ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಪಿಟೀಷನ್: ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಮಹಿಳೆಗೆ 2 ಲಕ್ಷ ದಂಡ

highcourt
Published on

ಬೆಂಗಳೂರು:  ಮಗನ ನಾಪತ್ತೆ ಪ್ರಕರಣದಲ್ಲಿ ಪೊಲೀಸರ ತನಿಖಾ ವೈಖರಿ ಕುರಿತು ಅಸಮಾಧಾನಗೊಂಡ ಮಹಿಳೆಯೊಬ್ಬರು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ತನಿಖಾಧಿಕಾರಿಗಳ ವಿರುದ್ಧ ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, 2 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

ಬೆಂಗಳೂರಿನ ಇಂದಿರಾನಗರ ನಿವಾಸಿ ಎಂ. ಮಹೇಶ್ವರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿದಾರರು ಭಾರತದ ಸಂವಿಧಾನದ ಅಡಿಯಲ್ಲಿ ನೀಡಲಾದ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ತನಿಖಾಧಿಕಾರಿಗಳ ವಿರುದ್ಧ ಜಿದ್ದಿಗೆ ಬಿದ್ದು ಅರ್ಜಿ ಸಲ್ಲಿಸಿರುವುದು ಮೇಲ್ನೋಟಕ್ಕೆ ಸ್ಪಷವಾಗಿ ತಿಳಿದುಬರುತ್ತದೆ. ಅರ್ಜಿದಾರರ ನಡೆ ಒಪ್ಪುವಂತದಲ್ಲ.ಈ ರೀತಿಯ ಮೊಕದ್ದಮೆ ಹೂಡುವುದನ್ನು ನ್ಯಾಯಾಲಯವು ಉತ್ತೇಜಿಸದು ಎಂದು ಪೀಠ ತೀವ್ರ ಅಸಮಾಧಾನ ಹೊರಹಾಕಿದೆ.

ಅರ್ಜಿದಾರರು ಪ್ರತಿ ಹಂತದಲ್ಲೂ ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಿರುವಾಗ ನ್ಯಾಯಾಂಗ ಪ್ರಕ್ರಿಯೆಯನ್ನು ರಕ್ಷಿಸಲು, ಇಂತಹ ಕ್ಷುಲ್ಲಕ ಮತ್ತು ದುರುದ್ದೇಶಪೂರಿತ ಅರ್ಜಿಗಳನ್ನು ನಿಯಂತ್ರಿಸುವುದು ಮುಖ್ಯ. ಈ ನಿಟ್ಟಿನಲ್ಲಿ 2 ಲಕ್ಷ ರೂ. ದಂಡ ವಿಧಿಸಿ ಅರ್ಜಿ ವಜಾಗೊಳಿಸುತ್ತಿರುವುದಾಗಿ ಹೇಳಿದೆ. ದಂಡ ಮೊತ್ತದ ಪೈಕಿ, 1 ಲಕ್ಷ ರೂ. ಅನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮತ್ತು ಉಳಿದ 1 ಲಕ್ಷರೂ. ಅನ್ನು ಕರ್ನಾಟಕ ಪೊಲೀಸ್ ಹಿತೈಷಿ ನಿಧಿಗೆ ಎರಡು ವಾರಗಳ ಅವಧಿಯೊಳಗೆ ಪಾವತಿಸಬೇಕು ಎಂದು ಸೂಚಿಸಿದೆ. ಅರ್ಜಿದಾರರು ಮೊತ್ತವನ್ನು ಠೇವಣಿ ಇಡಲು ವಿಫಲವಾದರೆ, ನ್ಯಾಯಾಂಗ ನಿಂದನೆಯನ್ನು ಪ್ರಾರಂಭಿಸಲು ರಿಜಿಸ್ಟ್ರಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಕಟುವಾಗಿ ಎಚ್ಚರಿಸಿದೆ.

ಪ್ರಕರಣವೇನು?

ಅರ್ಜಿದಾರರು ತಮ್ಮ ಮಗ ಎಂ. ಕೃಪ್ಲಾನಿ ಜು.7ರಿಂದ ನಾಪತ್ತೆಯಾಗಿದ್ದ. ಆತನನ್ನು ಪತ್ತೆಹಚ್ಚಲು ಸಾಧ್ಯವಾಗದ ಕಾರಣ ತಾವು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದಾಗಿ ಹೇಳಿದ್ದರು. ಪುನಃ ಅರ್ಜಿಯನ್ನು ಹಿಂಪಡೆದಿದ್ದರು. ಬಳಿಕ ಜು.29ರಂದು ಡಿಜಿಪಿಯನ್ನು ಸಂಪರ್ಕಿಸಿ ದೂರು ಸಲ್ಲಿಸಿದರು. ತದನಂತರ ಮತ್ತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಅರ್ಜಿ ವಿಚಾರಣೆ ವೇಳೆ ತನಿಖಾಧಿಕಾರಿಗಳ ಪರ ವಕೀಲರು ವಾದ ಮಂಡಿಸಿ ನಾಪತ್ತೆಯಾಗಿದ್ದಾನೆ ಎನ್ನಲಾದ ವ್ಯಕ್ತಿ ಅರ್ಜಿದಾರರ ಜತೆ ನಿರಂತರ ಸಂರ್ಪಕದಲ್ಲಿದ್ದ, ಇದನ್ನು ಲಭ್ಯವಿರುವ ದಾಖಲೆ ಪ್ರಸ್ತುತಪಡಿಸುತ್ತದೆ. ಹೋಟೆಲ್‌ನಲ್ಲಿ ಆತನ ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡಬೇಕಾಯಿತು. ನ್ಯಾಯಾಲಯದ ಮುಂದೆ ಹಾಜರಾಗಲು ಆತನಿಗೆ ಹೇಳಿದಾಗ, ಆತ ಮನಬಂದಂತೆ ತನಿಖಾಧಿಕಾರಿಗಳಿಗೆ ನಿಂದಿಸಿದ್ದಾನೆ. ಒಟ್ಟಾರೆಯಾಗಿ ನ್ಯಾಯವ್ಯಾಪ್ತಿಯ ಪೊಲೀಸರಿಗೆ ಕಿರುಕುಳ ನೀಡುವ ಏಕೈಕ ಉದ್ದೇಶದಿಂದ ತಾಯಿ (ಅರ್ಜಿದಾರರು) ಹೇಬಿಯಸ್‌ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ ಎಂದು ಪೀಠದ ಮುಂದೆ ಗಂಭೀರವಾಗಿ ಆಕ್ಷೇಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net