ಸಂಪಾದಕೀಯ| ಜನರ ಹೋರಾಟ ಪರಿಣಾಮಕಾರಿ

E 1
Published on

ಕರೊನಾ ಸೋಂಕಿನ ಹಾವಳಿನಿಯಂತ್ರಣಕ್ಕೆ ಬರುತ್ತಿಲ್ಲ. ಈವರೆಗೆ, ಮಹಾರಾಷ್ಟ್ರ, ದೆಹಲಿ ಮತ್ತು ತಮಿಳುನಾಡು ಸ್ಥಿತಿ ಚಿಂತೆಗೆ ಕಾರಣವಾಗಿತ್ತು. ಆದರೆ, ಕರ್ನಾಟಕದಲ್ಲೂ ಸೋಂಕು ಪ್ರಕರಣಗಳು ವೇಗವಾಗಿ ವೃದ್ಧಿಸುತ್ತಿವೆ. ಸೋಂಕು ಪ್ರಸರಣದ ವೇಗವನ್ನು ತಗ್ಗಿಸಲು ಸರ್ಕಾರ ಹರಸಾಹಸ ಪಡುತ್ತಿದೆಯಾದರೂ, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಮುಂದಿನ ಕೆಲ ದಿನಗಳ ಕಾಲ ಇದೇ ಸ್ಥಿತಿ ಮುಂದುವರಿದರೆ, ಚಿಕಿತ್ಸೆ ನಿಟ್ಟಿನಲ್ಲಿ ಸರ್ಕಾರ ಮಾಡಿಕೊಂಡ ಸಿದ್ಧತೆಗಳು ಸಾಕಾಗದ ಸನ್ನಿವೇಶ ತಲೆದೋರಬಹುದು. ಮತ್ತೊಂದೆಡೆ, ಮತ್ತೆ ದಿಗ್ಬಂಧನ ವಿಧಿಸಬೇಕೆ ಎಂಬ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ರಾತ್ರಿ ಕರ್ಫ್ಯೂವನ್ನು ಬಿಗಿಗೊಳಿಸಿದೆ.

ಜುಲೈ 5ರಿಂದ ಭಾನುವಾರ ಲಾಕ್​ಡೌನ್ ಕೂಡ ಜಾರಿಯಾಗುತ್ತಿದೆ. ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾಗರಿಕ ಸಮುದಾಯ ಕೂಡ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದ ಹಲವೆಡೆ ವ್ಯಾಪಾರಿ ಸಂಘಗಳು, ವರ್ತಕರು, ಯುವಕರ ಪಡೆ ಸೇರಿ ಜನರೇ ಸ್ವಯಂ ಲಾಕ್​ಡೌನ್ ಅಥವಾ ಸೀಲ್​ಡೌನ್​ಗೆ ಮುಂದಾಗಿರುವುದು ಗಮನಾರ್ಹ. ಕರೊನಾ ವಿರುದ್ಧ ಹೋರಾಟದಲ್ಲಿ ಸರ್ಕಾರದ ಜತೆ ಜನರು ಕೈಜೋಡಿಸಬೇಕೆಂಬ ಆಗ್ರಹ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿತ್ತು. ಅದೀಗ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತಿರುವುದು ಸಮಾಧಾನಕರ. ಕೆಲವೆಡೆ ವ್ಯಾಪಾರಿ ಸಂಘಟನೆಗಳೇ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಪತ್ರ ಬರೆದು ಸೀಲ್​ಡೌನ್ ಮಾಡುವಂತೆ ಮನವಿ ಮಾಡುತ್ತಿರುವುದು ವಿಶೇಷ. ಬೆಂಗಳೂರಿನ ಚಿಕ್ಕಪೇಟೆ, ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ, ಮಲ್ಲೇಶ್ವರ, ಬಸವನಗುಡಿ, ಯಶವಂತಪುರ ಸೇರಿ ಹಲವೆಡೆ ಸ್ವಯಂಪ್ರೇರಿತವಾಗಿ ಅಂಗಡಿಮುಂಗಟ್ಟು ಬಂದ್ ಮಾಡುವುದರ ಮೂಲಕ, ಸೋಂಕು ಪ್ರಸರಣ ವೇಗ ತಗ್ಗಿಸಲು ಯತ್ನಿಸುತ್ತಿರುವುದು ಉತ್ತಮ ಕ್ರಮ. ಬರೀ ಬೆಂಗಳೂರಿನಲ್ಲಿ ಮಾತ್ರವಲ್ಲ ಬಳ್ಳಾರಿಯಲ್ಲಿ ಮಧ್ಯಾಹ್ನ 3 ಗಂಟೆ ಬಳಿಕ ಅಂಗಡಿಗಳನ್ನು ಮುಚ್ಚಲು ಸ್ಥಳೀಯ ವ್ಯಾಪಾರಿಗಳು ನಿರ್ಧರಿಸಿದ್ದಾರೆ. ಚಿಕ್ಕಮಗಳೂರು, ಚಾಮರಾಜನಗರದ ಹಲವೆಡೆಯೂ ಇದೇ ಕ್ರಮ ಅನುಸರಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್​ಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದೆ.

ಈ ಹಂತದಲ್ಲಿ ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ನಾಗರಿಕರ ಸಹಕಾರ ತೀರಾ ಅವಶ್ಯ. ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಸ್ವಯಂ ಲಾಕ್​ಡೌನ್​ನಂಥ ಕ್ರಮಗಳು ಪ್ರಯೋಜನಕಾರಿ ಆಗಬಲ್ಲವು. ಅದರಂತೆ, ಸಾಮಾನ್ಯ ಜನರು ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜನಸಂದಣಿ ಪ್ರದೇಶಗಳಲ್ಲಿ ಸಂಚರಿಸುವುದು, ಅನಗತ್ಯವಾಗಿ ಮನೆಯಿಂದ ಹೊರಬರುವುದು ಹೀಗೆ ಇಂಥ ಹಲವು ಅಪಸವ್ಯಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ. ಎಷ್ಟೋ ಕಡೆಗಳಲ್ಲಿ ಜನರು ಈಗಲೂ ಮಾಸ್ಕ್ ಧರಿಸುತ್ತಿಲ್ಲ. ಹಾಗಾಗಿಯೇ, ಸರ್ಕಾರ ಮಾಸ್ಕ್ ಹಾಕದೆ ಇರುವವರ ಮೇಲೆ ದಂಡದ ಅಸ್ತ್ರ ಪ್ರಯೋಗಿಸುತ್ತಿದೆ. ಮಾಸ್ಕ್ ಹಾಕದೆ ಸಂಚರಿಸುವುದು, ವೈಯಕ್ತಿಕ ಅಂತರವನ್ನು ಕಾಯ್ದುಕೊಳ್ಳದೆ ನಿರ್ಲಕ್ಷ್ಯ ವಹಿಸುವುದು ಸೇರಿ ಒಂದು ಸಣ್ಣ ತಪು್ಪ ಕೂಡ ದೊಡ್ಡ ಹಾನಿಯನ್ನು ಸೃಷ್ಟಿಸಬಲ್ಲದು. ನಾಗರಿಕರಿಗೂ ಅವರದ್ದೇ ಆದ ಜವಾಬ್ದಾರಿ, ಕರ್ತವ್ಯ ಇರುತ್ತದೆ. ಆ ಬದ್ಧತೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದಾಗ ಕರೊನಾ ಸಮಸ್ಯೆಯ ತೀವ್ರತೆ ತಗ್ಗಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net