್ಟ ವಿದ್ಯುತ್ ಹೀಟರ್ ಮತ್ತು ಮೈವಾಸನೆಯನ್ನು ಹೊರಸೂಸುವ ದ್ರವ್ಯಗಳಿವೆ. ಅವುಗಳನ್ನು ಮೊಲದ ದೇಹಕ್ಕೆ ಹೊಂದುವಂತೇ ರೂಪಿಸಲಾಗಿದೆ. ಮಿಕವೇ ತನ್ನತ್ತ ಬರುತ್ತಿರುವುದನ್ನು ಕಂಡು ಖುಷಿಯಾಗಿ ಈ ಆಧುನಿಕ ಮೇನಕೆಯರ ಜಾಲಕ್ಕೆ ಬೀಳುವ ಹಾವುಗಳು ತಮಗೆ ಬೇಕಾಗಿರುವ ಬರ್ವಿು ಹೆಬ್ಬಾವುಗಳೆಂದು ಗೊತ್ತಾದ ತಕ್ಷಣವೇ ಮೊಲಗಳು ಅವುಗಳನ್ನು ಮೈದಾನಕ್ಕೆ ಕರೆತಂದು ಅವುಗಳಿಗಾಗಿಯೇ ಕಾಯುತ್ತಿರುವ ಬೇಟೆಗಾರರ ಜಾಲದಲ್ಲಿ ಸಿಲುಕಿಸುತ್ತವೆ. ಸದ್ಯಕ್ಕೆ ಮೊದಲ ಹಂತದಲ್ಲಿ ಐವತ್ತು ಮೊಲಗಳನ್ನು ಹೆಬ್ಬಾವುಗಳ ಬೇಟೆಗಾಗಿ ಕಾಡಿಗೆ ಬಿಟ್ಟಿದ್ದು, ಈ ನೂತನ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರೆತಿದೆ. ಈ ಮೂಲಕ ಮಧುಜಾಲ ಅಂದರೆ ಹನಿಟ್ರಾ್ಯಪನ್ನು ಇಂದಿನ ತಂತ್ರಜ್ಞಾನ ಪ್ರಾಣಿಗಳಿಗೂ ವಿಸ್ತರಿಸಿದೆ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)