ಸಹಜತೆಯತ್ತ ಜನಜೀವನ;ಕರೊನಾ ಮಹಾಮಾರಿಗೆ ಬಿತ್ತು ಕಡಿವಾಣ, ಬಹುತೇಕ ನಿರ್ಬಂಧ ತೆರವು..

Front
Published on

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಕಾಡಿದ ಕರೊನಾ ಸೋಂಕಿನ ಉಪಟಳ ಕ್ರಮೇಣ ಇಳಿಮುಖವಾಗುತ್ತಿರುವ ಪರಿಣಾಮ ರಾಜ್ಯದ ಜನಜೀವನ ದೀಪಾವಳಿ ಹಬ್ಬದೊಂದಿಗೆ ಸಹಜತೆಗೆ ಮರಳಿದೆ. ದೀರ್ಘ ಕಾಲದಿಂದ ಚಾಲ್ತಿಯಲ್ಲಿದ್ದ ರಾತ್ರಿ 10 ರಿಂದ ಬೆಳಗಿನ 5ರವರೆಗಿನ ಕರ್ಫ್ಯೂ ಅನ್ನು ಸರ್ಕಾರ ವಾಪಸ್ ಪಡೆದಿದೆ. ಸೋಮವಾರದಿಂದ ರಾಜ್ಯಾದ್ಯಂತ ಅಂಗನವಾಡಿ ಮತ್ತು ಬಾಲವಾಡಿಗಳು (ಎಲ್​ಕೆಜಿ, ಯುಕೆಜಿ) ಪ್ರಾರಂಭವಾಗಲಿದ್ದು, ಶಾಲಾ ಆವರಣಗಳಲ್ಲಿ ಎಂದಿನ ಲವಲವಿಕೆ ಕಾಣಲಿವೆ. ಇನ್ನು ತೈಲ ಬೆಲೆಯೇರಿಕೆ ಹೊರೆ ತುಸು ಇಳಿದಿರುವುದು ಜನರ ಬದುಕಿಗೆ ಚೈತನ್ಯ ತುಂಬಿದೆ.

ಚಟುವಟಿಕೆ ಚುರುಕು: ರಾತ್ರಿ ಕರ್ಫ್ಯೂ ವಾಪಸ್ ಪಡೆಯು ವುದರೊಂದಿಗೆ ಸರ್ಕಾರ ಎಲ್ಲ ನಿರ್ಬಂಧ ಕೈಬಿಟ್ಟಿದ್ದು, ಉದ್ಯಮ- ವಹಿವಾಟು, ನಿರ್ಮಾಣ ಚಟುವಟಿಕೆ ಮತ್ತಷ್ಟು ಚುರುಕುಗೊಳ್ಳಲಿವೆ. ರಾತ್ರಿ ಪಾಳಿ ಅಲವಂಬಿತ ಕೈಗಾರಿಕೆ-ವ್ಯಾಪಾರ ವಲಯವು ನಿರಾಳವಾಗಲಿದೆ. ಇದರ ಜತೆಗೆ ಕುದುರೆ ರೇಸ್​ಗಳಿಗೂ ಷರತ್ತುಬದ್ಧ ಒಪ್ಪಿಗೆ ನೀಡಿದೆ. ಆರ್ಥಿಕತೆ ವೃದ್ಧಿಗೆ ಒತ್ತು ನೀಡಲು ಸರ್ಕಾರದ ಕಸರತ್ತುಗಳಿಂದಾಗಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ ಗಣನೀಯವಾಗಿ ವೃದ್ಧಿಯಾಗಿದ್ದು, ಕಳೆದ ವರ್ಷ ಇದೇ ಮಾಸಕ್ಕೆ ಹೋಲಿಸಿದರೆ ಶೇ.18 ಏರಿಕೆ ಕಂಡಿದೆ. ಜತೆಗೆ ದೇಶದ ಪ್ರಮುಖ ರಾಜ್ಯಗಳ ಪೈಕಿ ಮೂರನೇ ಸ್ಥಾನದಲ್ಲಿದ್ದು ಗುಜರಾತ್ ಜತೆ ಪೈಪೋಟಿ ನಡೆಸಿದೆ. ಈ ಮೂಲಕ ಆರ್ಥಿಕ ಚಟು ವಟಿಕೆ ಚೇತರಿಕೆ ಹಾದಿಯಲ್ಲಿ ಇರುವಂತೆ ಕಾಣಿಸಿದೆ.

ತೈಲ ಆಯ್ತು ಇನ್ನು ಎಲ್ಪಿಜಿ ಹಗುರ?: ಕರೊನಾ ಹಾವಳಿ ತಗ್ಗಿದ ಕಾರಣ ಜನರು ನಿರಾಳರಾಗಿದ್ದಾರೆ. ಈ ಮಧ್ಯೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲಿನ ಸುಂಕವನ್ನು ಕಡಿತ ಮಾಡಿರುವುದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಖಾದ್ಯ ತೈಲ (ಅಡುಗೆ ಎಣ್ಣೆ) ದರವೂ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಇದರ ಲಾಭ ನೇರ ಗ್ರಾಹಕರ ಕಿಸೆಗೆ ಸೇರಬೇಕೆಂಬ ಉದ್ದೇಶದಿಂದ ಹೆಚ್ಚುವರಿ ದಾಸ್ತಾನಿಗೂ ಕೇಂದ್ರ ಸರ್ಕಾರ ಲಗಾಮು ಹಾಕಿದೆ. ಇನ್ನು ವಾಣಿಜ್ಯ ಬಳಕೆಯ ಎಲ್ಪಿಜಿ ಬೆಲೆ ತಗ್ಗುವ ಸಾಧ್ಯತೆಯೂ ಗೋಚರಿಸಿದೆ.

ಕರೊನಾ ಇಳಿಮುಖ: ರಾಜ್ಯದಲ್ಲಿ ದಿನದ ಹೊಸ ಪ್ರಕರಣಗಳ ಸಂಖ್ಯೆ ಜತೆಗೆ ಸೋಂಕು ದೃಢತೆ ಪ್ರಮಾಣ ಕೂಡ ಗಣನೀಯವಾಗಿ ಇಳಿಕೆ ಕಂಡಿದೆ. ಶುಕ್ರವಾರ 214 ಹೊಸ ಪ್ರಕರಣ ವರದಿಯಾಗಿತ್ತು. ಹಾಗೆಯೇ ಸೋಂಕು ದೃಢತೆ ಪ್ರಮಾಣ ಶೇ.0.26 ಹಾಗೂ ಮರಣ ಪ್ರಮಾಣ ಶೇ.2.23ಕ್ಕೆ ಇಳಿದಿತ್ತು. ಶನಿವಾರ 224 ಪ್ರಕರಣಗಳು ಬೆಳಕಿಗೆ ಬಂದಿದ್ದು ಐವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಈವರೆಗಿನ ಸೋಂಕಿತರ ಸಂಖ್ಯೆ 29.89 ಲಕ್ಷ ಮೀರಿದ್ದು, 38,107 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 48 ಗಂಟೆಗಳಲ್ಲಿ ರಾಜ್ಯದಲ್ಲಿ 603 ಮಂದಿ (ಶುಕ್ರವಾರ 286, ಶನಿವಾರ 317) ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಒಟ್ಟು ಸಂಖ್ಯೆ 29.43 ಲಕ್ಷ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 8,188 ತಲುಪಿದೆ.

ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿ 266 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಮೈಸೂರು 34, ದಕ್ಷಿಣ ಕನ್ನಡ 25, ಉಡುಪಿ 17, ಉತ್ತರ ಕನ್ನಡ 14 ಪ್ರಕರಣಗಳು ವರದಿಯಾಗಿವೆ. 48 ಗಂಟೆಗಳಲ್ಲಿ ಬೆಂಗಳೂರು ನಗರ, ಬೆಳಗಾವಿ, ಬೀದರ್, ಕೋಲಾರ, ಕೊಪ್ಪಳ, ಮಂಡ್ಯ, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಮಂಡ್ಯ, ಮೈಸೂರು ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಲಾ ಒಬ್ಬರಂತೆ 12 ಮಂದಿ ಮೃತಪಟ್ಟಿದ್ದಾರೆ.

ದೈನಿಕ ಕೇಸ್​ನಲ್ಲಿ ಇಳಿಕೆ: ಭಾರತದಲ್ಲಿ ಶನಿವಾರ ಬೆಳಗ್ಗೆಗೆ ಕೊನೆಗೊಂಡ 24 ತಾಸಿನ ಅವಧಿಯಲ್ಲಿ 10,929 ಹೊಸ ಪ್ರಕರಣಗಳು ವರದಿಯಾಗಿದೆ. ಇದು 255 ದಿನಗಳ ನಂತರ ದಿನವೊಂದರಲ್ಲಿ ದಾಖಲಾದ ಕಡಿಮೆ ಸಂಖ್ಯೆಯಾಗಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.43 ಇದೆ. 3.37 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ವಾರದ ಪಾಸಿಟಿವಿಟಿ ದರ ಶೇ. 1.27 ಇದೆ. 107.92 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ನಿಯಮಗಳು ಅಬಾಧಿತ: ಸೋಂಕು ಕುಸಿತ, ಬೆಲೆ ಕಡಿತ, ದೈನಂದಿನ ಚಟುವಟಿಕೆ ಎಂದಿನಂತಿರಲಿವೆ ಎಂಬ ಖುಷಿಯ ನಡುವೆಯೂ ಕರೊನಾ ಮೂರನೇ ಅಲೆ ಭೀತಿ ತಪ್ಪಿಲ್ಲ. ಮೈಮರೆವಿನಿಂದಾಗಿ ಎರಡನೇ ಅಲೆ ತಂದಿಟ್ಟ ಕಂಟಕದ ಕಹಿ ರಾಜ್ಯ ಸರ್ಕಾರ ಮರೆತಿಲ್ಲ. ತಜ್ಞರು ಎಚ್ಚರಿಸುವುದನ್ನೂ ಬಿಟ್ಟಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಕಡ್ಡಾಯಗೊಳಿಸಿದೆ. ಹೊಸ ಪ್ರಕರಣಗಳು, ಪಾಸಿಟಿವಿಟಿ ದರ ಇಳಿದಿದೆ ಎಂದ ಮಾತ್ರಕ್ಕೆ ಲಸಿಕೆ ಹಾಕಿಸಿಕೊಳ್ಳುವುದು ನಿರ್ಲಕ್ಷಿಸಬಾರದು ಎಂದು ಮನವಿ ಮಾಡಿದೆ. ಮಾಸ್ಕ್ ಧರಿಸುವುದು, ದೈಹಿ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಸ್ವಚ್ಛತೆಗೆ ಆದ್ಯತೆ ಮುಂದುವರಿಸಿ, ಆದಷ್ಟು ಜನರು ಗುಂಪುಗೂಡಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆತಂಕ ಇಲ್ಲ ಏಕೆ?: ರಾಜ್ಯದಲ್ಲಿ ಕರೊನಾ ಸೋಂಕಿನ ದೈನಂದಿನ ದೃಢತೆ ಪ್ರಮಾಣ ಶೇ.5ಕ್ಕಿಂತ ಕೆಳಗಿಳಿದರೆ ಯಾವುದೇ ಆತಂಕ ಬೇಡ ಎಂದು ತಜ್ಞರು ಹೇಳಿದ್ದರು. ಆದರೆ ಈಗಾಗಲೇ ಸೋಂಕು ದೃಢತೆ ಪ್ರಮಾಣ ಶೇ.1ಕ್ಕಿಂತ ಕೆಳಗಿಳಿದಿರುವುದು ನೆಮ್ಮದಿ ಮೂಡಿಸಿದೆ. ಇನ್ನು ಭಾರತದಾದ್ಯಂತ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ ಇಳಿಕೆಯಾಗಿದೆ.

ನಿರ್ಬಂಧ ತೆರವುಗೊಳಿಸಿದ ಮಾತ್ರಕ್ಕೆ ಕರೊನಾ ಸಂಪೂರ್ಣ ಮುಕ್ತವಾಗಿದೆ ಎಂದು ಭಾವಿಸ ಬಾರದು.ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಸೋಂಕು ಹರಡದಂತೆ ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು. | ಡಾ.ಕೆ.ಸುಧಾಕರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ಚೆಕ್​ಪೋಸ್ಟ್​ಗಳಲ್ಲಿ ಹಗಲುದರೋಡೆ

ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಅತ್ಯಂತ ಹೆಚ್ಚಿದ್ದ ಸಂದರ್ಭದಲ್ಲಿ ಆ ರಾಜ್ಯಗಳಿಂದ ಬರುವವರಿಗೆ ಆರ್​ಟಿಪಿಸಿಆರ್ ವರದಿ ತರುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು. ಸದ್ಯ ನೆರೆ ರಾಜ್ಯಗಳಲ್ಲಿ ಪ್ರಕರಣಗಳು ತಗ್ಗಿದ್ದರೂ, ರಾಜ್ಯ ಸರ್ಕಾರ ನಿರ್ಬಂಧ ತೆರವು ಮಾಡಿಲ್ಲ. ಇದು ರಾಜ್ಯದ ಗಡಿಭಾಗಗಳಲ್ಲಿ ಪೊಲೀಸರು ಪ್ರಯಾಣಿಕರ ಹಗಲುದರೋಡೆ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬಸ್ಸು, ಕಾರು ಸೇರಿದಂತೆ ಖಾಸಗಿ ವಾಹನಗಳಲ್ಲಿ ಮಹಾರಾಷ್ಟ್ರದಿಂದ ಆಗಮಿಸುತ್ತಿರುವವರಿಂದ ರಾಜ್ಯದ ಚೆಕ್​ಪೋಸ್ಟ್​ನಲ್ಲಿ ತಲಾ ವಾಹನಕ್ಕೆ 5ರಿಂದ 20 ಸಾವಿರ ರೂ.ವರೆಗೆ ವಸೂಲಿ ಮಾಡಿ ಒಳಗೆ ಬಿಡುತ್ತಿರುವ ಆರೋಪ ಕೇಳಿಬಂದಿದೆ.

ನಿತ್ಯ ಸಾವಿರಾರು ವಾಹನಗಳು ರಾಜ್ಯದೊಳಕ್ಕೆ ಬರುತ್ತಿದ್ದು, ಅವುಗಳಲ್ಲಿ ಹೆಚ್ಚಿನವರು ಆರ್​ಟಿಪಿಸಿಆರ್ ವರದಿ ತರುತ್ತಿಲ್ಲ. ಅಂಥವರ ಬಳಿ ಹಣ ಪಡೆದು ಪ್ರವೇಶ ನೀಡಲಾಗುತ್ತಿದೆ. ಈ ರೀತಿ ಪ್ರತಿನಿತ್ಯ ಖಾಸಗಿ ಪ್ರಯಾಣಿಕರಿಂದ ಲಕ್ಷಾಂತರ ರೂ. ಸುಲಿಗೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಇನ್ನು ಕೆಲವರು ಹೆಚ್ಚುವರಿ ಹಣ ತೆತ್ತು ನಕಲಿ ಆರ್​ಟಿಪಿಸಿಆರ್ ರಿಪೋರ್ಟ್ ತರುತ್ತಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಿದೆ. ಸೋಂಕು ಲಕ್ಷಣ ಹೊರತುಪಡಿಸಿ ಉಳಿದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಆದೇಶದಿಂದ ವಿನಾಯಿತಿ ನೀಡುವುದು ಸೂಕ್ತ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net