ರಾಜ್ಯದ ಜನರಿಗೆ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಶಾಕ್

Petrol-Diesel
Published on

ಬೆಂಗಳೂರು: ಲೋಕಸಭೆ ಚುನಾವಣೆ ಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರ ಡೀಸೆಲ್, ಪೆಟ್ರೋಲ್ ದರ ಬೆಲೆ ಹೆಚ್ಚಳದ ಶಾಕ್ ನೀಡಿದೆ.

ಪೆಟ್ರೋಲ್ ಮೇಲೆ ಮೂರು ರೂ., ಡೀಸೆಲ್ ಮೇಲೆ 3.50 ರೂ. ಮಾರಾಟ ತೆರಿಗೆ ಏರಿಕೆ ಮಾಡಿದ್ದು, ಶನಿವಾರದಿಂದಲೇ ಜಾರಿಯಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಇದರಿಂದಾಗಿ ಪೆಟ್ರೋಲ್ ದರ 100 ರಿಂದ 103 ರೂ ಹಾಗೂ ಡೀಸೆಲ್ ಬೆಲೆ 88 ರೂ.ಗಳಿಂದ 91.50 ರೂ. ಏರಿಕೆಯಾಗಿದೆ. ಮಾರಾಟ ತೆರಿಗೆ ಏರಿಕೆ ಮೂಲಕ ಗ್ರಾಹಕರ ಜೇಬಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಭಾರ ಹೊರಿಸಿದೆ.

ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 52 ಸಾವಿರ ಕೋಟಿ ರೂ. ಹೊಂದಿಸಲು ಸರ್ಕಾರ ತೀವ್ರ ಹೆಣಗಾಟ ನಡೆಸಿದೆ. ಗ್ಯಾರಂಟಿಗಳ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಒತ್ತಡವೂ ಸ್ವಪಕ್ಷದ ಶಾಸಕರಿಂದಲೇ ಹೆಚ್ಚತೊಡಗಿದೆ.

ದೀರ್ಘಾವಧಿ ಅನುಕೂಲ ಉದ್ದೇಶಿತ ಯೋಜನೆಗಳನ್ನು ವರ್ಷಾನುಗಟ್ಟಲೆ ನಿಲ್ಲಿಸಿದರೆ ಬೊಕ್ಕಸಕ್ಕೂ ಭಾರ, ರಾಜ್ಯದ ಅಭಿವೃದ್ಧಿ ಚಕ್ರ ಹಿಂದೆ ಸಾಗಲಿದೆ ಎಂಬ ಆತಂಕವೂ ಸರ್ಕಾರವನ್ನು ಬಾಧಿಸುತ್ತಿದೆ.

ವಿದ್ಯುತ್, ಆಸ್ತಿ ಮಾರ್ಗಸೂಚಿ ದರ, ಮುದ್ರಾಂಕ ಶುಲ್ಕ ಏರಿಸಿದೆ. ಅಬಕಾರಿ, ವಾಣಿಜ್ಯ, ನೋಂದಣಿ ಮತ್ತು ಮುದ್ರಾಂಕ, ಗಣಿ ಇಲಾಖೆ ತೆರಿಗೆ ಸಂಗ್ರಹ ಗುರಿ ಹೆಚ್ಚಿಸಿದ್ದರೂ ನಿರೀಕ್ಷಿತ ಫಲ ನೀಡಿಲ್ಲ.

ಇದೀಗ ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಭಾಗವಾಗಿ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳಕ್ಕೆ ಸರ್ಕಾರ ಮೊರೆ ಹೋಗಿದೆ ಎಂದು ಮೂಲಗಳು ತಿಳಿಸಿವೆ.

ತೀವ್ರ ವಿರೋಧ

ಲೋಕಸಭೆ ಚುನಾವಣೆ ಪೂರ್ವದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ ಏರಿಸುವ ಪ್ರಸ್ತಾವನೆಯು ಸರ್ಕಾರದ ಮುಂದಿತ್ತು. ಆದರೆ ಲೋಕಸಭೆ ಚುನಾವಣೆ ಹೊತ್ತಲ್ಲಿ ಏರಿಸಿದರೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ.

ಪ್ರತಿಪಕ್ಷಗಳು ಇದನ್ನೇ ಅಸ ಮಾಡಿಕೊಂಡು ಮುಗಿಬೀಳಲಿವೆ ಎಂಬ ಕಾರಣಕ್ಕೆ ಮುಂದೂಡಿತ್ತು ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆ ಮುಗಿದು, ಫಲಿತಾಂಶ ಪ್ರಕಟವಾಗಿ, ಕೇಂದ್ರದಲ್ಲಿ ಎನ್‌ಡಿಎ ಆಡಳಿತ ಚುಕ್ಕಾಣಿ ಹಿಡಿದಾಗಿದೆ.

ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ತೆರಿಗೆ ಏರಿಕೆ ಮಾಡಿದೆ. ಬೊಕ್ಕಸಕ್ಕೆ ಒಂದಿಷ್ಟು ಆದಾಯ ಹರಿದುಬರುವ ನಿರೀಕ್ಷೆಯಿಟ್ಟುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net