

ನೆಲಮಂಗಲ: ರಾಜ್ಯದಲ್ಲಿ ರಸ್ತೆ ಗುಂಡಿ ಸಮಸ್ಯೆ ವಿಪರೀತ ಆಗಿರುವುದಷ್ಟೇ ಅಲ್ಲ, ಅದಕ್ಕೆ ಪ್ರಾಣ ಬಲಿಯಾಗುತ್ತಿರುವುದು ಕೂಡ ನಡೆಯುತ್ತಿದೆ. ಇದೀಗ ರಾಜಧಾನಿಗೆ ಸನಿಹದಲ್ಲೇ ವ್ಯಕ್ತಿಯೊಬ್ಬ ರಸ್ತೆಗುಂಡಿಗೆ ಬಲಿಯಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಈ ಪ್ರಕರಣ ನಡೆದಿದೆ.
ಪಾವಗಡ ಮೂಲದ ತಿಪ್ಪೇಸ್ವಾಮಿ (45) ರಸ್ತೆಗುಂಡಿಗೆ ಬಲಿಯಾದ ಬೈಕ್ ಸವಾರ. ಬೆಂಗಳೂರು ಉತ್ತರ ತಾಲೂಕಿನ ಮಾದಾವರ ಬಳಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ಅವಘಡ ಸಂಭವಿಸಿದೆ.
ಕೂಲಿ ಕೆಲಸ ಮಾಡಿಕೊಂಡು ಮಾದಾವರದಲ್ಲಿ ವಾಸವಿದ್ದ ಈತ ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ಊರಿಗೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ರಸ್ತೆಯಲ್ಲಿನ ಹೊಂಡ ತಪ್ಪಿಸಲು ಹೋಗಿ ಬಿದ್ದ ಈತನ ಮೇಲೆಯೇ ಕಂಟೇನರ್ ಲಾರಿಯೊಂದು ಸಾಗಿಹೋಗಿದೆ.
ಅಪಘಾತದ ತೀವ್ರತೆಗೆ ತಿಪ್ಪೇಸ್ವಾಮಿ ಧರಿಸಿದ್ದ ಹೆಲ್ಮೆಟ್ ಪುಡಿಪುಡಿಯಾಗಿದ್ದು, ಈತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಅಪಘಾತದ ಬಳಿಕ ಲಾರಿ ಚಾಲಕ ಸಂಚಾರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.