

ಬ್ರಿಟನ್: ಕೋವಿಡ್-19 ವಿರುದ್ಧ ಜಗತ್ತಿನ ಹಲವು ಕಂಪನಿಗಳು ಸಂಶೋಧನೆ ಹಾಗೂ ಪ್ರಯೋಗಗಳಲ್ಲಿ ತೊಡಗಿದ್ದು, ಆ ಪೈಕಿ ಫೈಜರ್ ಕಂಪನಿ ಕೂಡ ಪ್ರಮುಖವಾದುದು. ಈಗಾಗಲೇ ಪ್ರಯೋಗದಲ್ಲಿ ತೊಡಗಿರುವ ಈ ಕಂಪನಿ ತನ್ನ ಮೊದಲ ಲಸಿಕೆಯನ್ನೂ ನೀಡಿದೆ.
ವಿಶೇಷವೆಂದರೆ ಫೈಜರ್ ಕಂಪನಿಯ ಮೊದಲ ಲಸಿಕೆಯನ್ನು 90 ವರ್ಷದ ಮಹಿಳೆಯೊಬ್ಬರು ಪಡೆದಿದ್ದು, ಅವರು ಈ ಲಸಿಕೆ ಪಡೆದ ಜಗತ್ತಿನ ಪ್ರಪ್ರಥಮ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ. ಲಂಡನ್ನಲ್ಲಿ ಶುಶ್ರೂಷಕಿ ಆಗಿರುವ ಮಾರ್ಗರೆಟ್ ಕೀನಾ ಮಂಗಳವಾರ ಮುಂಜಾನೆ ಈ ಲಸಿಕೆ ಪಡೆದಿದ್ದಾರೆ. ಮುಂದಿನ ವಾರ 91 ವರ್ಷಕ್ಕೆ ಪದಾರ್ಪಣೆ ಮಾಡಲಿರುವ ಇವರು, 'ಇದು ಈ ಸಲದ ಜನ್ಮದಿನದ ಮುಂಗಡ ಕೊಡುಗೆ' ಎಂದು ಹೇಳಿಕೊಂಡಿದ್ದಾರೆ.
ಫೈಜರ್ ಮತ್ತು ಬಯಾಂಟೆಕ್ ಕಂಪನಿಗಳು ಜತೆಯಾಗಿ ಈ ಲಸಿಕೆಯನ್ನು ಸಂಶೋಧಿಸಿ ಅಭಿವೃದ್ಧಿಪಡಿಸುತ್ತಿವೆ. ಬ್ರಿಟನ್ನ ಮೆಡಿಸಿನ್ಸ್ ಆ್ಯಂಡ್ ಹೆಲ್ತ್ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್ಆರ್ಎ) ಫೈಜರ್-ಬಯಾಂಟೆಕ್ ಕಂಪನಿಗೆ ತುರ್ತು ಬಳಕೆಗೆ ಅನುಮತಿ ನೀಡಿದೆ. ಫೈಜರ್ನ ಮೊದಲ ಕ್ಲಿನಿಕಲ್ ಟ್ರಯಲ್ನಲ್ಲಿ ಮಾಹಿತಿ ಪ್ರಕಾರ ಈ ಲಸಿಕೆ 23 ದಿನಗಳಲ್ಲಿ ಶೇ. 95 ನಿರೋಧಕ ಶಕ್ತಿ ನೀಡಲು ಸಮರ್ಥವಿದೆ ಎನ್ನಲಾಗಿದೆ. (ಏಜೆನ್ಸೀಸ್)