

ತಿರುಕ ಹಾರುವನಾಗಿ ಮೀಸೆ ತಿರುಚುವೆಯಾ?||
ಇರುವುದವನವನಿಗವನ ತಾಣದ ಧರ್ಮ|
ಅರಿವೆ ಋತುಗತಿಯಂತೆ-ಮಂಕುತಿಮ್ಮ||580||
ದೊರೆಯ ವೇಷವನ್ನು ಧರಿಸಿ ಮೀಸೆಯಿದೆ ಎಂದು ಮೆರೆಯುವೆಯಾ? ಮುಂದೆ ಬ್ರಾಹ್ಮಣ ಭಿಕ್ಷುಕನಂತೆ ವೇಷ ಧರಿಸಿದಾಗಲೂ ಮೀಸೆ ತಿರುವುತ್ತೀಯಾ? ಅವನವನ ಸ್ಥಾನದ ಧರ್ಮವು ಅವನವನಿಗೆ ಇರುತ್ತದೆ. ಋತು ಬದಲಾದಂತೆ ಧರಿಸುವ ಬಟ್ಟೆಯೂ ಬದಲಾಗುತ್ತದೆ ಎನ್ನುತ್ತದೆ ಈ ಕಗ್ಗ.
ಅರಸನಾದವನು ಹೇಗಿರುತ್ತಾನೆ? ರಾಜನಿಗೆ ಒಪ್ಪುವ ರೇಷ್ಮೆಯ ಪೋಷಾಕು, ರತ್ನಾಭರಣಗಳು, ಒರೆಯ ಖಡ್ಗ, ಗಂಭೀರವಾದ ಮುಖ, ಮಾತು, ನಡವಳಿಕೆ ಹೀಗೆ ಅರಸನೆಂದರೆ ಘನಗಂಭೀರ. ಇದನ್ನು ಅಹಂಕಾರ ಎನ್ನುವುದಕ್ಕಿಲ್ಲ. ರಾಜ್ಯಾಡಳಿತದ ಹೊಣೆ ಗಾರಿಕೆಯು ರಾಜನಲ್ಲಿ ಗಂಭೀರತೆಯನ್ನು ಮೂಡಿಸಿರುತ್ತದೆ. ಈ ಗತ್ತು- ಗಾಂಭೀರ್ಯಗಳು ಪ್ರಜಾ ಜನರಲ್ಲಿ ಭಯ-ಭಕ್ತಿ ಮೂಡಿ ಸುತ್ತದೆ. ರಾಜ್ಯವು ಯೋಗ್ಯ ವ್ಯಕ್ತಿಯ ಆಡಳಿತದಲ್ಲಿ ಸುರಕ್ಷಿತವಾಗಿದೆ ಎಂಬ ಭರವಸೆಯನ್ನು ಮೂಡಿಸುತ್ತದೆ.
ಹಾಗಾಗಿ ಅರಸನಾದವನು ಮೀಸೆ ತಿರುವುತ್ತಾ, ಗತ್ತಿನಿಂದ, ವಂದಿ- ಮಾಗಧರೊಂದಿಗೆ ಗಂಭೀರವಾಗಿ ನಡೆಯುವುದೇ ಸರಿ ಮತ್ತು ಸಹಜತೆ. ನಾಟಕದಲ್ಲಿ ಅರಸನ ವೇಷವನ್ನು ಧರಿಸಿದವನೂ ಅರಸನ ಗತ್ತು, ಠೀವಿ, ಗಾಂಭೀರ್ಯದ ಸ್ವಭಾವವನ್ನು ಸಹಜವೆಂಬಂತೆ ಅಭಿನಯಿಸಬೇಕು. ವೇಷ-ಭೂಷಣದಿಂದ ತೊಡಗಿ ನಿಂತ ನಿಲುವು, ಆಂಗಿಕಾಭಿನಯ, ಮಾತು ಎಲ್ಲವೂ ರಾಜನಿಗೆ ಒಪ್ಪುವಂತೆ ಇರಬೇಕು. ಹಾಗಾಗಿ ಮೀಸೆ ತಿರುವುತ್ತಾ ತಾನು ಅರಸ ಎಂದು ಮೆರೆಯುತ್ತಾನೆ.
ಅದೇ ನಾಟಕದಲ್ಲಿ ಅರಸನ ವೇಷ ಧರಿಸಿದವನೇ ಮತ್ತೊಮ್ಮೆ ಬ್ರಾಹ್ಮಣ ಭಿಕ್ಷುಕನಾಗಿ ವೇಷ ಧರಿಸಬೇಕು ಎಂದಾದರೆ, ಆಗಲೂ ಹಿಂದೆ ಮಾಡಿದ ಅರಸನ ವೇಷದ ಗುಂಗಿನಲ್ಲಿ ಮೀಸೆ ತಿರುವುದಕ್ಕುಂಟೇನು? ಭಿಕ್ಷುಕನಿಗೆ ಇರಬೇಕಾದ ನಯ-ವಿನಯ, ದೈನ್ಯತೆ ಇರಬೇಡವೆ? ಆಯಾಯ ಸ್ಥಾನಕ್ಕೆ, ಯೋಗ್ಯತೆಗೆ ಅನುಗುಣವಾಗಿ ನಡವಳಿಕೆ ಇರಬೇಕು. ಲೋಕರೂಢಿಯನ್ನು ದಿಕ್ಕರಿಸಿ ಮನಸ್ಸು ಬಂದಂತೆ ನಡೆದುಕೊಂಡರೆ ಆಭಾಸವಾಗುತ್ತದೆ, ಸಮಾಜ ಅದನ್ನು ತಿರಸ್ಕರಿಸುತ್ತದೆ. ಲೋಕ ಜೀವಿತಕ್ಕೆ ಬಂದ ಮೇಲೆ ಪ್ರತಿಯೊಬ್ಬರಿಗೂ ವಿಧಾತನ ನಿರ್ದೇಶನದಲ್ಲಿ ನಡೆಯುವ ನಾಟಕದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸುವ ಹೊಣೆಗಾರಿಕೆ ಇದೆ.
ಕುಟುಂಬ, ಉದ್ಯೋಗ, ಸಾಮಾಜಿಕ ಹೊಣೆಗಾರಿಕೆಗಳನ್ನು ನಿಭಾಯಿಸುವ ಅನಿವಾರ್ಯತೆಯಲ್ಲಿ ವ್ಯಕ್ತಿಯು ವಿವಿಧ ಮತ್ತು ವಿಭಿನ್ನ ಪಾತ್ರಗಳನ್ನು ನಿರ್ವಹಿಸಲೆಬೇಕು. ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ವಿವಿಧ ಬಾಂಧವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಮನೆಯ ಹಿರಿಯಣ್ಣ ತನ್ನ ಸ್ಥಾನ, ಘನತೆ, ಹೊಣೆಗಾರಿಕೆಯನ್ನು ಕಡೆಗಣಿಸಿ ಸ್ವಾರ್ಥಿಯಾದರೆ ಕುಟುಂಬವೇ ಛಿದ್ರಛಿದ್ರವಾಗಿ ಹೋಗುತ್ತದೆ. ಶಿಕ್ಷಕನು ಒಂದೊಮ್ಮೆ ವಿದ್ಯಾರ್ಥಿಯಾಗಿರುವಾಗ ಹುಡುಗಾಟವಾಡಿರಬಹುದು. ಆದರೆ ಶಿಕ್ಷಕನಾದ ಮೇಲೆ ಅವನ ಸ್ಥಾನದ ಅರಿವಿರಬೇಕು.
ನಡೆನುಡಿಚಿಂತನೆಗಳೆಲ್ಲವೂ ಗೌರವಯುತವಾಗಿರ ಬೇಕು. ಹಲವು ವಿದ್ಯಾರ್ಥಿಗಳು ತನ್ನನ್ನು ಅನುಸರಿಸಿ ಬರುತ್ತಾರೆ ಎಂಬ ಎಚ್ಚರದಿಂದ ಶಾಲೆಯ ಒಳಗೆ ಮತ್ತು ಹೊರಗೆ ತನ್ನ ಸ್ಥಾನಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಪ್ರಧಾನಮಂತ್ರಿ, ಮುಖ್ಯಮಂತ್ರಿ, ಶಿಕ್ಷಣಮಂತ್ರಿ, ಜಿಲ್ಲಾಧಿಕಾರಿಯೇ ಮೊದಲಾದ ಗುರುತರವಾದ ಸ್ಥಾನದಲ್ಲಿರುತ್ತಾ ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ತಮ್ಮ ಸ್ಥಾನ-ಮಾನದ ಅರಿವಿರ ಲೇಬೇಕು. ನಡೆನುಡಿಗಳೆಲ್ಲವೂ ಘನತೆಯಿಂದ ಕೂಡಿರಬೇಕು. ಪ್ರಜೆಗಳಲ್ಲಿ ಗೌರವವನ್ನು, ಸುರಕ್ಷಿತ ಭಾವವನ್ನು ಮೂಡಿಸುವಂತೆ ವ್ಯವಹರಿಸಬೇಕು. ನಾಯಕನ ಗುಣಾವಗುಣಗಳನ್ನು ಅವನ ಕೈಕೆಳಗಿನವರು ಅನುಸರಿಸುತ್ತಾರೆ. ಹಾಗಾಗಿ ಸಮಾಜದ ಉದ್ದಾರಕ್ಕೆ ಹೊರಟವನಿಗೆ ತನ್ನ ಯೋಗ್ಯತೆಯ ಅರಿವಿರಬೇಕು.
ಕಾಲ, ಋತುಗಳು ಬದಲಾದಂತೆ ನಾವು ಧರಿಸುವ ಬಟ್ಟೆಯೂ ಬದಲಾಗುತ್ತದೆ. ಚಳಿಗಾಲಕ್ಕೆ ಬೆಚ್ಚನೆಯ ಬಟ್ಟೆಯನ್ನು ಧರಿಸಲು ಇಷ್ಟಪಟ್ಟರೆ ಸೆಖೆಗಾಲಕ್ಕೆ ಹತ್ತಿಯ ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಹೀಗೆಯೇ ಕಾಲ, ವಾತಾವರಣ, ಪರಿಸ್ಥಿತಿಗಳನ್ನು ಅನುಸರಿಸಿ ಆಹಾರ-ವಿಹಾರಗಳಲ್ಲೂ ಬಹಳಷ್ಟು ಬದಲಾವಣೆಗಳಾ ಗುತ್ತವೆ. ಅಷ್ಟೇ ಅಲ್ಲ, ನಡುಹರೆಯ ದಾಟಿದವರು ಹರೆಯದವರಂತೆ ಕಾಣಿಸಿಕೊಳ್ಳಲು ಯತ್ನಿಸುವುದು, ನಡೆನುಡಿ ಅಭಿರುಚಿಗಳು ಬದಲಾಗದೆ ಹುಡುಗುತನವನ್ನು ತೋರುವುದು ಅಸಹಜವಾಗಿ ಕಾಣುತ್ತದೆ. ಹಾಗೆಯೇ ಬಾಲ್ಯಾವಸ್ಥೆಯಲ್ಲಿರುವ ಮಕ್ಕಳು ವೃದ್ಧರಂತೆ ಮಾತನಾಡುವುದು, ವರ್ತಿಸುವುದು ಕೂಡಾ ಅಸಹಜವೇ ಸರಿ.
ಸದಾ ಬದಲಾಗುವ ಪ್ರಕೃತಿಯ ಸ್ಥಿತಿಗೆ ಮರಗಿಡಗಳಿಂದ ತೊಡಗಿ ಎಲ್ಲಾ ಜೀವಗಳ ಜೀವನಶೈಲಿಯೂ ಬದಲಾಗುತ್ತದೆ. ಮನುಷ್ಯನೂ ಬಟ್ಟೆಬರೆ, ಊಟತಿಂಡಿ, ಓಡಾಟಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವನ್ನು ಮಾಡಿಕೊಳ್ಳುತ್ತಾನೆ. ಆದರೆ ಸ್ವಸ್ಥಾನ ಪರಿಜ್ಞಾನವಿಲ್ಲದೆ ವ್ಯವಹರಿಸಿ ಪರಿಹಾಸ್ಯಕ್ಕೆ ಒಳಗಾಗುತ್ತಾನೆ, ಪ್ರಮಾದಗಳನ್ನು ಮಾಡುತ್ತಾನೆ. ಘನತೆ- ಗೌರವಗಳು ವ್ಯಕ್ತಿಯ ವರ್ತನೆಗೆ ಅನುಸಾರವಾಗಿ ಲಭ್ಯವಾಗು ತ್ತದೆಯೇ ಹೊರತು ಆಸ್ತಿ, ಅಧಿಕಾರಕ್ಕೆ ಅನುಗುಣವಾಗಿಯಲ್ಲ. ಯಾರು ಜ್ಞಾನಮಾರ್ಗದಲ್ಲಿ ಮುನ್ನಡೆಯುತ್ತಾರೋ ಅವರಿಗೆ ತಮ್ಮ ಯೋಗ್ಯತೆ, ಜವಾಬ್ದಾರಿ ಮತ್ತು ಸ್ಥಾನದ ಬಗೆಗೆ ಸ್ಪಷ್ಟತೆ ಇರುತ್ತದೆ. ತಮ್ಮ ಪಾಲಿಗೆ ಲಭ್ಯವಾದ ಪಾತ್ರಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾರೆ.