ವಿದ್ಯಾರ್ಥಿಗಳು ನವಭಾರತದ ಶಿಲ್ಪಿಗಳು: ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಬಣ್ಣನೆ

pesit
Published on

ಶಿವಮೊಗ್ಗ:ಭಾರತ ವಿಶ್ವಗುರು ಆಗುವತ್ತ ಮುನ್ನಡೆಯುತ್ತಿದೆ. ಈ ಹಂತದಲ್ಲಿ ಭಾರತ ಗುರಿ ತಲುಪಲು ಯುವಜನರ ಪಾತ್ರ ಮಹತ್ತರವಾಗಿದೆ. ವಿದ್ಯಾರ್ಥಿಗಳು ನವಭಾರತದ ಶಿಲ್ಪಿಗಳು. ಪದವೀಧರರು ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕೆಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹೇಳಿದರು.

ನಗರದ ಪೆಸಿಟ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇದು ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೂ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದರು.

ದೇಶದ ಜನಸಂಖ್ಯೆಗೆ ಹೋಲಿಸಿದರೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ತೀರಾ ಕಡಿಮೆಯಿದೆ. ಶಿಕ್ಷಣದ ಅನುಪಾತ ಏರಿಕೆಯಾಗಿಲ್ಲ. ಇದನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ರೂಪಿಸಿದೆ. 2047ಕ್ಕೆ ಭಾರತದಲ್ಲಿ ಪದವೀಧರರ ಸಂಖ್ಯೆ ಹೆಚ್ಚಬೇಕೆಂಬುದು ಸರ್ಕಾರದ ಪ್ರಮುಖ ಉದ್ಧೇಶವಾಗಿದೆ ಎಂದು ತಿಳಿಸಿದರು.

ಭಾರತ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆ ಹೊಂದಿದ ದೇಶವಾಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ನಮ್ಮ ದೇಶದಲ್ಲಿ ಶೇ.65ರಷ್ಟು 35 ವರ್ಷದೊಳಗಿನವರು ಇದ್ದಾರೆ. ಯುವಶಕ್ತಿಯೇ ನಮಗಿರುವ ದೊಡ್ಡ ಅಸ್ತ್ರ. ಶಿಕ್ಷಣ ಹಾಗೂ ಅರ್ಥವ್ಯವಸ್ಥೆಗೆ ಅವಿನಾಭಾವ ಸಂಬಂಧವಿದೆ. ಶಿಕ್ಷಿತರು ಉದ್ಯೋಗ ಪಡೆಯುವ ಮೂಲಕ ದೇಶದ ಆರ್ಥಿಕತೆಗೆ ಬಲ ತುಂಬುತ್ತಾರೆ ಎಂಬುದು ವಾಸ್ತವ. ಹೀಗಾಗಿ ಪದವೀಧರರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಹೇಳಿದರು.

ಕೈಗಾರಿಕೋದ್ಯಮಿ ಡಿ.ಜಿ.ಬೆನಕಪ್ಪ, ಪ್ರೇರಣಾ ಎಜುಕೇಷನ್ ಟ್ರಸ್ಟ್‌ನ ಮುಖ್ಯ ಆಡಳಿತ ಸಮನ್ವಯಾಧಿಕಾರಿ ಡಾ.ಆರ್.ನಾಗರಾಜ, ಪ್ರಾಚಾರ್ಯೆ ಡಾ.ಕೆ.ಸಾಯಿಲತಾ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ.ಡಿ.ಎಸ್.ರೂಪಾ, ಪ್ರಮುಖರಾದ ಡಾ.ಪ್ರವೀಣ್, ಡಾ.ಎಂ.ಎಂ.ಕೃಷ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net