

ಖಂಡ್ವಾ: ಭಾರತದ ನೋಟುಗಳ ಮೇಲೆ ಲಕ್ಷ್ಮೀ ದೇವಿ ಚಿತ್ರವನ್ನು ಮುದ್ರಿಸಿದರೆ ದೇಶದ ಹಣಕಾಸು ಪರಿಸ್ಥಿತಿ ಸುಧಾರಿಸಬಹುದು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದ ವ್ಯಾಖ್ಯಾನಮಾಲಾ ಉಪನ್ಯಾಸ ಸರಣಿಯಲ್ಲಿ ಪಾಲ್ಗೊಂಡಿದ್ದ ಸುಬ್ರಹ್ಮಣಿಯನ್ ಸ್ವಾಮಿ ಬಳಿ ಮಾಧ್ಯಮದವರು, ಇಂಡೋನೇಷಿಯಾದ ಕರೆನ್ಸಿಗಳ ಮೇಲೆ ಗಣಪತಿಯ ಚಿತ್ರವನ್ನು ಮುದ್ರಿಸುವ ಬಗ್ಗೆ ಪ್ರಶ್ನಿಸಿದರು.
ಅದಕ್ಕೆ ಉತ್ತರಿಸಿದ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿಯವರೇ ಇದಕ್ಕೆ ಉತ್ತರಿಸಬೇಕು. ದೇವ ಗಣೇಶ ವಿಘ್ನಗಳನ್ನು ನಿವಾರಿಸುತ್ತಾನೆ. ಭಾರತೀಯ ನೋಟುಗಳ ಮೇಲೆ ಲಕ್ಷ್ಮೀ ದೇವಿಯ ಚಿತ್ರವನ್ನು ಮುದ್ರಿಸಿದರೆ ಇನ್ನೂ ಚೆನ್ನಾಗಿರುತ್ತದೆ. ಹಣಕಾಸು ಸ್ಥಿತಿಯೂ ಸುಧಾರಣೆಯಾಗುತ್ತದೆ. ಹಾಗೊಮ್ಮೆ ನಿರ್ಧಾರ ಮಾಡಿದರೆ ನನ್ನ ಸಹಮತವಂತೂ ಖಂಡಿತ ಇದೆ ಎಂದು ಹೇಳಿದರು. ಅಲ್ಲದೆ ತಮ್ಮ ಮಾತುಗಳ ಬಗ್ಗೆ ಯಾರೂ ತಪ್ಪು ತಿಳಿದುಕೊಳ್ಳಬೇಡಿ, ಕೆಟ್ಟದಾಗಿ ಭಾವಿಸಬೇಡಿ ಎಂದೂ ತಿಳಿಸಿದರು.