

ನವದೆಹಲಿ: ಸಮಾಜದ ನಡತೆ ಹಾಳಾಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಜನರು ಸತ್ಯದ ಪರವಾಗಿ ನಿಲ್ಲಲು ಸಿದ್ಧರಿಲ್ಲ ಎಂದು ಸುಪ್ರೀಂ ಕೋರ್ಟ್ ವಿಷಾದ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷದ ಕಾರ್ಪೆರೇಟರ್ ಒಬ್ಬರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರಶಾಂತ್ ಭಾಸ್ಕರ್ ಮಹಾತ್ರೆಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಇದ್ದ ಪೀಠ ಈ ಕಳವಳ ವ್ಯಕ್ತಪಡಿಸಿದೆ.
2017ರಲ್ಲಿ ನಡೆದ ಭಿವಂಡಿ ಕಾರ್ಪೆರೇಟರ್ ಕೊಲೆ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ದೊಡ್ಡ ಸಂಖ್ಯೆಯ ಮೌಖಿಕ ಸಾಕ್ಷಿಗಳನ್ನು ಅವಲಂಬಿಸಿರುವುದೇಕೆ ಎಂದು ಪೀಠ ಪ್ರಶ್ನಿಸಿದೆ. ಪ್ರಕರಣದ ಆರೋಪಿಗೆ ಶಿಕ್ಷೆ ವಿಧಿಸುವಂತಾಗಲು ಸರ್ಕಾರ ಪರಿಶೀಲಿಸಲು ಯೋಜಿಸಿ ರುವ ನಿರ್ಣಾಯಕ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸುವಂತೆ ರಾಜ್ಯದ ವಕೀಲರಿಗೆ ಕೋರ್ಟ್ ನಿರ್ದೇಶಿಸಿದೆ. ಸಾಕ್ಷಿಗಳಿಗೆ ಗ್ಯಾಂಗ್ಸ್ಟರ್ಗಳು ಬೆದರಿಕೆ ಹಾಕುತ್ತಾರೆನ್ನುವುದೇನೋ ನಿಜ. ಸಾಕ್ಷಿಗಳಿಗೆ ರಕ್ಷಣೆ ಒದಗಿಸುವ ಕಾರ್ಯಕ್ರಮ ನಮ್ಮ ದೇಶದಲ್ಲಿ ಇಲ್ಲದಿರುವುದರಿಂದ ಈ ಸಾಕ್ಷಿಗಳು ಮುಂದೆ ದುರದೃಷ್ಟವಶಾತ್ ಪ್ರತಿಕೂಲ (ಮಾಫಿ) ಸಾಕ್ಷಿಗಳಾಗಿ ಬದಲಾಗುತ್ತಾರೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಆರೋಪಪಟ್ಟಿಯಲ್ಲಿ ನಮೂದಿಸಿರುವ 200 ಜನರ ಪೈಕಿ 75 ಮಂದಿಯ ಸಾಕ್ಷ್ಯವನ್ನು ಪರಿಶೀಲಿಸಬೇಕಿದೆ ಎಂದು ರಾಜ್ಯ ಸರ್ಕಾರದ ವಕೀಲರು ಹೇಳಿದಾಗ, ‘ಜನರು ಸತ್ಯದ ಪರವಾಗಿ ನಿಲ್ಲಲು ಸಿದ್ಧರಿಲ್ಲ’ ಎಂದು ಪೀಠ ಟಿಪ್ಪಣಿ ಮಾಡಿತು. ಮಹತ್ವದ ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ ನಂತರ ತ್ವರಿತ ವಿಚಾರಣೆಗೆ ಕಾಲ ಮಿತಿ ನಿಗದಿಪಡಿಸುವುದಾಗಿ ನ್ಯಾಯಮೂರ್ತಿಗಳು ಹೇಳಿದರು.