ಫೈಜರ್​ ತುರ್ತುಬಳಕೆಗೆ ಒಕೆ : ಡಬ್ಲ್ಯುಎಚ್​ಒ ಅನುಮೋದಿಸಿದ ಮೊದಲ ಕೋವಿಡ್​-19 ಲಸಿಕೆ

Pfizer Corona Vaccine
Published on

ಜಿನೇವಾ: ಕೋವಿಡ್ 19 ಸೋಂಕು ಹರಡಲಾರಂಭಿಸಿದ ನಂತರದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೋವಿಡ್​-19 ಲಸಿಕೆಯೊಂದನ್ನು ತುರ್ತುಬಳಕೆಗಾಗಿ ಅನುಮೋದಿಸಿದೆ. ಇದರೊಂದಿಗೆ ಡಬ್ಲ್ಯುಎಚ್​ಒ ಮಾನ್ಯತೆ ಪಡೆದ ಮೊದಲ ಕೋವಿಡ್​ -19 ಲಸಿಕೆ ಎಂಬ ಕೀರ್ತಿಗೆ ಫೈಜರ್ ಪಾತ್ರವಾಗಿದೆ.

ಫೈಜರ್​-ಬಯೋಎನ್​ಟೆಕ್​ ಕೋವಿಡ್ -19 ಲಸಿಕೆಯ ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಗುಣಮಟ್ಟವನ್ನು ಜಗತ್ತಿನಾದ್ಯಂತ ಇರುವ ಪರಿಣತರು ಪರಾಮರ್ಶೆಗೊಳಪಡಿಸಿದ್ದರು. ಅದರಂತೆ, ಲಸಿಕೆಯು ಸುರಕ್ಷತೆ, ಕಾರ್ಯಕ್ಷಮತೆ ಮತ್ತು ಗುಣಮಟ್ಟದ ಬಹುತೇಕ ಮಾನದಂಡಗಳ ಚೌಕಟ್ಟಿನೊಳಗೇ ಇದೆ ಎಂಬುದನ್ನು ಅವರೆಲ್ಲ ದೃಢೀಕರಿಸಿದ್ದಾರೆ. ಸಂಭಾವ್ಯ ಅಪಾಯಗಳನ್ನು ಎದುರಿಸುವುದಕ್ಕೆ ಇದನ್ನು ಬಳಸುವುದರಿಂದ ಆಗುವ ಪ್ರಯೋಜನಗಳನ್ನೂ ಅವರು ದಾಖಲಿಸಿದ್ದಾರೆ.

ಹೀಗೆ ಪರಿಣತರಿಂದ ಸಿಕ್ಕಿರುವ ಹಿಮ್ಮಾಹಿತಿ ಆಧರಿಸಿ ಈ ಲಸಿಕೆಯನ್ನು ಕೋವಿಡ್ 19 ಚಿಕಿತ್ಸೆಯ ತುರ್ತುಬಳಕೆಗೆ ಉಪಯೋಗಿಸಬಹುದು ಎಂದು ಡಬ್ಲ್ಯುಎಚ್​ಒ ಶಿಫಾರಸು ಮಾಡಿದೆ. ಫೈಜರ್ ಲಸಿಕೆಯನ್ನು -60 ಡಿಗ್ರಿ ಸೆಂಟಿಗ್ರೇಟ್​ನಿಂದ -90 ಡಿಗ್ರಿ ಸೆಂಟಿಗ್ರೇಡ್​ ನಲ್ಲಿ ದಾಸ್ತಾನಿರಿಸಬೇಕು. ಇಂತಹ ಅಲ್ಟ್ರಾ ಕೋಲ್ಡ್​ ಚೇನ್​ ಉಪಕರಣ ಎಲ್ಲಿ ಲಭ್ಯವಿಲ್ಲವೋ ಅಲ್ಲಿ ಇದನ್ನು ಶೇಖರಿಸಿಡುವುದು ದುಸ್ತರವಾಗಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net