ಕದ್ದ ಬಳಿಕ ಫ್ರಿಡ್ಜ್​ನಲ್ಲಿದ್ದ ತಿಂಡಿ ತಿನ್ನುತ್ತಿದ್ದ ಕಳ್ಳ; ಪರಾರಿಯಾಗಲು ಯತ್ನಿಸಿದವನನ್ನು ಹಿಡಿದುಕೊಡ್ತು ಸಾಕುನಾಯಿ!

arrest
Published on

ಕೋಲ್ಕತ: ಕಳ್ಳನೊಬ್ಬ ಬೆಳಗಿನ ಜಾವ ಮನೆಗೆ ನುಗ್ಗಿದ್ದಲ್ಲದೆ ಮನೆಯಲ್ಲಿನ ರೆಫ್ರಿಜರೇಟರ್​​ನಲ್ಲಿದ್ದ ತಿನಿಸನ್ನೂ ತಿಂದಿದ್ದು, ಉಂಡೂ ಹೋದ ಕದ್ಕೊಂಡೂ ಹೋದ ಎಂಬಂತೆಯೂ ನಡೆದುಕೊಂಡ. ಆದರೆ ಎಚ್ಚೆತ್ತ ಮನೆಯವರಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದವನನ್ನು ಸಾಕುನಾಯಿಯೇ ಹಿಡಿದುಕೊಟ್ಟಿದೆ.

ಕೋಲ್ಕತದ ಕಲಿಘಟ್ ಪ್ರದೇಶದ ಮನೆಯೊಂದರಲ್ಲಿ ಶುಕ್ರವಾರ ಬೆಳಗಿನ ಜಾವ ಈ ಪ್ರಕರಣ ನಡೆದಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮನೆಗೆ ಸಮೀಪದಲ್ಲೇ ಈ ಕಳವು ನಡೆದಿದೆ. ಕಲಿಘಟ್ ಫೈರ್ ಸ್ಟೇಷನ್​ ಬಳಿಯ ಜಾದು ಭಟ್ಟಾಚಾರ್ಯ ಲೇನ್​ನಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ಬೆಳಗ್ಗೆ 4 ಗಂಟೆ ಸುಮಾರಿಗೆ ಮನೆಯ ಚಿಲಕ ಮುರಿದು ಒಳಹೊಕ್ಕಿದ್ದ ಕಳ್ಳ, ಒಂದಷ್ಟು ವಸ್ತುಗಳನ್ನು ಕಳವು ಮಾಡಿಕೊಂಡ ಬಳಿಕ, ಮನೆಯಲ್ಲಿನ ಫ್ರಿಡ್ಜ್​ನಲ್ಲಿದ್ದ ತಿಂಡಿ ತಿನ್ನುತ್ತಿದ್ದ. ಆ ಸದ್ದು ಕೇಳಿ ಎಚ್ಚೆತ್ತ ಮನೆಯವರು ಕೂಗಿದಾಗ ಕಳ್ಳ ಓಡಿಹೋಗಲು ಯತ್ನಿಸಿದ್ದ.

ಆಗ ಮನೆಯ ಕಿರಿಯ ಸದಸ್ಯ ಪ್ರಸಂಜಿತ್ ಚಕ್ರವರ್ತಿ ಎಂಬಾತ ಕಳ್ಳನನ್ನು ಹಿಡಿಯಲು ಹೋದಾಗ, ಆತ ಚಾಕುವಿನಿಂದ ದಾಳಿ ಮಾಡಿದ್ದ. ತಕ್ಷಣ ಮನೆಯಲ್ಲಿದ್ದ ನಾಯಿ ಕಳ್ಳನ ಕಾಲಿಗೆ ಬಾಯಿ ಹಾಕಿ ಕಚ್ಚಿ ಹಿಡಿದುಕೊಂಡಿತ್ತು. ಆಗ ಮನೆಯಲ್ಲಿದ್ದ ಐವರೂ ಕಳ್ಳನ ಮೇಲೆರಗಿ ಹಿಡಿದುಕೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿ ಒಪ್ಪಿಸಿದ್ದಾರೆ.

ಸಿಕ್ಕಿಬಿದ್ದ ಕಳ್ಳ ಅದೇ ಪ್ರದೇಶದಲ್ಲಿ ತರಕಾರಿ ಮಾರುತ್ತಿದ್ದವನಾಗಿದ್ದು, ಆ ಮನೆಯ ನೆರೆಮನೆಯವರೊಬ್ಬರು ಈತನನ್ನು ಕಳ್ಳತನ ಎಸಗುವಂತೆ ಛೂ ಬಿಟ್ಟಿದ್ದರು. ಮನೆಯವರು ಧರಿಸುತ್ತಿದ್ದ ಚಿನ್ನಾಭರಣವನ್ನು ಕಳವು ಮಾಡುವ ಸಂಚು ನಡೆಸಲಾಗಿತ್ತು ಎಂದು ವಿಚಾರಣೆ ವೇಳೆ ಆತ ಬಾಯಿಬಿಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡಿರುವ ಪ್ರಸಂಜಿತ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net