

ಮೈಸೂರು: ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಅರ್ಜುನ ಆನೆಯ ಸ್ತಬ್ಧಚಿತ್ರ ಪ್ರದರ್ಶಿಸಬೇಕು ಹಾಗೂ ದಸರಾ ವಸ್ತು ಪ್ರದರ್ಶನದಲ್ಲಿ ಈ ಬಾರಿ ಅರ್ಜುನನನ್ನು ಸ್ಮರಣೆ ಮಾಡುವ ನಿಟ್ಟಿನಲ್ಲಿ ನಮ್ಮ ‘ಅರ್ಜುನ ಗ್ಯಾಲರಿ’ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಕೆಎಂಪಿಕೆ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಸತತ 9 ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದ ಅರ್ಜುನ ಆನೆ ಕಳೆದ ವರ್ಷ ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಸಾವನ್ನಪ್ಪಿತ್ತು. 2019ರಲ್ಲಿ ದಸರಾದಿಂದ ನಿವೃತ್ತಿ ಪಡೆದಿದ್ದ ಅರ್ಜುನ ಕಳೆದ ವರ್ಷದ ದಸರಾದಲ್ಲಿ ನಿಶಾನೆ ಆನೆಯಾಗಿ ಗಜಪಡೆಯನ್ನು ಮುನ್ನಡೆಸಿ ಸೇ ೆಸಲ್ಲಿಸಿದೆ. ಈ ವರ್ಷವೂ ನಿಶಾನೆಯಾಗಿ ಭಾಗಿಯಾಗುವ ನಿರೀಕ್ಷೆ ಇತ್ತು. ರಾಜ್ಯ ಸರ್ಕಾರ ಸಕಲೇಶಪುರದ ಅರಣ್ಯ ಪ್ರದೇಶದಲ್ಲಿ ಅರ್ಜುನ ಆನೆಯ ಅಂತ್ಯಕ್ರಿಯೆಯನ್ನು ಮಾಡಿದ್ದು, ಸಮಾಧಿ ಸ್ಥಳದಲ್ಲಿ ಹಾಗೂ ಅರ್ಜುನನ ವಾಸಸ್ಥಳವಾಗಿದ್ದ ಎಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ ಈವರೆಗೂ ಸ್ಮಾರಕ ನಿರ್ಮಾಣದ ಕಾಮಗಾರಿಯೇ ಪ್ರಾರಂಭವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಆನೆಗೆ ಗೌರವ ಸೂಚಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದ್ದರಿಂದ ದಸರಾ ಮಹೋತ್ಸವದಲ್ಲಿ ಅರ್ಜುನ ಆನೆಯ ಸ್ತಬ್ಧಚಿತ್ರ ಪ್ರದರ್ಶಿಸುವ ಮೂಲಕ ಅರ್ಜುನನ ಸ್ಮರಿಸಬೇಕು ಎಂದು ಒತ್ತಾಯಿಸಿ ಗುರುವಾರ ಅಪರ ಜಿಲ್ಲಾಧಿಕಾರಿ ಶಿವರಾಜು ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಅರ್ಜುನ ಆನೆಯ ಸೇವೆ, ಭಾವಚಿತ್ರ ಮಾಹಿತಿಯುಳ್ಳ ‘ನಮ್ಮ ಅರ್ಜುನ’ ಸ್ಮರಿಸುವ ಗ್ಯಾಲರಿಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ.ರಾಘವೇಂದ್ರ, ಮುಖಂಡರಾದ ಚರಣ್‌ರಾಜ್, ಬೈರತಿ ಲಿಂಗರಾಜು, ಸುಚೇಂದ್ರ, ಚಕ್ರಪಾಣಿ, ಮೋಹನ್ ಕುಮಾರ್ ಇತರರಿದ್ದರು.