

ಬೆಂಗಳೂರು: ಸರ್ಕಾರಿ ನೇಮಕಾತಿಯಲ್ಲಿ ಮೀಸಲು ಜಾರಿ ಸಂಬಂಧ ನಿಯಮ ಉಲ್ಲಂಘನೆಯಾಗಿದೆಯೆಂದು 348 ಕೆಎಎಸ್ ಅಧಿಕಾರಿಗಳ ನೇಮಕ ಕುರಿತ ಅಧಿಸೂಚನೆ ರದ್ದುಗೊಳಿಸಿದ್ದ ಕೆಎಟಿ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಎಎಸ್ ನೇಮಕ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿದೆ.
ಕೆಎಟಿ ಕಳೆದ ಮೇ 28ರಂದು ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ಪೀಠ ಈ ಮಧ್ಯಂತರ ಆದೇಶವನ್ನು ಮಾಡಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಮೂಲ ಅರ್ಜಿದಾರರಾದ ಬಿ.ಎನ್.ಮಧು, ಕರ್ನಾಟಕ ಲೋಕಸೇವಾ ಆಯೋಗ ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
ಅಲ್ಲದೆ, ಪ್ರತಿವಾದಿಗಳು ಸಲ್ಲಿಸಿದ ಆಕ್ಷಪಣೆಗೆ ಸರ್ಕಾರದ ಪ್ರತಿಆಕ್ಷೇಪಣೆಗಳಿದ್ದರೆ ಅದನ್ನು ಒಂದು ವಾರದಲ್ಲಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿರುವ ನ್ಯಾಯಾಲಯ ವಿಚಾರಣೆಯನ್ನು ಐದು ವಾರ ಮುಂದೂಡಿದೆ.
ಅಲ್ಲದೆ, ಕೆಎಎಸ್ ನೇಮಕ ಪ್ರಕ್ರಿಯೆ ಮುಂದುವರಿಸಲು ಕೆಪಿಎಸ್ಸಿಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ ಆಯ್ಕೆ ಪಟ್ಟಿಯ ಲಿತಾಂಶವನ್ನು ನ್ಯಾಯಾಲಯದ ಅನುಮತಿ ಇಲ್ಲದೆ ಪ್ರಕಟಿಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.