

ನವದೆಹಲಿ: ಭಾರತದಲ್ಲಿ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕಾರ್ಯಕ್ರಮದ ಭಾಗವಾಗಿ ಶುರು ಮಾಡಲಾದ ಟೆಲಿ-ಮಾನಸ್ ಟೋಲ್-ಫ್ರೀ ಸಂಖ್ಯೆಯು ದಿನಕ್ಕೆ ಸರಾಸರಿ ಅಂದರೆ 3,500ಕ್ಕೂ ಅಧಿಕ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
ಸಚಿವಾಲಯದ ಪ್ರಕಾರ, ಸಹಾಯವಾಣಿಯು ಡಿಸೆಂಬರ್ 2022ರಲ್ಲಿ ಸುಮಾರು 12,000ರಿಂದ ಮೇ 2024ರಲ್ಲಿ 90,000ಕ್ಕೂ ಹೆಚ್ಚು ಕರೆ ಮಾಡುವವರ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಕಂಡಿದೆ. ಇದು ಫಾಲೋ-ಅಪ್‌ಗಾಗಿ ಕಾಲ್-ಬ್ಯಾಕ್‌ಗಳನ್ನು ಸಹ ಸಂಯೋಜಿಸುತ್ತದೆ. ಟೆಲಿ-ಮಾನಸ್ ಎಂಬ ವಿಶೇಷ ಸಹಾಯವಾಣಿಯನ್ನು ಅಕ್ಟೋಬರ್ 2022ರಂದು ದೇಶದ ನಾನಾ ಭಾಗಗಳಲ್ಲಿ ಚಾಲನೆಗೆ ಬರುವಂತೆ ಜಾರಿಗೊಳಿಸಲಾಯಿತು.
ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 51 ಟೆಲಿ-ಮಾನಸ್ ಸಹಾಯವಾಣಿಗೆ ಅಂದಿನಿಂದ 10 ಲಕ್ಷಕ್ಕೂ ಹೆಚ್ಚು ಕರೆಗಳು ಬಂದಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಗಳು 14416 ಅಥವಾ 1-800-891-4416 ಇದೆ. ರಾಷ್ಟ್ರವ್ಯಾಪಿ ಮಾನಸಿಕ ಆರೋಗ್ಯ ಸೇವೆಯ ವಿತರಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಆರೋಗ್ಯ ಇಲಾಖೆ, ಬಹು-ಭಾಷಾ ಬೆಂಬಲವನ್ನು ಸಹ ನೀಡಿದ್ದು, ಮಾನಸಿಕ ಆರೋಗ್ಯ ವೃತ್ತಿಪರರ ನಡುವೆ ಸಂವಹನವನ್ನು ಸುಲಭಗೊಳಿಸುವಲ್ಲಿ ಈ ಸಹಾಯವಾಣಿಯನ್ನು ಚಾಲನೆಗೆ ತಂದಿದೆ.
"ಈ ಸಹಾಯವಾಣಿಯು ಮಾನಸಿಕ ಆರೋಗ್ಯ ಉಪಕ್ರಮಗಳ ವಿಸ್ತರಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ಪ್ರತಿಯೊಬ್ಬರು ಕೂಡ ಇದರ ಅಗತ್ಯವಿದ್ದರೆ, ಉಪಯೋಗಿಸಿಕೊಳ್ಳಬಹುದು. ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ರೂಪಿಸಿರುವ ಈ ಸಂಪನ್ಮೂಲ ಒಂದು ಮಹತ್ವದ ಮೈಲಿಗಲ್ಲು" ಎಂದು ಆರೋಗ್ಯ ಸಚಿವಾಲಯ ಹೇಳಿದೆ,(ಏಜೆನ್ಸೀಸ್).