

ಮೈಸೂರು: ಯಾವುದೇ ಒಂದು ಸಾಹಿತ್ಯ ಕೃತಿಯನ್ನು ಒಂದು ಬಾರಿ ಓದಿ ಅರ್ಥವಾಗದೆ ಹೋದರೆ ಮತ್ತೆ ಓದುತ್ತೇವೆ. ಆದರೆ, ಸಿನಿಮಾ ಮಾತ್ರ ಒಂದೇ ಸಲಕ್ಕೆ ಅರ್ಥವಾಗಬೇಕು ಎಂದು ಜನರು ಬಯಸುತ್ತಾರೆ ಎಂದು ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬೇಸರ ವ್ಯಕ್ತಪಡಿಸಿದರು.
ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೈಸೂರು ಸಾಹಿತ್ಯ ಸಂಭ್ರಮದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಸಿನಿಮಾದ ಮೂಲಕ ಗಹನವಾದ ವಿಷಯ ಹೇಳಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದೆ. ಈ ಕಾರಣಕ್ಕೆ ಸಿನಿಮಾ ಒಂದೇ ಬಾರಿಗೆ ಅರ್ಥವಾಗಬೇಕು ಎಂಬ ಅಭಿಪ್ರಾಯ ರೂಪಿತವಾಗಿದೆ. ಆದರೆ, ಒಂದೇ ಬಾರಿಗೆ ಸಿನಿಮಾ ಅರ್ಥವಾಗಬೇಕು ಎಂಬ ಗ್ರಹಿಕೆಯೇ ತಪ್ಪು. ಸಿನಿಮಾದಲ್ಲೂ ಸಹ ಸಾಹಿತ್ಯದಷ್ಟೇ ಗಹನವಾದ ವಿಷಯವನ್ನು ಹೇಳಬಹುದು. ಸಿನಿಮಾದಲ್ಲಿ ತಕ್ಷಣಕ್ಕೆ ಧಕ್ಕಬಹುದಾದ ಅರ್ಥ ಸಿಗದೆ ಹೋದರೆ ನಾವು ಮತ್ತೊಮ್ಮೆ ಸಿನಿಮಾ ನೋಡಬೇಕಾಗುತ್ತದೆ ಎಂದರು.
ಒಂದು ನಿಮಿಷಕ್ಕೆ ಪಂಚ್‌ಲೈನ್, 10 ನಿಮಿಷಕ್ಕೊಂದು ಟ್ವಿಸ್ಟ್ ಬರಬೇಕು ಎಂಬುದು ‘ಮಾರ್ಕೇಟ್ ಎಕಾನಮಿ’ ಸಿನಿಮಾದ ಮೇಲೆ ಹೇರುತ್ತಿರುವ ನಿಬಂಧನೆಯಾಗಿದೆ. ಆದರೆ, ಒಂದು ಸಿನಿಮಾ ಹೀಗೇ ಇರಬೇಕು ಅಥವಾ ಇಷ್ಟೇ ಸಮಯದ ಮಿತಿಯೊಳಗೆ ಇರಬೇಕು ಎಂದು ಹೇಳುವುದು ಸರಿಯಲ್ಲ. ರಾಷ್ಟ್ರಕವಿ ಕುವೆಂಪು ಅವರು ‘ಮಲೆಗಳಲ್ಲಿ ಮದುಮಗಳು’ ಅಂತಹ ದೊಡ್ಡ ಕಾದಂಬರಿ ಬರೆದರು. ಬರೆಯಲು ಅಷ್ಟೊಂದು ವಿಷಯ ಇದ್ದ ಹಿನ್ನೆಲೆಯಲ್ಲಿ ಬೃಹತ್ ಕಾದಂಬರಿ ಬರೆದರು. ಸಿನಿಮಾ ಸಹ ಹಾಗೆಯೇ ಎಂದರು.
ಸಿನಿಮಾದಲ್ಲಿ ಕೇವಲ ಕತೆ ಮಾತ್ರ ಮುಖ್ಯವಲ್ಲ ಸಿನಿಮಾದ ಪ್ರತಿಯೊಂದು ಅಂಶವೂ ಮುಖ್ಯ. ಸಿನಿಮಾದ ವಿನ್ಯಾಸ ಬಹಳ ಮುಖ್ಯ. ಯಾವ ವಿನ್ಯಾಸದಲ್ಲಿ ಸಿನಿಮಾ ಮಾಡಲಾಗಿದೆ ಎಂಬುದನ್ನು ನೋಡಬೇಕು. ಸಾಹಿತ್ಯ ಕೃತಿಯಲ್ಲಿ ಮರವನ್ನು ಮರ ಅನ್ನಬೇಕು. ಆದರೆ ಸಿನಿಮಾದಲ್ಲಿ ಮರ ಅನ್ನುವ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ಸಿಮಾದಲ್ಲಿ ದೃಶ್ಯಗಳು ಕಣ್ಣ ಮುಂದೆ ಇರುತ್ತದೆ. ಹಾಗಾಗಿ ಸಿನಿಮಾ ಕತೆಗಿಂತ ಭಿನ್ನ ವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.