

ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಂಧಿತರಾದ ಕಾಶ್ಮೀರಿ ವಿದ್ಯಾರ್ಥಿಗಳ ವರ್ತನೆಯನ್ನು ದೇಶದ್ರೋಹ ಎಂದು ಪರಿಗಣಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿದ್ಯಾರ್ಥಿಗಳ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದ್ರ ಅವರಿದ್ದ ಪೀಠ, ಪ್ರಕರಣದಲ್ಲಿ ಸಲ್ಲಿಕೆಯಾಗಿರುವ ವಿವರಗಳನ್ನು ಗಮಿನಿಸಿದರೆ, ಅವರ ವಿರುದ್ಧ ದೇಶದ ಸಮಗ್ರತೆಗೆ ಧಕ್ಕೆ ಉಂಟಾಗುವ ಕೃತ್ಯ ಎಸಗಿರುವುದಕ್ಕೆ ದಾಖಲೆಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಕಾಶ್ಮೀರಿ ಪ್ರಜೆಗಳು ಈ ದೇಶದ ಮುಖ್ಯವಾಹಿನಿಗೆ ಬರಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಸರ್ಕಾರಿ ವಕೀಲರು ಈ ಪ್ರಕರಣದ ವಿಶಾಲ ಸ್ವರೂಪವನ್ನು ಗ್ರಹಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿತು.
ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ನೀಡುವ ಸ್ಕಾಲರ್ಶಿಪ್ ಪಡೆದು ವಿದ್ಯಾಭ್ಯಾಸಕ್ಕೆ ಬಂದಿದ್ದಾರೆ ಎಂಬುದು ಸತ್ಯ. ಆದರೆ, ಅಧೀನ ನ್ಯಾಯಾಲಯ ಈ ಅಂಶವನ್ನು ಪರಿಗಣಿಸದಿರುವುದು ಅಚ್ಚರಿ ಮೂಡಿಸಿದೆ ಎಂದು ಪೀಠ ತಿಳಿಸಿತು.
ಈ ಪ್ರಕರಣದಲ್ಲಿ ದೂರುದಾರರಾಗಿರುವ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೇ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನೀಡಬಹುದಾಗಿತ್ತು. ಅವರು ಅಲ್ಲಿಗೆ ಬಂದಿರುವ ಉದ್ದೇಶವನ್ನು ಮನವರಿಕೆ ಮಾಡಿ ಕೊಡಬಹುದಿತ್ತು. ಆರೋಪಿಗಳು, ಹದಿಹರೆಯದವರೋ ಅಥವಾ ಹದಿಹರೆಯದಿಂದ ಈಗಷ್ಟೇ ಹೊರಗೆ ಬಂದಿದ್ದಾರೋ ಎನ್ನುವುದಕ್ಕಿಂತ ಅವರು ಕೇಂದ್ರ ಸರ್ಕಾರದಿಂದ ಪ್ರಾಯೋಜಿತ ಸ್ಕಾಲರ್ಶಿಪ್ ಪಡೆದು ವ್ಯಾಸಂಗಕ್ಕೆ ಬಂದಿದ್ದಾರೆ. ಆದರೆ, ಅವರು ಮಾಡಿರುವ ಕೃತ್ಯ ಕೇಂದ್ರ ಸರ್ಕಾರದ ಉದಾತ್ತ ಆಶಯವನ್ನು ಮರೆಮಾಚುವುದಿಲ್ಲ. ಆದರೆ, ಈ ದೂರಾಲೋಚನೆಗಳು ಸಂಕುಚಿತ ದೃಷ್ಟಿಕೋನದಿಂದಾಗಿ ಮುಚ್ಚಿಹೋಗಿವೆ ಎಂದು ಅಭಿಪ್ರಾಯಪಟ್ಟಿತು. ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿತು.
ಘಟನೆ ಹಿನ್ನೆಲೆ: ಕಾಶ್ಮೀರಿ ಯುವಕರಾದ ಬಸಿತ್ ಆಶಿಕ್ ಸೋಫಿ, ತಲಿಬ್ ಮಜೀದ್, ಅಮೀರ್ ಮೋಹಿ ಉದ್ದಿನ್ ವಾನಿ ಹುಬ್ಬಳ್ಳಿಯ ಇಂಜಿಯನಿರಿಂಗ್ ಕಾಲೇಜಿನ ವಿದ್ಯಾರ್ಥಿಗಳು. ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪದಲ್ಲಿ ಅವರನ್ನು ಬಂಧಿಸಲಾಗಿದ್ದು, ಫೆಬ್ರವರಿ 17ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.