ಬಸ್​ಗಾಗಿ ಕಾದು ಬಸವಳಿದ ಜನ

klr ksrtc strik
ಕೋಲಾರ ಸಾರಿಗೆ ಬಸ್​ನ ಗಾಜು ಜಖಂ ಆಗಿರುವುದು.
Published on

ಕೋಲಾರ: ವೇತನ ಪರಿಷ್ಕರಣೆ, ಹಿಂಬಾಕಿ ಬಿಡುಗಡೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕೆಎಸ್​ಆರ್​ಟಿಸಿ ನೌಕಕರರು ಮಂಗಳವಾರ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರಯಾಣಿಕರು ಪರದಾಡಿದರು. ಬಸ್​ ನಿಲ್ದಾಣಗಳು ಬಸ್​ಗಳಿಲ್ಲದೆ ಬೀಕೊ ಎನ್ನುತ್ತಿದ್ದವು.

ಜಿಲ್ಲೆಯ ಎಲ್ಲ ತಾಲೂಕುಗಳಿಂದ 500ಕ್ಕೂ ಹೆಚ್ಚು ಮಾರ್ಗಗಳಲ್ಲಿ ಬಸ್​ ಸಂಚಾರ ಸ್ಥಗಿತಗೊಂಡಿತ್ತು. ಕೆಲಸ, ಶಾಲಾ&ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳಲು ಖಾಸಗಿ ಬಸ್​, ಆಟೋಗಳ ಮೊರೆ ಹೋಗಬೇಕಾಯಿತು.

ಪ್ರಯಾಣಿಕರಿಗೆ ತೊಂದರೆಯಾಗಂತೆ ಜಿಲ್ಲಾಡಳಿತದಿಂದ ಖಾಸಗಿ ಬಸ್​ಗಳ ವ್ಯವಸ್ಥೆ ಮಾಡಲಾಗಿತ್ತು. ಅವು ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ, ಕೆಜಿಎ್​ಗೆ ಸಂಚರಿಸಿದವು. ಆದರೆ ಹಳ್ಳಿಗಳಿಗೆ ತೆರಳಬೇಕಿದ್ದವರು ಪರದಾಡುವಂತಾಯಿತು.

ಬಸ್​ಗಳು ಡಿಪೋದಿಂದ ರಸ್ತೆಗೆ ಇಳಿಯಲಿಲ್ಲ. ಸಂಚಾರಕ್ಕೆ ಮುಂದಾದರೆ ಅಹಿತಕರ ಟನೆಗಳು ಸಂಭವಿಸದಂತೆ ಪೊಲೀಸ್​ ಇಲಾಖೆಯಿಂದ ಬಸ್​ ನಿಲ್ದಾಣ, ಡಿಪೋಗಳಿಗೆ ಬಿಗಿ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಕೇಂದ್ರದಿಂದ ಕೆಲಸಕ್ಕೆಂದು ಬೆಂಗಳೂರು ಸೇರಿ ವಿವಿಧೆಡೆ ತೆರಳಬೇಕಿದ್ದವರು ಸ್ವಂತ ವಾಹನಗಳಲ್ಲಿ ತೆರಳಿದರು. ಕೆಲವರು ಖಾಸಗಿ ಬಸ್​, ಟಿಟಿ ವಾಹನ, ಬಾಡಿಗೆ ಕಾರು, ಆಟೋಗಳಲ್ಲಿ ಸಂಚರಿಸಿದರು.

ಬಸ್​ ನಿಲ್ದಾಣದೊಳಗೆ ಬರುತ್ತಿದ್ದ ಖಾಸಗಿ ಬಸ್​ಗಳನ್ನು ತಡೆಯಲು ಕೆಲ ಸಾರಿಗೆ ನೌಕರರು ಯತ್ನಿಸಿದರು. ಪೊಲೀಸರು ಮಧ್ಯ ಪ್ರವೇಶ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟರು.

ಸಂಜೆ ವೇಳೆಗೆ ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿ ತಾಲೂಕು ಕೇಂದ್ರಗಳಿಗೆ ಬಸ್​ ಸಂಚಾರ ವಿರಳವಾಗಿ ಬಿಡಲಾಯಿತು.

* ಕಿಡಿಗೇಡಿಗಳಿಂದ ಕಲ್ಲು ತೂರಾಟ

ಮುಷ್ಕರದ ವೇಳೆ ಕಿಡಿಗೇಡಿಗಳು ಸಾರಿಗೆ ಬಸ್​ನ ಮೇಲೆ ಕಲ್ಲು ತೂರಿದ್ದು, ಕಿಟಕಿಯ ಗಾಜು ಪುಡಿಪುಡಿಯಾಗಿದೆ. ಮುಷ್ಕರದ ನಡುವೆಯು ಸಾರಿಗೆ ಅಧಿಕಾರಿಗಳು ಒಂದೆರಡು ಬಸ್​ಗಳನ್ನು ನಿಲ್ದಾಣಕ್ಕೆ ಕಳುಹಿಸಿದ್ದಾರೆ. ಈ ವೇಳೆ ಬಸ್​ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ರವಿಶಂಕರ್​, ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್​ ಭೇಟಿ ನೀಡಿ ಪರಿಶೀಲಿಸಿದರು.

* ಸಿಸಿ ಟಿವಿ ಪರಿಶೀಲಿಸಿ ಕ್ರಮ

ನಿಲ್ದಾಣದಲ್ಲಿ ಬಸ್​ ನಿಂತಿದ್ದ ಸಂದರ್ಭದಲ್ಲಿ ಗಾಜು ಒಡೆದಿದೆ. ಈ ಬಗ್ಗೆ ಸಿಬ್ಬಂದಿಯನ್ನು ಕೇಳಿದಾಗ ಬಿಸಿಲಿಗೆ ಒಡೆದಿದೆ ಅಂತ ಹೇಳುತ್ತಿದ್ದಾರೆ. ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ಸಿಬ್ಬಂದಿಯಿಂದ ದೂರು ನೀಡಲು ಸೂಚಿಸಲಾಗಿದೆ ಎಂದು ಪ್ರಾದೇಶಿಕ ನಿಯಂತ್ರಾಧಿಕಾರಿ ಶ್ರೀನಾಥ್​ ಹೇಳಿದರು.

ಬಸ್​ಗೆ ಹೊರಗಡೆಯಿಂದ ತೂರಲು ಅವಕಾಶವಿಲ್ಲ, ಮುಷ್ಕರದ ನಡುವೆಯೂ 17 ಬಸ್​ಗಳನ್ನು ಬಿಡಲಾಗಿದೆ. ಕೆಲ ಚಾಲಕರು ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಹಾಜರಾಗಿದ್ದರು ಎಂದು ತಿಳಿಸಿದರು.

* ರೈಲ್ವೆ ನಿಲ್ದಾಣಗಳಲ್ಲಿ ಜನ ಜಂಗುಳಿ

ಬೆಂಗಳೂರಿಗೆ ತೆರಳಬೇಕಿದ್ದ ಪ್ರಯಾಣಿಕರು ಕೋಲಾರದಿಂದ ಚಿಂತಾಮಣಿ, ಚಿಕ್ಕಬಳ್ಳಾಪುರ ಮಾರ್ಗವಾಗಿ ತೆರಳುವ ರೈಲಿನಲ್ಲಿ ಪ್ರಯಾಣಿಸಿದ್ದರಿಂದ ರೈಲಿನಲ್ಲೂ ಹೆಚ್ಚಿನ ಜನರು ತುಂಬಿದ್ದರು. ಬಸ್​ಗಳ ಸಂಚಾರ ಸ್ಥಗಿತವಾಗಿದ್ದರಿಂದ ಬೆಳ್ಳಂಬೆಳಗ್ಗೆ ಕೋಲಾರ, ಕೆಜಿಎ್​, ಶ್ರೀನಿವಾಸಪುರ, ಬಂಗಾರಪೇಟೆ, ಮಾಲೂರು, ಟೇಕಲ್​ ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

* ಮುಸುಕುಧಾರಿಗಳಿಂದ ಕೃತ್ಯ

ಬೇತಮಂಗಲದಿಂದ ಕೋಲಾರಕ್ಕೆ ಬರುತ್ತಿದ್ದ ಸರ್ಕಾರಿ ಬಸ್​ ಮೇಲೆ ತಾಲೂಕಿನ ಹರಟಿ ಗೇಟ್​ ಬಳಿ ಕಲ್ಲು ತೂರಾಟ ನಡೆದಿದೆ. ಕೋಲಾರಕ್ಕೆ ವಾಪಸ್​ ಬರುತ್ತಿದ್ದ ಬಸ್​ ಮೇಲೆ ನಂಬರ್​ ಪ್ಲೇಟ್​ ಇಲ್ಲದ ಬೈಕ್​ನಲ್ಲಿ ಬಂದ ಮೂವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದವರಿಗೆ ಬಸ್​ ಮಾರ್ಗಗಳನ್ನು ನೀಡಿ ಕಳುಹಿಸಿಕೊಡಲಾಗಿತ್ತು. ಇದನ್ನು ತಿಳಿದ ಕೆಲವರು ಬಸ್​ಗಳಿಗೆ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿ ಬಂದಿದೆ.

* ಪ್ರಯಾಣಿಕರ ಆಕ್ರೋಶ

ಸಾರಿಗೆ ಸಿಬ್ಬಂದಿ ಏಕಾಏಕಿ ಮುಷ್ಕರ ನಡೆಸಿದ್ದರಿಂದ ಬಸ್​ಗಳ ಸಂಚಾರ ಸ್ಥಗಿತಗೊಂಡಿತ್ತು. ನಗರದಿಂದ ಹೂರುಗಳಿಗೆ, ವಿವಿಧ ಕೆಲಸಗಳಿಗೆ ತೆರಳು ಸಾರಿಗೆ ವ್ಯವಸ್ಥೆಯಿರಲಿಲ್ಲ. ಇದರಿಂದಾಗಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ತುರ್ತು ಕಾರ್ಯದ ಮೇಲೆ ಬೆಂಗಳೂರಿಗೆ ಹೋಗಬೇಕಿತ್ತು, ನಿಲ್ದಾಣಕ್ಕೆ ಬಂದರೆ ಬಸ್​ಗಳೆ ಬಂದಿಲ್ಲ. ಏನು ಮಾಡಬೇಕು ಎಂದು ತಲೆ ದೋಚುತ್ತಿಲ್ಲ ಎಂದು ಪ್ರಯಾಣಿಕರು ನೋವು ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net