ಹಾಸನ, ಹೊಸಪೇಟೆಯಲ್ಲಿ ಆಹಾರ ಕಿಟ್​ಗಾಗಿ ಮುಗಿಬಿದ್ದ ಜನರು, ವಿತರಣೆ ರದ್ದುಗೊಳಿಸಿದ ಸಚಿವ ಆನಂದ ಸಿಂಗ್​

Food kit- Ballary
Published on

ಬಳ್ಳಾರಿ/ ಹಾಸನ: ಕರೊನಾ ದಿಗ್ಬಂಧನ ಅಂತ್ಯವಾಗಿಲ್ಲ. ಆದರೆ, ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂಬುದನ್ನು ಜನ ಪಾಲಿಸುತ್ತಿಲ್ಲ. ಅದರಲ್ಲೂ ದಿನಸಿ, ಹಾಲು, ತರಕಾರಿಗಳಿಗಾಗಿ ಹೊರಬರುವುದು ಅನಿವಾರ್ಯವಾಗಿದೆ.

ಈ ನಡುವೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಬಡವರು, ವಲಸೆ ಕಾರ್ಮಿಕರು ಮತ್ತು ಸ್ಥಳೀಯರಿಗಾಗಿ ಆಹಾರ ಮತ್ತು ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಇದಕ್ಕಾಗಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ.

ಅರಣ್ಯ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ "ಆಹಾರಾನಂದ" ಹೆಸರಿನಲ್ಲಿ ಆಹಾರ ಕಿಟ್ ವಿತರಣೆಗಾಗಿ ಶನಿವಾರ ಹೊಸಪೇಟೆಯಲ್ಲಿ ಟೋಕನ್ ನೀಡಲು ಮುಂದಾಗಿದ್ದರು. ಇದನ್ನು ಪಡೆಯಲು ಕ್ಷೇತ್ರದ ಜನರು ಸಾವಿರಾರು ಜನರು ಸೇರಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಸಾಲುಗಟ್ಟಿದ್ದರು. ಹೀಗಾಗಿ ಉಚಿತ ಆಹಾರ ವಿತರಣೆಯೇ ಸಾಂಕ್ರಾಮಿಕ ಸೋಂಕು ಹರಡಲು ಕಾರಣವಾಗುತ್ತಾ ಎಂಬ ಆತಂಕವೂ ಎದುರಾಗಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ, ಆಹಾರ ವಿತರಣೆ ಕಾರ್ಯಕ್ರಮವನ್ನು ಸಚಿವ ಆನಂದ್​ ಸಿಂಗ್​ ರದ್ದುಗೊಳಿಸಿದರು.

ಇನ್ನು, ಹಾಸನದಲ್ಲೂ ಜನರು ಆಹಾರ ಕಿಟ್​ಗಳಿಗಾಗಿ ಮುಗಿ ಬಿದ್ದಿದ್ದರು.

ನಗರದ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಲು ಜೆಡಿಎಸ್​ ಮುಖಂಡ ಅಗಿಲೆ ಯೋಗೀಶ್ ನಿರ್ಧರಿಸಿದ್ದರು. ಆದರೆ, ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಆಯೋಜಕರು ಮುಜುಗುರ ಅನುಭವಿಸಬೇಕಾಯಿತು.

ಪರಸ್ಪರ ದೂರದಲ್ಲಿ ನಿಲ್ಲುವಂತೆ ಎಷ್ಟೇ ಹೇಳಿದರೂ ಜನರು ಕೇಳಲಿಲ್ಲ. ಹೀಗಾಗಿ ಕೆಲ ಕಾಲ ಆಹಾರ ಕಿಟ್ ವಿತರಣೆ ಸ್ಥಗಿತಗೊಳಿಸಲಾಯಿತು. ನಗರಸಭೆ ಜೆಡಿಎಸ್ ಸದಸ್ಯರೂ ಜನರ ನಿಯಂತ್ರಿಸಲು ಹರಸಾಹಸಪಟ್ಟರು. ಒಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಜನರು ಅರಿಯದಿರುವುದು ವಿಪರ್ಯಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net