ಗ್ರಾಮೀಣ ಪಿಎಚ್‌ಸಿಗಳ ಸೇವೆ ಅನನ್ಯ: ಶಾಸಕ ಮಂಜುನಾಥ್ ಮೆಚ್ಚುಗೆ

3 bidadi 1
Published on

ಬಿಡದಿ :  ತಳ ಹಂತದಲ್ಲಿ ಆರೋಗ್ಯ ಸೇವೆ ನೀಡುವಲ್ಲಿ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶಾಸಕ ಎ.ಮಂಜುನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಡದಿ ಪುರಸಭೆ ವ್ಯಾಪ್ತಿಯ ಇಟ್ಟಮಡು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನವೀಕರಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಬಾಷ್ ಇಂಡಿಯಾ ಪ್ರತಿಷ್ಠಾನದ ಸಿಎಸ್‌ಆರ್ ಅನುದಾನದಲ್ಲಿ ಆರೋಗ್ಯ ಕೇಂದ್ರದ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶಿಕ್ಷಣ, ಆರೋಗ್ಯ, ಅಂಗನವಾಡಿ ನಿರ್ಮಾಣ, 800 ಅಂಗನವಾಡಿ ಕಾರ್ಯಕರ್ತರಿಗೆ ಗರ್ಭಕೋಶ ತಪಾಸಣೆಯಂತಹ ಹತ್ತು ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಲಾಗಿದೆ. ಇದಕ್ಕೆ ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ಪುಂಡಲೀಕ ಕಾಮತ್ ಅವರ ಜನಪರ ಕಾಳಜಿ ಕಾರಣ ಎಂದರು.

ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ನೀರು ನಿಲ್ಲದಂತೆ ಇಳಿಜಾರು ಮಾಡಿ, ಟೈಲ್ಸ್ ಅಳವಡಿಸಿ ಗುಣಮಟ್ಟದ ಕೆಲಸ ಮಾಡಿದರೆ ಮಾಡಿದ ಕಾರ್ಯ ಶಾಶ್ವತವಾಗಿ ಉಳಿಯುತ್ತದೆ ಎಂದು ಗುತ್ತಿಗೆದಾರರಿಗೆ ಶಾಸಕ ಮಂಜುನಾಥ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ಪ್ರಖರತೆ ಬಗ್ಗೆ ತಿಳಿಯಲು ಸಾಧ್ಯವಾಗ ವ್ಯಾಧಿ ಕರೊನಾ ಬಯಾಲಜಿಕಲ್ ಯುದ್ದ ಎಂದು ಬಣ್ಣಿಸಿದರು. ಸೂಕ್ತ ಸಮಯದಲ್ಲಿ ಆಮ್ಲಜನಕ ಸಿಕ್ಕಿದ್ದರೆ ಜನರು ಬದುಕುಳಿಯುತ್ತಿದ್ದರು. ಆರೋಗ್ಯ ವಿಷಯವಾಗಿ ಬಾಷ್ ಕಂಪನಿಯ ಸೇವೆ ಶ್ಲಾಘನೀಯ ಎಂದರು.

ಡಾ.ಪುಂಡಲೀಕ ಕಾಮತ್ ಮಾತನಾಡಿ, ಸಂಸ್ಥೆಯ ಸಿಎಸ್‌ಆರ್ ಅನುದಾನದಲ್ಲಿ ಮತ್ತು ಸರ್ಕಾರದ ಕಾಯಕಲ್ಪ ಮಾರ್ಗಸೂಚಿಗಳ ಅನುಸಾರವಾಗಿ ಇಟ್ಟಮಡು ಮತ್ತು ಸಾತನೂರು ಪಿಎಚ್‌ಸಿ ಗಳನ್ನು ನವೀಕರಣ ಮೂಲಕ ಪುನಶ್ಚೇತನಗೊಳಿಸಿ, ಸಾರ್ವಜನಿಕರ ಆರೋಗ್ಯ ವ್ಯವಸ್ಥೆಯನ್ನು ಬಲವರ್ಧನೆ ಮಾಡಲಾಗುತ್ತಿದೆ. ಸಾರ್ವಜನಿಕರು ಆರೋಗ್ಯ ಸೇವೆಗಳ ಮಹತ್ವ ತಿಳಿದಿದ್ದೆ ಕರೊನಾ ಆರಂಭವಾದ ಮೇಲೆ ಎಂದರು.

ಜೆಡಿಎಸ್ ಮುಖಂಡ ಸೋಮಣ್ಣ ಮಾತನಾಡಿದರು. ವೈದ್ಯೆ ಡಾ. ಪೂಜಾ, ಜೆಡಿಎಸ್ ಮುಖಂಡರಾದ ಪುಟ್ಟಪ್ಪ, ಆರ್.ರಮೇಶ್, ಜಿಪಂ ಮಾಜಿ ಸದಸ್ಯ ರಾಮಚಂದ್ರಯ್ಯ, ಬಾಷ್ ಕಂಪನಿ ಇಂಜಿನಿಯರಿಂಗ್ ವಿಭಾಗದ ರವಿಕುಮಾರ್, ಪುರಸಭೆ ಮಾಜಿ ಸದಸ್ಯ ಶಿವಕುಮಾರ್, ಗ್ರಾಮದ ಮುಖಂಡರಾದ ಕೃಷ್ಣಪ್ಪ, ಬೋರೇಗೌಡ, ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net