

ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ 286 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಲ್ಲಿ ಆಂಗ್ಲ ಮಾಧ್ಯಮದ (ದ್ವಿಭಾಷಾ) ತರಗತಿಗಳ ಜತೆಗೆ ಹೆಚ್ಚುವರಿಯಾಗಿ ಆಂಗ್ಲ ಮಾಧ್ಯಮದ ವಿಭಾಗಗಳನ್ನು ಆರಂಭಿಸುವಂತೆ ಶಾಲಾ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ.
ರಾಜ್ಯದ 286 ಕೆಪಿಎಸ್ ಶಾಲೆಗಳ ಪೈಕಿ 51 ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳದ ಹೆಇನ್ನೆಲೆಯಲ್ಲಿ ಈಗಾಗಲೇ 9 ಶಾಲೆಗಳಲ್ಲಿ ಹೆಚ್ಚುವರಿಯಾಗಿ ಎಲ್‌ಕೆಜಿಗಳನ್ನು ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಉಳಿದ 42 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಹೆಚ್ಚುವರಿ ಎಲ್‌ಕೆಜಿ ತರಗತಿಗಳನ್ನು ಪ್ರಾರಂಭಿಸಲು ಮತ್ತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿರುವ 51 ಶಾಲೆಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಹೆಚ್ಚುವರಿ ಒಂದು ತರಗತಿಗಳನ್ನು ನೀಡುವಂತೆ ಕೋರಲಾಗಿತ್ತು. 42 ಶಾಲೆಗಳಲ್ಲಿ ಹೆಚ್ಚುವರಿ ವಿಭಾಗಕ್ಕೆ 2024-25ನೇ ಸಾಲಿನಲ್ಲಿ 68.25 ಲಕ್ಷ ರೂ. ಅನುದಾನ ನೀಡುವಂತೆ ಇಲಾಖೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ಅಂಶಗಳನ್ನು ಪರಿಶೀಲಿಸಲಾಗಿದ್ದು, ಕೆಲವು ಷರತ್ತುಗಳನ್ನು ವಿಧಿಸಿ ಸರ್ಕಾರವು ಅನುಮತಿ ನೀಡಿದೆ ಎಂದು ಇಲಾಖೆ ಆಯುಕ್ತರು ಜ್ಞಾಪನ ಪತ್ರ ಹೊರಡಿಸಿದ್ದಾರೆ.
ಷರತ್ತುಗಳೇನು?
ಹೆಚ್ಚುವರಿ ತರಗತಿಗಳನ್ನು ಆರಂಭಿಸುವುದರಿಂದ ಉಂಟಾಗುವ ಹೆಚ್ಚುವರಿ ವೆಚ್ಚಗಳನ್ನು 2024-25ನೇ ಸಾಲಿನ ಬಜೆಟ್‌ನಲ್ಲಿ ಕೆಪಿಎಸ್ ಶಾಲೆಗಳಿಗೆ ನಿಗದಿಪಡಿಸಿರುವ ಅನುದಾನದಲ್ಲಿ ಭರಿಸಬೇಕು.
ಹೆಚ್ಚುವರಿ ವಿಭಾಗ ತೆರೆಯಲು ಅವಶ್ಯವಿರುವ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಮರು ನಿಯೋಜನೆಯ ಮೂಲಕ ಬಳಸಿಕೊಳ್ಳುವಂತೆ ಸರ್ಕಾರವು ಆದೇಶಿಸಿದೆ ಎಂದು ಆಯುಕ್ತ ಡಾ. ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.