

ನವದೆಹಲಿ: ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ ಕೊನೆಗೂ ಸಿದ್ಧವಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಕೂ ಖಾತೆಯಲ್ಲಿ ಅತ್ಯಾಕರ್ಷಕ ರೈಲಿನ ಕೋಚ್ಗಳ ಪರಿಕಲ್ಪನೆಯ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಭಾರೀ ವೈರಲ್ ಆಗಿದೆ.
ಸ್ಲೀಪರ್ ಕೋಚ್ ಹೊಸ ರೈಲುಗಳ ಚಾಲನೆಗೆ 2024ಕ್ಕೆ ಹಸಿರು ನಿಶಾನೆ ಸಿಗುವ ನಿರೀಕ್ಷೆ ಇದೆ. ಈ ರೈಲುಗಳು ಅತಿ ವೇಗ ಮತ್ತು ಹೆಚ್ಚಿನ ಆರಾಮದಾಯಕ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲಿದೆ.
ವಂದೇ ಭಾರತ್ (ಸ್ಲೀಪರ್ ವರ್ಷನ್) ಪರಿಕಲ್ಪನೆಯ ರೈಲು ಶೀಘ್ರದಲ್ಲೇ ಬರಲಿದೆ.... 2024ರ ಆರಂಭದಲ್ಲಿ ಎಂದು ಕೇಂದ್ರ ರೈಲ್ವೆ ಸಚಿವರು ಕೂನಲ್ಲಿ ಬರೆದುಕೊಂಡಿದ್ದಾರೆ.
ವಿಶಾಲವಾದ ಬರ್ತ್ಗಳು, ಪ್ರಕಾಶಮಾನವಾದ ಒಳಾಂಗಣಗಳು, ವಿಶಾಲವಾದ ಶೌಚಾಲಯಗಳು, ಮಿನಿ ಪ್ಯಾಂಟ್ರಿ ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಸೇರಿದಂತೆ ವಂದೇ ಭಾರತ್ ಸ್ಲೀಪರ್ ಕೋಚ್ಗಳಲ್ಲಿ ಅನೇಕ ಹೊಸ ವೈಶಿಷ್ಟ್ಯಗಳು ಇರಲಿವೆ. ಹೊಸ ರೈಲುಗಳು ಪ್ರಸ್ತುತ ಕೋಚ್‌ಗಳಿಗಿಂತ ಹೆಚ್ಚು ಶಕ್ತಿ, ಸಮರ್ಥ ಮತ್ತು ಪರಿಸರ ಸ್ನೇಹಿಯಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.
ಪ್ರಯಾಣಿಕರು ರಾತ್ರಿಯಿಡೀ ಹೆಚ್ಚಿನ ವೇಗದ ರೈಲುಗಳಲ್ಲಿ ದೂರದವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುವುದರಿಂದ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಪರಿಚಯವು ಭಾರತೀಯ ರೈಲ್ವೆ ಇಲಾಖೆಯ ಮಹತ್ವದ ಬೆಳವಣಿಗೆಯಾಗಿದೆ. ಪ್ರಗತಿಪರ ಮತ್ತು ಸ್ವಾವಲಂಬಿ ಭಾರತದ ಸಂಕೇತವಾಗಿ ಕಾಣುವ, ಸ್ಥಳೀಯ ಸೆಮಿ-ಹೈ ಸ್ಪೀಡ್ ರೈಲು ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವೇಗ, ಸುರಕ್ಷತೆ ಮತ್ತು ಸೇವೆ ಈ ರೈಲಿನ ವಿಶಿಷ್ಟ ಲಕ್ಷಣಗಳಾಗಿವೆ. ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಭರವಸೆಯನ್ನು ಒದಗಿಸಲಿದೆ.
ಅಂದಹಾಗೆ ನವದೆಹಲಿ ಮತ್ತು ವಾರಣಾಸಿ ನಡುವಿನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 15ರಂದು ಫ್ಲ್ಯಾಗ್ ಆಫ್ ಮಾಡಿದರು. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ಇನ್ನು ತಯಾರಿಸಲಾಗುತ್ತದೆ. ಇದು ಭಾರತದ ಮೇಕ್ ಇನ್ ಇಂಡಿಯಾ ಉಪಕ್ರಮದ ಸಂಕೇತವಾಗಿದೆ ಮತ್ತು ಭಾರತದ ಇಂಜಿನಿಯರಿಂಗ್ ಸಾಮರ್ಥ್ಯವನ್ನು ತೋರಿಸುತ್ತದೆ. (ಏಜೆನ್ಸೀಸ್)