

ಶಿವಮೊಗ್ಗ: ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿ ಹಾಗೂ ಕುದುರೆಗಳ ಬಗ್ಗೆ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ದೂರು ಬಂದಿವೆ. ಇನ್ನು ಮೂರು ದಿನಗಳಲ್ಲಿ ಸಂಬಂಧಪಟ್ಟ ಮಾಲೀಕರು ಇವುಗಳನ್ನು ನಿಯಂತ್ರಿಸದಿದ್ದರೆ ಪಾಲಿಕೆಯಿಂದಲೇ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಚಿದಾನಂದ ವಟಾರೆ ಎಚ್ಚರಿಸಿದ್ದಾರೆ.
ಪಾಲಿಕೆ ಅನುಮತಿ ಇಲ್ಲದೆ ಹಂದಿಗಳನ್ನು ಸಾಕುತ್ತಿರುವುದು ಕರ್ನಾಟಕ ಪೌರ ನಿಗಮಗಳ ಅಧಿನಿಯಮದ ಅನ್ವಯ ಕಾನೂನುಬಾಹಿರ. ಈ ಬಗ್ಗೆ ತಿಳಿವಳಿಕೆ ನೀಡಿದ್ದರೂ ಮಾಲೀಕರು ಕ್ರಮ ಕೈಗೊಂಡಿಲ್ಲ. ಸಾಕಣೆೆದಾರರು 3 ದಿನದೊಳಗೆ ಹಂದಿಗಳನ್ನು ಸಾರ್ವಜನಿಕ ಸ್ಥಳದಿಂದ ಖಾಲಿ ಮಾಡದೇ ಇದ್ದರೆ ಅವುಗಳನ್ನು ಬೀಡಾಡಿ ಹಂದಿಗಳೆಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಇದರಿಂದ ಹಂದಿ ಮಾಲೀಕರಿಗೆ ಉಂಟಾಗುವ ನಷ್ಟಕ್ಕೆ ಪಾಲಿಕೆ ಜವಾಬ್ದಾರಿಯಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಕುದುರೆಗಳ ಸಂಖ್ಯೆ ಸಹ ಹೆಚ್ಚಾಗಿದ್ದು ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಅಪಘಾತಗಳೂ ಸಂಭವಿಸುತ್ತಿವೆ. ಗೋಪಿವೃತ್ತ, ಎಎ ವೃತ್ತ, ಸಾಗರ ರಸ್ತೆ, ಬಾಲರಾಜ ಅರಸ್ ರಸ್ತೆ, ದುರ್ಗಿಗುಡಿ, ವಿದ್ಯಾನಗರ, ಎಂಆರ್‌ಎಸ್ ಸರ್ಕಲ್, ಸೂಳೆಬೈಲ್, ಬೈಪಾಸ್ ರಸ್ತೆ, ಕುವೆಂಪು ರಸ್ತೆ, ಸವಳಂಗ ರಸ್ತೆ, ವಿನೋಬನಗರ, ಸಾಗರ ರಸ್ತೆ, ಮುಂತಾದ ಪ್ರಮುಖ ರಸ್ತೆಗಳಲ್ಲಿ ಕುದುರೆಗಳ ಹಿಂಡು ಕಂಡುಬರುತ್ತಿವೆ. ಮೂರು ದಿನಗಳಲ್ಲಿ ಇವುಗಳನ್ನು ಸುಪರ್ದಿಗೆ ಪಡೆಯದೆ ಇದ್ದಲ್ಲಿ ಪಾಲಿಕೆಯಿಂದಲೇ ಇವುಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.