ಗೊಲ್ಲರಿಗೆ ಸಿಗಲಿದೆ ಸಾಮಾಜಿಕ ನ್ಯಾಯ

MLK Jayanthi- sep- 23 (2)
Published on

ಮೊಳಕಾಲ್ಮೂರು: ಗೊಲ್ಲ ಸಮುದಾಯದ ಬಹು ವರ್ಷದ ಬೇಡಿಕೆ ಪ್ರತ್ಯೇಕ ನಿಗಮ ಮಂಡಳಿ, ಎಸ್‌ಟಿ ಮೀಸಲು ಸೌಲಭ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಆಗಲಿದೆ ಎಂಬ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ಹೇಳಿದರು.

ತಾಲೂಕು ಯಾದವ ಸಂಘ ತಾಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸತ್ಯವನ್ನು ಪ್ರತಿಪಾದಿಸುತ್ತ, ಸಾಮಾಜಿಕ ನ್ಯಾಯ ಬದ್ಥತೆ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರ ಶೋಷಿತ ವರ್ಗದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಮುದಾಯದ ಬೇಡಿಕೆ ಕುರಿತು ಸಿದ್ದರಾಮಯ್ಯ ಸಾಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ರಾಜಕೀಯ ಪ್ರಾತಿನಿಧ್ಯ, ನಗರ, ಪಟ್ಟಣ, ಹಟ್ಟಿಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನ ಕೋರಲಾಗಿದೆ. ಐದು ವರ್ಷದಲ್ಲಿ ಎಲ್ಲ ಬೇಡಿಕೆಗಳು ಈಡೇರಲಿವೆ ಎಂದ ಅವರು, ಅತ್ಯಂತ ಹಿಂದುಳಿದ ಕ್ಷೇತ್ರದ ಗೊಲ್ಲರ ಹಟ್ಟಿಗಳಲ್ಲಿ ಶಿಕ್ಷಣ, ಆರೋಗ್ಯ ಸುಧಾರಣೆಗೆ ಶಾಸಕರ ಅನುದಾದಡಿ ಪ್ರತಿ ವರ್ಷ 10 ಲಕ್ಷ ರೂ. ಕೊಡಲಾಗುವುದು ಎಂದು ಭರವಸೆ ನೀಡಿದರು.

ಪ್ರಾಚೀನ ಕಾಲದಿಂದಲೂ ಯಾದವ ವಂಶಸ್ಥರು ದೊಡ್ಡ ಪರಂಪರೆಯನ್ನೇ ಹೊಂದಿದ್ದಾರೆ. ಮನುಷ್ಯತ್ವದಡಿ ಸ್ವಾಭಿಮಾನ ಬದುಕನ್ನು ಕಟ್ಟಿಕೊಂಡು, ಮತ್ತೊಬ್ಬರ ಹಿತ ಬಯಸುವ ಸಮುದಾಯವಾಗಿದೆ. ಗೊಲ್ಲರ ಆರಾಧ್ಯ ದೈವ ಶ್ರೀಕೃಷ್ಣ ಅಧರ್ಮವನ್ನ ಅಳಿಸಿ ಧರ್ಮವನ್ನು ಜಗತ್ತಿಗೆ ಸಾರಿದ ಪರಮಾತ್ಮ ಆಗಿದ್ದು, ಆತನ ಅನುಕರುಣೆಯಲ್ಲಿ ನಾವೆಲ್ಲರೂ ಸಾಗಿದರೆ ನೆಮ್ಮದಿ ದೊರೆಯಲಿದೆ ಎಂದರು.

ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಚುನಾವಣೆ ಸಂದರ್ಭ ಗೆಲುವಿಗಾಗಿ ರಾಜಕಾರಣ ಮಾಡುವೆ. ಆದರೆ, ಬಳಿಕ ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಎಂದು ಹೇಳಿದರು.

ನೀವು ಸೇರಿ ಎಲ್ಲ ವರ್ಗದ ಜನರು ಕೂಡ ರಾಜಕಾರಣವನ್ನು ಚುನಾವಣೆ ಬಳಿಕ ಮರೆತು ಸಮುದಾಯ, ಊರಿನ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸಬೇಕು. ಶಾಲೆ, ಆಸ್ಪತ್ರೆ ಸೇರಿ ವಿವಿಧ ಜನೋಪಯೋಗಿ ಕಾರ್ಯಗಳಿಗೆ ಅನುದಾನ ಕೇಳಬೇಕು ಎಂದು ತಿಳಿಸಿದರು.
ಗೊಲ್ಲ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಮಂಡಿಸಲು ಮೊಳಕಾಲ್ಮೂರಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಸಮಾವೇಶ ಆಯೋಜಿಸುವ ಚಿಂತನೆ ಇದೆ ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಭೆ ಆರಂಭಕ್ಕೂ ಮುನ್ನ ನುಂಕಪ್ಪನ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಶ್ರೀಕೃಷ್ಣ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಹೊರಟ ಶ್ರೀಕೃಷ್ಣ ಬಾವ ಚಿತ್ರದ ರಥ ಪ್ರಮುಖ ರಸ್ತೆಯಲ್ಲಿ ಸಾಗಿತು.

ಯಾದವ ಸಮಾಜದ ತಾಲೂಕಾಧ್ಯಕ್ಷ ಗುಂಡ್ಲೂರು ಕರಿಯಣ್ಣ, ಉಪಾಧ್ಯಕ್ಷ ಬಿ.ಕೃಷ್ಣಪ್ಪ, ಕಾರ್ಯದರ್ಶಿ ಎಚ್.ಆರ್.ವೆಂಕಟೇಶ್, ಬಳ್ಳಾರಿ ಯಾದವ ಸಂಘದ ಜಿಲ್ಲಾಧ್ಯಕ್ಷ ಗಾದೆಪ್ಪ, ಡಿವೈಎಸ್‌ಪಿ ರಾಜಣ್ಣ, ಡಿ.ಆರ್.ಜಯರಾಮ್, ಉದ್ಯಮಿ ಶ್ರೀನಿವಾಸ್, ಎಚ್.ಟಿ. ಚಂದ್ರಣ್ಣ, ಜಿ.ಬಿ.ಶಿವಮೂರ್ತಿ, ಚಿತ್ತಮ್ಮ ಶಿವಲಿಂಗ, ಭಾಗ್ಯಮ್ಮ ಭೀಮಣ್ಣ, ಪಿ.ಲಕ್ಷ್ಮಣ, ಬಸವರಡ್ಡಿ, ದೊಡ್ಡ ರಾಮಣ್ಣ, ಗೋವಿಂದಪ್ಪ, ಸುಬಾನ್‌ಸಾಬ್, ಮಾರನಾಯಕ, ಎಸ್.ಖಾದರ್, ಅಬ್ದುಲ್ಲಾ, ಟಿ.ತಿಮ್ಮಣ್ಣ, ಮುದಿಯಪ್ಪ, ಜಿ.ಎಲ್.ತಿಪ್ಪೇಸ್ವಾಮಿ, ಮೂರ್ತಿ ಇದ್ದರು.

ಹಿರಿತನಕ್ಕೆ ಸಿಗಲಿದೆ ಸಚಿವ ಸ್ಥಾನ: ಅಪಾರ ಕಾನೂನು ಜ್ಞಾನ ಹೊಂದಿರುವ ಕುಟುಂಬದ ಕುಡಿ, 30 ವರ್ಷಗಳಿಂದ ಕ್ಷೇತ್ರದ ಜನರ ಪರವಾಗಿ ಕಾರ್ಯನಿರ್ವಹಿಸುತ್ತಿರವು ಸಜ್ಜನಿಕೆ, ಹಿರಿತನ, ಪಕ್ಷ ವಹಿಸುವ ಜವಾಬ್ದಾರಿ ನಿರ್ವಹಿಸುವ ಎನ್.ವೈ.ಗೋಪಾಲಕೃಷ್ಣ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಗಲಿದೆ ಎಂಬ ನಂಬಿಕೆ ಇದೆ ಎಂದು ನಾಗರಾಜ್ ಯಾದವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net