

ನವದೆಹಲಿ: ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ಬಾಧಿಸಿ ಲಕ್ಷಾಂತರ ಪ್ರಾಣಕ್ಕೆ ಕುತ್ತು ತಂದ ಕರೊನಾ ಸಾಂಕ್ರಾಮಿಕ ಲಕ್ಷಾಂತರ ಜೀವನೋಪಾಯಗಳನ್ನು ಕೂಡ ಕಸಿದು ಕೊಂಡಿದೆ. ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರಿಂದ ಜಗತ್ತಿನ ನಾನಾ ಕಡೆಗಳಲ್ಲಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳ ಪಟ್ಟಿಗೆ ಸೇರಿದ್ದು ಕಟು ವಾಸ್ತವವಾಗಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಅದರಲ್ಲೂ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಹೊಡೆತ ಅನುಭವಿಸಿದ್ದಾರೆ. ಜಗತ್ತಿನಲ್ಲಿ ಕರೊನಾ ಪೂರ್ವದಲ್ಲಿ ನೌಕರಿಗಳಲ್ಲಿದ್ದ ಮಹಿಳೆಯರಲ್ಲಿ ಬಹಳಷ್ಟು ಮಂದಿ ಕರೊನಾ ಅವಧಿಯಲ್ಲಿ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಗತ್ತಿನ ಎರಡನೇ ಅಧಿಕ ಜನಸಂಖ್ಯೆಯ ಭಾರತದಲ್ಲಿ ಉದ್ಯೋಗ ನಷ್ಟದ ಪ್ರವೃತ್ತಿ ಏರುತ್ತಿರುವುದನ್ನು ‘ದಿ ಪೇ ಚೆಕ್’ ಪಾಡ್ಕಾಸ್ಟ್ನ ಈ ವಾರದ ಸಂಚಿಕೆ ಬಯಲು ಮಾಡಿದೆ. ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ 2022ರಲ್ಲಿ ಶೇಕಡ 9ರಷ್ಟು ಕುಸಿದಿದ್ದು ಇದು ಆರ್ಥಿಕತೆಗೆ ವಿನಾಶಕಾರಿ ವಿದ್ಯಮಾನವಾಗಿದೆ ಎಂದು ಮುಂಬೈಯ ಆರ್ಥಿಕ ತಜ್ಞರು ಹೇಳಿದ್ದಾರೆ. ಸಾಂಕ್ರಾಮಿಕತೆಗೂ ಮುನ್ನವೇ ಕುಸಿತ ಆರಂಭಿಸಿದ್ದ ದೇಶದ ಆರ್ಥಿಕತೆಯು ಸೋಂಕಿನಿಂದಾಗಿ ಉಧ್ವಸ್ತಗೊಂಡಿತ್ತು. ಆದರೆ ಈಗ ಚಟುವಟಿಕೆಗಳು ಗರಿಗೆದರುತ್ತಿವೆಯಾದರೂ ಸ್ತ್ರೀ ಸಮೂಹ ಉದ್ಯೋಗ ಕಳೆದುಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಪುನಃ ಕೆಲಸ ಕೊಡದಿರುವುದರಿಂದ ಜಾಗತಿಕವಾಗಿ ಟ್ರಿಲಿಯಗಟ್ಟಲೆ ಡಾಲರ್ ಹಣ ನಷ್ಟವಾಗಲಿದೆ ಎಂದು ಔದ್ಯೋಗಿಕ ವಿಶ್ಲೇಷಣಾಕಾರರು ಅಭಿಪ್ರಾಯಪಟ್ಟಿದ್ದಾರೆ. 2010ರಿಂದ 2020ರ ಅವಧಿಯಲ್ಲಿ ಭಾರತದಲ್ಲಿ ಮಹಿಳೆಯರಲ್ಲಿನ ಉದ್ಯೋಗ ನಷ್ಟ ಪ್ರಮಾಣ ಶೇ. 26ರಿಂದ 19ಕ್ಕೆ ಇಳಿಕೆ ಆಗಿತ್ತು ವಿಶ್ವಬ್ಯಾಂಕ್ ವರದಿ ಉಲ್ಲೇಖಿಸಿದೆ.
ಇಡಿ ವಿಚಾರಣೆಗೆ ಅಡ್ಡಿಯಿಲ್ಲವೆಂದ ಕಾಂಗ್ರೆಸ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಸ್ವಯಂ ಐಸೊಲೇಷನ್ಗೆ ಒಳಪಟ್ಟಿದ್ದಾರೆ. ಆದರೆ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಜೂನ್ 8ರಂದು ಜಾರಿ ನಿರ್ದೇಶನಾಲಯದ (ಇಡಿ) ಮುಂದೆ ಹಾಜರಾಗಲು ಇದು ಅಡ್ಡಿ ಆಗುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಅಧ್ಯಕ್ಷರು ಕಳೆದ ವಾರ ಅನೇಕ ನಾಯಕರು ಹಾಗೂ ಕಾರ್ಯಕರ್ತರನ್ನು ಭೇಟಿಯಾಗಿದ್ದರು. ಆ ಪೈಕಿ ಕೆಲವರು ಕರೊನಾ ಪಾಸಿಟಿವ್ ಆದವರು ಇದ್ದರು ಎಂದು ಎಂದು ಹಿರಿಯ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ.