

ರಾಣೆಬೆನ್ನೂರ: ಸಮಾಜದಲ್ಲಿ ನಡೆಯುವ ಘಟನೆಗಳನ್ನು ಒಂದೇ ಒಂದು ಫೋಟೊ ಮೂಲಕ ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಛಾಯಾಗ್ರಾಹಕರ ಪಾತ್ರ ಮಹತ್ವದ್ದಾಗಿದೆ ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಹೇಳಿದರು.
ತಾಲೂಕು ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ನಗರದ ಚನ್ನೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವಛಾಯಾಗ್ರಹಣ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ವೃತ್ತಿಪರ ಛಾಯಾಗ್ರಾಹಕ ಸಂಘಟನೆ ಒಕ್ಕೂಟದ ಅಧ್ಯಕ್ಷ ವಿಲ್ಸನ್ ಜಾರ್ಜ್ ಗೊನ್ಸಾಲ್ವಸ್ ಮಾತನಾಡಿ, ಸರ್ಕಾರ ಕಾರ್ಯನಿರತ ಪತ್ರಕರ್ತರಿಗೆ ನೀಡಿದ ವಿವಿಧ ಸೌಲಭ್ಯದಂತೆ ಛಾಯಾಗ್ರಾಹಕರಿಗೂ ನೀಡಬೇಕು ಎಂದರು.
ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಜಾಧವ ಅಧ್ಯಕ್ಷತೆ ವಹಿಸಿದ್ದರು.
ಒಕ್ಕೂಟದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ರಿತ್ತಿ, ಜಿಲ್ಲಾ ನಿರ್ದೇಶಕ ದೇವರಾಜ ಹರನಗಿರಿ, ಮೌನೇಶ ಕಮ್ಮಾರ, ಗುರುರಾಜ ಪಾಟೀಲ, ನಾಗರಾಜ ಅರ್ಕಾಚಾರಿ, ಜಿ.ಎಸ್. ಬಾಬು, ವಿಜಯ ಜಾಧವ, ಉಮೇಶ ಹರಿಸತ್ಯಪ್ಪನವರ, ಶಂಭುಗೌಡ ಅಂದಾನಿಗೌಡ್ರ, ಶಿವಾನಂದ ಕಾಸಂಬಿ, ರುದ್ರಗೌಡ, ಮಂಜುನಾಥ ಗಾಂಡೊಳ್ಕರ ಮತ್ತಿತರರು ಉಪಸ್ಥಿತರಿದ್ದರು.