

ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ರೂಪಿಸಿರುವ ‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025’ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಜೆ.ಪಿ. ನಗರ 2ನೇ ಹಂತದ ಶಾಕಾಂಬರಿನಗರ ನಿವಾಸಿ ಜಿ.ಭರತ್ ಮತ್ತು ಹೊಸಕೆರೆಹಳ್ಳಿಯ ಕೆ.ಆನಂದ್ ಸಲ್ಲಿಸಿರುವ ಹೈಕೋರ್ಟ್‌ನಲ್ಲಿ ಕಾಯ್ದೆ ಕುರಿತು ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ವಾದ ಆಲಿಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠ
ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ವಾಡಿ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಿದೆ. ಕಾಯ್ದೆಯನ್ನು ಪ್ರಶ್ನಿಸಿ ಎ23 ರಮ್ಮಿ ಎಂಬ ಆನ್‌ಲೈನ್ ಗೇಮ್‌ಗಳನ್ನು ನಿರ್ವಹಿಸುತ್ತಿರುವ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಮತ್ತೊಂದು ಅರ್ಜಿಯನ್ನು ಸಹ ನ್ಯಾಯಪೀಠವು ಸೆ.11ಕ್ಕೆ ಮುಂದೂಡಿದೆ.
ದೇಶದಲ್ಲಿ ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳನ್ನು ನಿಬರ್ಂಧಿಸುವ ಸಲುವಾಗಿ ‘ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025’ ಅನ್ನು ಸಂಸತ್ತಿನ ಉಭಯ ಸದನದಲ್ಲಿ ಆ.21ರಂದು ಅಂಗೀಕರಿಸಲಾಗಿತ್ತು. ಮಸೂದೆಗೆ ಆ.22ರಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದರು. ಇದು ದೇಶದಲ್ಲಿ ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಹಾಕಿತು. ಇದನ್ನು ಪ್ರಶ್ನಿಸಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.