

ನವದೆಹಲಿ: ಯುವಕರಿಬ್ಬರು ನಾಯಿಗೆ ಚಿತ್ರಹಿಂಸೆ ನೀಡಿ ಅದನ್ನು ನೀರಿನಲ್ಲಿ ಎಸೆದು ಅದನ್ನು ಟಿಕ್ಟಾಕ್ ಮೂಲಕ ವೀಡಿಯೋ ಮಾಡಿ ಹರಿಬಿಟ್ಟಿರುವ ದೃಶ್ಯ ಈಚೆಗೆ ಭಾರಿ ವೈರಲ್ ಆಗಿತ್ತು.
ಇಬ್ಬರು ಯುವಕರು ನಾಯಿಯ ಕಾಲುಗಳಿಗೆ ಹಗ್ಗಕಟ್ಟಿ ಅದನ್ನು ನೀರಿಗೆ ಎಸೆದು ವಿಕೃತಿ ಮೆರೆದಿದ್ದರು. ಇದನ್ನು ಟಿಕ್ಟಾಕ್ನಲ್ಲಿ ವೀಡಿಯೋ ಮಾಡಲಾಗಿತ್ತು.
ಇದು ಭಾರಿ ವೈರಲ್ ಆಗುತ್ತಿದ್ದಂತೆಯೇ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಟಿಕ್ಟಾಕ್ ಬ್ಯಾನ್ ಮಾಡುವ ಕೂಗು ಕೇಳುತ್ತಿರುವಾಗಲೇ ಇಂಥದ್ದೊಂದು ವಿಕೃತ ಮನೋಭಾವದ ವೀಡಿಯೋ ನೋಡಿದ ಜನರು ಕಿಡಿ ಕಾರಿದ್ದರು. ಆ ಮೂಕ ಪ್ರಾಣಿ ಅನುಭವಿಸಿರುವ ನೋವಿಗೆ ತುಂಬಾ ಮಂದಿ ಸಂಕಟ ಪಟ್ಟಿದ್ದರು.
ಇದೀಗ ಈ ವೀಡಿಯೋ ಪ್ರಾಣಿ ದಯಾ ಸಂಘವನ್ನು (ಪೇಟಾ) ಕೆರಳಿಸಿದೆ. ಮಧ್ಯಪ್ರದೇಶದ ಉಜ್ಜೈನ್ನಲ್ಲಿ ಪೇಟಾ ಈ ಯುವಕರ ವಿರುದ್ಧ ಪೊಲೀಸರಲ್ಲಿ ದೂರು ದಾಖಲು ಮಾಡಿದೆ. ಈ ಯುವಕರ ಗುರುತು ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿಗಳ ಬಹುಮಾನ ನೀಡುವುದಾಗಿ ಪೇಟಾ ಘೋಷಿಸಿದೆ. ಪೇಟಾ ನೀಡಿರುವ ದೂರಿನ ಅನ್ವಯ ಪೊಲೀಸರು ಯುವಕರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಈ ವೀಡಿಯೋ ಮಾಡಿದವರು ಯಾರು? ಇದು ನಡೆದ ಸ್ಥಳ ಎಲ್ಲಿ ಎಂಬ ಬಗ್ಗೆ ಸದ್ಯ ಪೊಲೀಸರಿಗೂ ಯಾವುದೇ ಮಾಹಿತಿ ಇಲ್ಲ. ಯುವಕರು ಹಿಂದಿಯಲ್ಲಿ ಮಾತನಾಡುತ್ತಿದ್ದುದು ಬಿಟ್ಟರೆ ಬೇರಾವ ಮಾಹಿತಿಯೂ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಇದು ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿರುವ ಕಾರಣ, ಹಾಗೂ ಯುವಕರ ಮುಖ ಸ್ಪಷ್ಟವಾಗಿ ಕಾಣುವ ಹಿನ್ನೆಲೆಯಲ್ಲಿ, ಈ ಬಗ್ಗೆ ಯಾರಿಗೇ ತಿಳಿದರೂ ಕೂಡಲೇ ಅವರು, ಪೇಟಾದ ಸಂಖ್ಯೆ +91 9820122602 ಗೆ ಕರೆ ಮಾಡುವ ಮೂಲಕ ಇಲ್ಲವೇ ಇ ಮೇಲ್ ವಿಳಾಸ e-mail Info@petaindia.org. ಈ ಮೂಲಕ ಮಾಹಿತಿ ನೀಡುವಂತೆ ಕೋರಿದ್ದಾರೆ.
ಇದಾಗಲೇ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಟ್ವಿಟರ್ನಲ್ಲಿ ಒಬ್ಬರು ಕಮೆಂಟ್ ಮಾಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.