

ಸರಗೂರು: ಪಟ್ಟಣದ 10 ವಾರ್ಡ್‌ನಲ್ಲಿ ಕೋತಿಗಳ ಹಾವಳಿಯಿಂದ ಹೊರಗಡೆ ಹೋಗಲು ಭಯವಾಗುತ್ತಿದೆ. ಕೂಡಲೇ ಕೋತಿಗಳನ್ನು ಹಿಡಿದು ಬೇರೆ ಕಡೆ ಸಾಗಿಸಬೇಕು ಎಂದು ವಾರ್ಡಿನ ಜನರು ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುಮಾರು ವಾರ್ಡ್‌ಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲೆ ಕೋತಿಗಳು ದಾಳಿ ಮಾಡಿ ಗಾಯಗೊಳಿಸಿವೆ. ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯವರು ಕೂಡಲೇ ಇದಕ್ಕೊಂದು ಪರಹಾರ ಕಂಡುಹಿಡಿಯಬೇಕು ಎಂದು ವಾರ್ಡಿನ ಶಾಂತಿ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ವಿಷಯ ತಿಳಿಸಿದರೂ ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೋತಿಗಳ ಹಾವಳಿಯಿಂದ ವಾರ್ಡಿನ ಜನರು ಕಂಗಾಲಾಗಿದ್ದು, ರಸ್ತೆಯಲ್ಲಿ ಮತ್ತು ಮನೆಯ ಮುಂಭಾಗದಲ್ಲಿ ಒಬ್ಬೊಬ್ಬರೇ ತಿರುಗಾಡುವಂತಿಲ್ಲ. ಯಾರಿಗೆ ದೂರು ಕೊಡಬೇಕೆಂಬುದೇ ತೋಚುತ್ತಿಲ್ಲ ಎಂದು ಹೇಳಿದ್ದಾರೆ.
ತಾಲೂಕು ವಲಯ ಅರಣ್ಯಾಧಿಕಾರಿ ಮಹಾಲಕ್ಷ್ಮೀ ಈ ಬಗ್ಗೆ ಪ್ರತಿಕ್ರಿಯಿಸಿ, ಕೋತಿಗಳ ಹಾವಳಿಯನ್ನು ತಡೆಗಟ್ಟುವುದು ಸ್ಥಳೀಯ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಜಿಲ್ಲಾ ಅರಣ್ಯಾಧಿಕಾರಿ ಗಮನಕ್ಕೆ ತಂದು ಕೋತಿಗಳ ಸೆರೆಗೆ ಅನುಮತಿ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಕೆ.ಸಂತೋಷಕುಮಾರ್ ಪ್ರತಿಕ್ರಿಯೆ ನೀಡಿ, ವನ್ಯಜೀವಿಗಳನ್ನು ನಾವು ಹಿಡಿಯಲು ಬರುವುದಿಲ್ಲ. ಅರಣ್ಯ ಇಲಾಖೆಯವರ ಗಮನಕ್ಕೆ ತಂದು ಕೋತಿಗಳ ಸೆರೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.