

ಹುಣಸೂರು: ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳೂ ಅವಶ್ಯವೆಂದು ಗಾವಡಗೆರೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜನಾರ್ಧನ್ ಅಭಿಪ್ರಾಯಪಟ್ಟರು.
ತಾಲೂಕಿನ ಗಾವಡಗೆರೆ ಗ್ರಾಮದ ಪದವಿ ಪೂರ್ವ ಕಾಲೇಜಿನಲ್ಲಿ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಶ್ರೀಮಂತವಾಗುವುದು ವ್ಯಕ್ತಿತ್ವದ ಪೂರ್ಣ ವಿಕಾಸವಲ್ಲ. ಅವರ ಸಾಂಸ್ಕೃತಿಕ ವ್ಯಕ್ತಿತ್ವವನ್ನು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಮಟ್ಟವನ್ನು ಹೆಚ್ಚಿಸುತ್ತವೆ. ಆತ್ಮಸ್ಥೈರ್ಯ ವೃದ್ಧಿಸುವ ಜತೆಗೆ ಖಿನ್ನತೆ, ಆತಂಕ ಕಡಿಮೆ ಮಾಡುತ್ತದೆ. ಸಾಂಸ್ಕೃತಿಕ ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಹುದುಗಿರುವ ಪ್ರತಿಭೆ ಹೊರಬರಲು ಸಾಧ್ಯ ಎಂದರು.
ಶೈಕ್ಷಣಿಕ ಪ್ರಗತಿ, ಹಾಜರಾತಿ, ಆರ್ಥಿಕವಾಗಿ ಹಿಂದುಳಿದ ಹಾಗೂ ಸನ್ನಡತೆ ಹೊಂದಿರುವ 32 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಸಿಡಿಸಿ ಉಪಾಧ್ಯಕ್ಷ ಹೊನ್ನಪ್ಪರಾವ್ ಕಾಳಿಂಗೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಮಧುಮತಿ ಬಾಯಿ, ಶೀಲಾವತಿ, ಶ್ರೀನಾಥ್, ಲತಾ, ಲೋಕೇಶ್, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಸಂಗೀತ, ಉಪಪ್ರಾಂಶುಪಾಲ ಆರ್.ಕೃಷ್ಣ, ಉಪನ್ಯಾಸಕರಾದ ಡಾ.ವಿ.ಚಂದ್ರು, ಮಂಜುನಾಥ್, ಹರಿಣಿ, ಜಯರಾಮ್, ದರ್ಶಿನಿ, ಚಿಕ್ಕವೀರ ಶೆಟ್ಟಿ, ಮುಖ್ಯ ಶಿಕ್ಷಕ ಮಾಧು, ಮುಖಂಡ ಹಿರೀಕ್ಯಾತನಹಳ್ಳಿ ಸ್ವಾಮಿಗೌಡ ಇದ್ದರು.