ಜನರೊಂದಿಗೆ ಜನತಾದಳ ಅಭಿಯಾನ: 55 ವಿಧಾನಸಭಾ ಕ್ಷೇತ್ರದಲ್ಲಿ ಮುಗಿದ ಪ್ರವಾಸ, 7 ಸಾವಿರ ಕಿ.ಮೀ.ಸುತ್ತಾಟ, ಮೈಸೂರಿನಲ್ಲಿ ಸಭೆ

JDS-party-symbol
Published on

ಬೆಂಗಳೂರು:

ಜನರೊಂದಿಗೆ ಜನತಾದಳ ಅಭಿಯಾನ ನಡೆಸುತ್ತಿರುವ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು 55 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮುಗಿಸಿದ್ದು, ಮುಂದಿನ ಭಾಗವಾಗಿ ಮೈಸೂರು ಜಿಲ್ಲೆಯಲ್ಲಿ ಅಭಿಯಾನ ಮುಂದುವರಿಸಲಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಅಭಿಯಾನ ನಡೆದಿದ್ದು, ಈ ವಾರದೊಳಗೆ ಯಶವಂತಪುರ ಕ್ಷೇತ್ರದಲ್ಲಿ ಅಭಿಯಾನ ಆಯೋಜಿಸಲು ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ.

ವಿಧಾನಸಭೆ ಅಧಿವೇಶನ ಮುಗಿದ ಮೇಲೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಳ್ಳುವಂತೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ಅಭಿಯಾನ ನಡೆಯಲಿದೆ. ಮೈಸೂರು, ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಲು ಉದ್ದೇಶಿಸಲಾಗಿದೆ.

7 ಸಾವಿರ ಕಿ.ಮೀ. ಸುತ್ತಾಟ

ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆ ಮತ್ತುವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಮಾಡಿರುವ ಪ್ರವಾಸದ ಒಟ್ಟು ಸುತ್ತಾಟ 7 ಸಾವಿರ ಕಿ.ಮೀ.ದಾಟಿದೆ. ಇದರಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗವೂ ಸೇರಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಅಸಮಾಧಾನ ಸರಿಪಡಿಸಲು ಚರ್ಚೆ:

ನಾನಾ ಕಾರಣಕ್ಕಾಗಿ ಹಿರಿಯ ನಾಯಕರು ಮತ್ತು ಕಾರ್ಯಕರ್ತರುಗಳ ನಡುವೆ ವ್ಯತ್ಯಾಸಗಳು ಅಲ್ಲಲ್ಲಿ ಇರುವುದನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸೂಚ್ಯವಾಗಿ ಗಮನಕ್ಕೆ ತಂದಿದ್ದಾರೆ. ಆಯಾ ಜಿಲ್ಲೆಯೊಳಗೆ ಪಕ್ಷದೊಳಗಿರುವ ಅಸಮಾಧಾನಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸಲಹೆ ನೀಡಿದ್ದು, ಈ ನಿಟ್ಟಿನಲ್ಲಿಯೂ ನಿಖಿಲ್ ಕುಮಾರಸ್ವಾಮಿ ಹೆಜ್ಜೆ ಇಟ್ಟಿದ್ದಾರೆ.

ಪಕ್ಷದ ಕಾರ್ಯಕರ್ತರುಗಳ ಅಭಿಪ್ರಾಯಕ್ಕೆ ಮೊದಲು ಮನ್ನಣೆ ನೀಡಬೇಕು. ನಂತರ ಪಕ್ಷದ ಮುಖಂಡರ ಮಾತುಗಳನ್ನು ಆಲಿಸಿ ಬಳಿಕ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವ ಸಲಹೆಗಳನ್ನು ವರಿಷ್ಠರು ನಿಖಿಲ್‌ಗೆ ತಿಳಿಸಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net