ಪಾರಂಪರಿಕ ತಾಣದಲ್ಲಿ ಸೆಕ್ಸಿ ಪೋಸ್​ ಕೊಟ್ಟ ಮಾಡೆಲ್​; ಫೋಟೋಗ್ರಫರ್​​ಗೂ ಕಾದಿತ್ತು ಗಂಡಾಂತರ

model 2
Published on

ಕೈರೋ: ಫೋಟೋಶೂಟ್​ ಗೋಜಿಗೆ ಬೀಳುವ ಮಾಡೆಲ್​ಗಳು ವಾದ ವಿವಾದಗಳಿಗೆ ಸಿಲುಕಿಕೊಳ್ಳುವುದು ಮಾಮೂಲಿ. ಇದೀಗ ಈ ಮಾಡೆಲ್​ ಕೂಡ ಅಂತದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶ್ವ ಪಾರಂಪರಿಕ ತಾಣದಲ್ಲಿ ಸೆಕ್ಸಿ ಲುಕ್​ ತೋರಿದ ಮಾಡೆಲ್​ ಮತ್ತು ಆಕೆಯ ಚಿತ್ರವನ್ನು ಸೆರೆ ಹಿಡಿದ ಫೋಟೋಗ್ರಾಫರ್​ ಪೊಲೀಸರ ವಶವಾಗಿದ್ದಾರೆ.

ಈಜಿಪ್ಟ್​ನ ಪ್ರಸಿದ್ಧ ಮಾಡೆಲ್​ ಸಲ್ಮಾ ಇ ಶೈಮಿ ವಿವಾದಕ್ಕೀಡಾದಾಕೆ. ಈಕೆ ಇತ್ತೀಚೆಗೆ ಸಕ್ಕರ ನೆಕ್ರೊಪೊಲಿಸ್​ ಹೆಸರಿನ ಪಾರಂಪರಿಕ ತಾಣದ ಜೋಜರ್​ ಪಿರಾಮಿಡ್​ ಬಳಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾಳೆ. ಈಜಿಪ್ಟ್​ನ ಸಾಂಪ್ರದಾಯಿಕ ಉಡುಗೆಗೇ ಕೊಂಚ ಸೆಕ್ಸಿ ಟಚ್​ ಕೊಚ್ಚು ಮಾಡಲಾಗಿದ್ದ ಡ್ರೆಸ್​ ತೊಟ್ಟ ಮಾಡೆಲ್​ ಪಡ್ಡೆ ಹುಡುಗರ ನಿದ್ದೆ ಕದಿಯುವ ರೀತಿಯಲ್ಲಿ ಫೋಸ್​ ಕೊಟ್ಟಿದ್ದಾರೆ. ಆಕೆಯ ಚಿತ್ರಗಳನ್ನು ಹುಸೈನ್​ ಮೊಹಮ್ಮದ್​ ಹೆಸರಿನ ಫೋಟೋಗ್ರಾಫರ್​ ಸೆರೆ ಹಿಡಿದಿದ್ದಾನೆ.

ಈ ಫೋಟೋಗಳನ್ನು ಮಾಡೆಲ್​ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವ ತನಕ ಯಾವುದೇ ಸಮಸ್ಯೆಯಾಗಿರಲಿಲ್ಲ. ಫೋಟೋವನ್ನು ಪೋಸ್ಟ್​ ಮಾಡಿದ ತಕ್ಷಣ ಸಾಲು ಸಾಲು ಮೆಚ್ಚುಗೆಯ ಜತೆ ವಿರೋಧಗಳೂ ಕೇಳಿಬಂದಿವೆ. ಯುನೆಸ್ಕೋ ಇಂದ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿರುವ ಈ ಸ್ಥಳದಲ್ಲಿ ಈ ರೀತಿ ಫೋಟೋ ಶೂಟ್​ಗೆ ಅವಕಾಶವಿದೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ಅನುಮತಿ ಇಲ್ಲದೆ ಫೋಟೋಶೂಟ್​ ಮಾಡಿರುವ ಹುಸೈನ್​ ಮತ್ತು ಮಾಡೆಲ್​ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಲ್ಲಿ ಅನುಮತಿ ಪಡೆಯದೆ ಫೋಟೋಶೂಟ್​ ಮಾಡುವಂತಿಲ್ಲ ಎಂದು ನನಗೆ ಗೊತ್ತಿರಲಿಲ್ಲ ಎಂದು ಮಾಡೆಲ್​ ನ್ಯಾಯಾಲಯದ ಮುಂದೆ ಹೇಳಿರುವುದಾಗಿ ವರದಿಯಾಗಿದೆ. ಈಜಿಪ್ಟ್​ನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಈ ಫೋಟೋಶೂಟ್​ ಮಾಡಿಸಿಕೊಂಡಿದ್ದಾಗಿ ಆಕೆ ಹೇಳಿದ್ದಾಳೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net