ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಮಾರ್ಗಸೂಚಿ ನಿಯಮಗಳ ಪಾಲನೆಯೊಂದಿಗೆ ಗಣೇಶ ಪ್ರತಿಷ್ಠಾಪನಾ ಮಹೋತ್ಸವ ಸಮಿತಿಗಳಿಗೆ ವಿವಿಧ ಇಲಾಖೆಗಳು ಅನುಮತಿ ನೀಡುತ್ತಿರುವುದರ ಜತೆಗೆ ಸುಗಮ ನಿರ್ವಹಣೆಯ ವ್ಯವಸ್ಥೆಯ ಕಡೆಗೆ ನಿಗಾ ವಹಿಸಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸೂಚನೆ ಹಿನ್ನೆಲೆಯಲ್ಲಿ ಆಯಾ ಪೊಲೀಸ್ ಠಾಣೆಗಳಲ್ಲಿ ಅರ್ಜಿಗಳ ಸ್ವೀಕಾರಕ್ಕೆ ಏಕಗವಾ ಕೇಂದ್ರ ತೆರೆಯಲಾಗಿದೆ. ಇದರಿಂದ ವಿನಾಯಕ ಬಳಗ, ಸಂ&ಸಂಸ್ಥೆಗಳು ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುತ್ತಿದ್ದು, ಎರಡು ದಿನಗಳಿಂದಲೂ ಪ್ರಕ್ರಿಯೆ ಬಿರುಸುಗೊಂಡಿದೆ. ಇದೇ ವೇಳೆ ಇತರ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಇಲ್ಲದ ಕಟ್ಟುನಿಟ್ಟಿನ ಕ್ರಮಗಳ ಎಚ್ಚರಿಕೆ ನೀಡುತ್ತಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ದುಬಾರಿ ವೆಚ್ಚದ ಸಿಸಿ ಕ್ಯಾಮೆರಾ ಅಳವಡಿಕೆಯ ಆದೇಶಕ್ಕೆ ಕಿಡಿಕಾರಲಾಗುತ್ತಿದೆ.
ಕಠಿಣ ನಿಯಮಗಳು
ಗೌರಿ&ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ದೇವರ ಮೂರ್ತಿ ಪ್ರತಿಷ್ಠಾಪಿಸಲು ಕಠಿಣ ನಿಯಮಗಳನ್ನೇ ಜಾರಿಗೊಳಿಸಲಾಗಿದೆ. ಗಣಪತಿ ಪ್ರತಿಷ್ಠಾಪನೆ ಸ್ಥಳದಿಂದ ವಿಸರ್ಜನೆ ಮುಕ್ತಾಯದವರೆಗೂ ಉಸ್ತುವಾರಿ ವಹಿಸಿಕೊಳ್ಳುವ ಹಾಗೂ ಸ್ಥಳದಲ್ಲಿ ಆಗುಹೋಗುಗಳಿಗೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದರ ಬಗ್ಗೆ ಮುಚ್ಚಳಿಕೆ ಬರೆದುಕೊಡಬೇಕು. ಪ್ರತಿಷ್ಠಿತ ಸಂಸ್ಥೆಗಳ ಜತೆಗೆ ಬಹುತೇಕ ಗಲ್ಲಿಗಲ್ಲಿಗಳಲ್ಲಿ ಗಣಪತಿ ಹಬ್ಬವನ್ನು ಅಪ್ರಾಪ್ತರು ನೇತೃತ್ವ ವಹಿಸಿ ಉತ್ಸಾಹದಿಂದ ಆಚರಿಸುತಿದ್ದಾರೆ. ಇಲಾಖೆಯ ಈ ನಿಯಮಕ್ಕೆ ಪಾಲಕರು ಮಕ್ಕಳನ್ನು ತಟಸ್ಥವಾಗಿ ಉಳಿಯುವಂತೆ ಸೂಚಿಸುತ್ತಿದ್ದು ಮಹೋತ್ಸವ ಆಚರಣಾ ಸಮಿತಿಗಳಲ್ಲಿ ಒಡಕು ಮೂಡುತ್ತಿದೆ.
ಬೆಸ್ಕಾಂ ಶುಲ್ಕ
ಸಾರ್ವಜನಿಕ ಸ್ಥಳಗಳಿಗೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಪಂ, ಸ್ಥಳಿಯ ಆಡಳಿತ ಸಂಸ್ಥೆಗಳು ಹಾಗೂ ಖಾಸಗೀ ಜಾಗಕ್ಕೆ ಸಂಬಂಧಪಟ್ಟ ಮಾಲೀಕರ ಒಪ್ಪಿಗೆ ಪತ್ರ ಪಡೆದಿರಬೇಕು. ಇನ್ನು ವಿದ್ಯುತ್ ಸಂಪರ್ಕ ಪಡೆಯಲು ದಿನಕ್ಕೆ 750 ರೂ. ಶುಲ್ಕ ಪಾವತಿಸಬೇಕಾಗಿದ್ದು, 5 ದಿನಕ್ಕೆ 3750 ರೂ. ಪಾವತಿಸಬೇಕು. ಶುಲ್ಕವು ದುಬಾರಿಯಾಯಿತು ಎಂದು ವಿನಾಯಕ ಗೆಳೆಯರ ಬಳಗದ ಸುರೇಶ್ ಅಳಲು ವ್ಯಕ್ತಪಡಿಸಿದರು.
ಅರ್ಜಿ ಸ್ವೀಕಾರ ಪ್ರಕ್ರಿಯೆ
ಜಿಲ್ಲಾ ಕೇಂದ್ರದಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ಏಕ ಗವಾ ಕೇಂದ್ರದಲ್ಲಿ ಅರ್ಜಿಗಳನ್ನು ಸಲ್ಲಿಸಲು ಗಣೇಶೋತ್ಸವ ಆಚರಣಾ ಸಮಿತಿಗಳು ಮುಗಿ ಬಿದ್ದವು. ಒಂದೆಡೆ ನಗರಸಭೆ, ಪೊಲೀಸ್, ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಪ್ರತಿಯೊಂದು ಸಂ ಸಂಸ್ಥೆಯಿಂದ ತಲಾ 5 ಐವರು ಉಸ್ತುವಾರಿದಾರ 5 ಪಾಸ್ ಪೋರ್ಟ್ ಪೋಟೋ ಹಾಗೂ ಆಧಾರ್ ಕಾರ್ಡು ಸೇರಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸ್ವೀಕರಿಸಿದರು. ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ಸಂಸ್ಥೆಗಳ ಸ್ವಯಂ ಸೇವಕರ ಜಮಾವಣೆಯಿಂದ ನೂಕು ನುಗ್ಗಲು ಉಂಟಾಯಿತು.
ಗಣೇಶೋತ್ಸವ ಆಚರಣೆಯ ಉತ್ಸಾಹವನ್ನು ವರ್ಷದಿಂದ ವರ್ಷಕ್ಕೆ ಕಠಿಣ ನಿಯಮಗಳ ಹೆಸರಿನಲ್ಲಿ ಕುಗ್ಗಿಸಲಾಗುತ್ತಿದೆ. ಈಗಾಗಲೇ ಪ್ರತಿಷ್ಠಾಪನೆಯ ಪ್ರಮಾಣವು ಕಡಿಮೆಯಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುತ್ತದೆ.ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳುವುದು ತಪ್ಪಲ್ಲ. ಆದರೆ ಇದರ ನೆಪದಲ್ಲಿ ಸಂಭ್ರಮಕ್ಕೆ ಕಡಿವಾಣ ಹಾಕುವುದು ಸರಿಯಲ್ಲ.
| ವೆಂಕಟೇಶ್, ಗಣೇಶೋತ್ಸವ ಆಚರಣಾ ಸಮಿತಿ ಸ್ವಯಂ ಸೇವಕ, ಚಿಕ್ಕಬಳ್ಳಾಪುರ