

| ಹರೀಶ್ ಬೇಲೂರು ಬೆಂಗಳೂರು
ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ಜನರಿಗೆ ಅನುಕೂಲವಾಗುವಂತೆ ಬಳಕೆ ಸಾಧ್ಯವಾಗದಿದ್ದಲ್ಲಿ ಅದರಿಂದ ಪ್ರಯೋಜನ ಶೂನ್ಯ. ಸರ್ಕಾರ ಸಾರ್ವಜನಿಕರ ಸೇವೆಗೆ ಹಲವು ಯೋಜನೆ ಜಾರಿಗೊಳಿಸಿದ್ದರೂ, ತಾಂತ್ರಿಕ ಅಡಚಣೆಗಳಿಂದಾಗಿ ಸಾಮಾನ್ಯರ ಸಂಕಷ್ಟ ತಪು್ಪತ್ತಿಲ್ಲ. ಹೌದು, ಸರ್ವರ್ ಸಮಸ್ಯೆ ಎನ್ನುವುದು ಅತ್ಯಮೂಲ್ಯ ಸೇವೆಗಳನ್ನು ಒದಗಿಸುವ ಪ್ರಮುಖ ಇಲಾಖೆಗಳಲ್ಲೇ ದಿನಂಪ್ರತಿ ಕಾಡುತ್ತಿದೆ. ಹೀಗಾಗಿ ಆಸ್ತಿ ನೋಂದಣಿ, ಡಿಎಲ್/ಎಲ್ಎಲ್ ಹಾಗೂ ಪಡಿತರ ಪಡೆಯಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಜೀವ ಉಳಿಸುವ ಆಂಬುಲೆನ್ಸ್ ಸೇವೆ ಕೂಡ ಇದರಿಂದ ಹೊರತಾಗಿಲ್ಲ ಎಂಬುದು ವಿಪರ್ಯಾಸ.
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ‘ಕಾವೇರಿ’ ವೆಬ್ಸೈಟ್ಗೆ, ಆಹಾರ ಇಲಾಖೆಯಲ್ಲಿ ಪಡಿತರ ವಿತರಣೆಯ ಅನ್ನಭಾಗ್ಯ ಯೋಜನೆ, ನಗರಾಭಿವೃದ್ಧಿ ಇಲಾಖೆಯಲ್ಲಿ ಕಟ್ಟಡ ನವೀಕರಣದ ನಿರ್ವಣ-2 ಸಾಫ್ಟ್ವೇರ್ಗೆ, ಆರ್ಟಿಒ ಕಚೇರಿಯಲ್ಲಿ ವಾಹನ ಪರವಾನಗಿ ನೀಡಲು ವಾಹನ್ ಹಾಗೂ ಸಾರಥಿ-4ಗೆ ‘ಸರ್ವರ್ ಡೌನ್’ ಸಮಸ್ಯೆ ವಕ್ಕರಿಸುತ್ತಲೇ ಇದೆ. ಅದರಲ್ಲೂ ಆರೋಗ್ಯ ಇಲಾಖೆಯ ‘ಆರೋಗ್ಯ ಕವಚ-108ಕ್ಕೆ ಎದುರಾದ ತಾಂತ್ರಿಕ ಸಮಸ್ಯೆ’ ಆತಂಕಕಾರಿ. ಹೀಗಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಉದಾಸೀನ ತೋರುತ್ತಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.
ಹಳೆಯ ಸಾಫ್ಟ್ವೇರ್: ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ 2003ರಲ್ಲಿ ಅಭಿವೃದ್ಧಿಪಡಿಸಿರುವ ‘ಕಾವೇರಿ’ ವೆಬ್ಸೈಟ್ಗೆ 2-3 ತಿಂಗಳಿಗೊಮ್ಮೆ ಸರ್ವರ್ ಡೌನ್ ಕಾಟ ಕಾಡುತ್ತಿದೆ. ಈ ಸಮಸ್ಯೆ ಉಂಟಾದರೆ ಋಣಭಾರ ಪ್ರಮಾಣ ಪತ್ರ (ಇಸಿ), ಸರ್ಟಿಫೈಡ್ ಕಾಪಿ (ಸಿಸಿ), ಆಸ್ತಿ, ಸ್ಥಿರಾಸ್ತಿ, ಕರಾರು ಪತ್ರ, ಸಾಲ ತೀರುವಳಿ, ಋಣಬಾಧ್ಯತಾ ಪತ್ರ ಹಾಗೂ ಸಾಗುವಳಿ ಜಮೀನು ಒಪ್ಪಂದ ನೋಂದಣಿ ಕಾರ್ಯಗಳು ಸ್ಥಗಿತವಾಗುತ್ತದೆ. ಉಪ ನೋಂದಣಿ ಕಚೇರಿಗಳಲ್ಲಿ ಸೇವೆಗಳನ್ನು ಸರಳೀಕರಣ ಮಾಡುವ ಉದ್ದೇಶದಿಂದ ಕಾವೇರಿ ಪೋರ್ಟಲ್ ಮೂಲಕ ನೋಂದಣಿ ಸೇವೆ ಜಾರಿಗೊಳಿಸಲಾಗಿತ್ತು.
ಹಿಂದೆ ಆಸ್ತಿ ನೋಂದಣಿಗಾಗಿ ಕಾವೇರಿ ತಂತ್ರಾಂಶವನ್ನು ನವೀಕರಿಸಿ ಹೊಸ 6.8 ಪ್ಯಾಚ್ (ಅಪ್ಲಿಕೇಷನ್) ಅಳವಡಿಸಲಾಗಿತ್ತು. 3 ವರ್ಷಗಳ ಹಿಂದೆ ವಿಫಲಗೊಂಡಿದ್ದ ಈ ಯೋಜನೆಯನ್ನು ಲೋಪ ಸರಿಪಡಿಸದೆ ಮತ್ತೆ ಜಾರಿಗೆ ತಂದಿರುವುದು ಸಮಸ್ಯೆಗೆ ಮೂಲ ಕಾರಣ. ಒಮ್ಮೆ ಕಾವೇರಿ ತಂತ್ರಾಂಶ ಕೈಕೊಟ್ಟರೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜತೆಗೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೇಲೂ ಪರಿಣಾಮ ಬೀರುತ್ತದೆ.
ನಿರ್ಮಾಣ ಕಾಮಗಾರಿಗಳಿಗೂ ತೊಂದರೆ: ನಗರಾಭಿವೃದ್ಧಿ ಇಲಾಖೆ ಅಭಿವೃದ್ಧಿಪಡಿಸಿರುವ ನಿರ್ವಣ- 2 ಸಾಫ್ಟ್ವೇರ್ ಅಗಾಗ್ಗೆ ಕೈಕೊಡುತ್ತಿದೆ. ಇದರಿಂದಾಗಿ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗುತ್ತದೆ. ಕಟ್ಟಡ ನವೀಕರಣ, ಕಟ್ಟಡ ಪರವಾನಗಿ, ಭೂ ಬಳಕೆ ಬದಲಾವಣೆ, ಕಾಂಪೌಂಡ್ ನಿರ್ವಣ, ಲೇಔಟ್ ಅನುಮೋದನೆ, ರಸ್ತೆ ಅಗೆಯುವುದು ಮತ್ತಿತರರ ಕೆಲಸಗಳಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ನಿರ್ವಣ-2 ಸಾಫ್ಟ್ವೇರ್ ಅಭಿವೃದ್ಧಿಯಾಗಿದೆ. ಕೆಲವೊಮ್ಮೆ ಸರ್ವರ್ ಸಮಸ್ಯೆಯಿಂದ ಪರವಾನಗಿ ಪಡೆಯಲು ಜನರು ತೊಂದರೆಗೆ ಸಿಲುಕುವ ಜತೆಗೆ ಆದಾಯದ ಮೇಲೆ ಪರಿಣಾಮ ಬೀರುತ್ತದೆ.
ಸಾರಥಿ-4ಗೂ ತಾಂತ್ರಿಕ ದೋಷ: ಕಲಿಕಾ, ಚಾಲನಾ ಪರವಾನಗಿ ಹಾಗೂ ಪರವಾನಗಿ ನವೀಕರಣಕ್ಕೆ ಪ್ರತಿನಿತ್ಯ ನೂರಾರು ಜನರು ಆರ್ಟಿಒ ಕಚೇರಿಗೆ ಭೇಟಿ ನೀಡುತ್ತಾರೆ. ಸಾರಿಗೆ ಇಲಾಖೆಯ ವಾಹನ್ ಹಾಗೂ ಸಾರಥಿ-4 ಸರ್ವರ್ಗಳಲ್ಲಿ ತಾಂತ್ರಿಕ ದೋಷದಿಂದ ಅರ್ಜಿಗಳು ವಿಲೇ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಗಾಗ್ಗೆ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಆರ್ಟಿಒ ಕಚೇರಿಗಳಿಗೆ ಅಲೆಯುವಂತಾಗಿದೆ. ಖಾಸಗಿ ಸಂಸ್ಥೆಗೆ ಸರ್ವರ್ ಜವಾಬ್ದಾರಿ ವಹಿಸಲಾಗಿದೆ. ಆದರೆ, ಅಧಿಕಾರಿಗಳು ಹಲವು ಬಾರಿ ದೂರು ಕೊಟ್ಟರೂ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲ ಎನ್ನುವಂತಾಗಿದೆ.
ಮೂಲಸೌಕರ್ಯ ಕೊರತೆ: ಆಹಾರ, ಆರೋಗ್ಯ, ನಗರಾಭಿವೃದ್ಧಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇರಿ ಇತರ ಇಲಾಖೆಗಳಲ್ಲಿ ಮೂಲಸೌಕರ್ಯ ಕೊರತೆ ನಿವಾರಿಸಿದರೆ ಸರ್ವರ್ ಸಮಸ್ಯೆ ಬಗೆಹರಿಸಬಹುದು. ಕೆಲವೆಡೆ ಸರ್ವರ್ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರ ಕೊರತೆ ಕಾಡುತ್ತಿದ್ದರೆ, ಕಚೇರಿಗಳಲ್ಲಿ ಅಳವಡಿಸಿರುವ ಕಂಪ್ಯೂಟರ್ಗಳು ಹಳೆಯದಾಗಿದ್ದರಿಂದ ಹೊಸ ತಂತ್ರಾಂಶಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ. ಯಾವುದೇ ಯೋಜನೆಗಳನ್ನು ಜಾರಿಗೆ ತರುವ ಮುನ್ನ ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸಿದರೆ ಇಂಥ ಸಮಸ್ಯೆಗಳು ಮರುಕಳಿಸುವುದಿಲ್ಲ.
108ಕ್ಕೂ ಸಮಸ್ಯೆ: ಯಾವುದೇ ಭಾಗದಿಂದ ‘108’ ಸಂಖ್ಯೆಗೆ ತುರ್ತು ಕರೆ ಮಾಡಿದರೆ ನಗರ ಪ್ರದೇಶದೊಳಗೆ 20 ನಿಮಿಷ, ಗ್ರಾಮೀಣ ಪ್ರದೇಶದಲ್ಲಿ 30 ನಿಮಿಷದೊಳಗೆ ಆಂಬುಲೆನ್ಸ್ ತಲುಪುವ ವ್ಯವಸ್ಥೆಯೇ ‘ಆರೋಗ್ಯ ಕವಚ-108’ ಯೋಜನೆ. ಇದನ್ನು 2008ರ ನ.1ರಂದು ಜಾರಿಗೆ ತರಲಾಗಿದೆ. ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಲಭ್ಯವಿರುವ ಈ ಸೇವೆಗೆ ಏಕಾಏಕಿ ಎದುರಾಗಿರುವ ಸರ್ವರ್ ಸಮಸ್ಯೆಯಿಂದ ಸಾವಿರಾರು ರೋಗಿಗಳು ಕಂಗಾಲಾಗಿದ್ದರು. ಒಟ್ಟು 711 ಆಂಬುಲೆನ್ಸ್ಗಳು ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿವೆ. ಈ ಸೇವೆಯಲ್ಲಿ ಬಳಸುವ ತಂತ್ರಜ್ಞಾನ ತುಂಬಾ ಹಳೆಯದಾಗಿದೆ ಎಂದು ಸರ್ಕಾರವೇ ತಿಳಿಸಿದ್ದು, ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿತ್ತು.
ಪಡಿತರ ಆಹಾರ ಧಾನ್ಯ ಪಡೆಯಲೂ ಕಷ್ಟ: ಬಡವರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಗೂ ಸರ್ವರ್ ಡೌನ್ ಕಾಡುತ್ತಿರುತ್ತದೆ. ಸೆ.15ರಂದು ಶುರುವಾದ ಸರ್ವರ್ ಸಮಸ್ಯೆ 10 ದಿನವಾದರೂ ಬಗೆಹರಿದಿಲ್ಲ. 3-4 ತಿಂಗಳಿಗೊಮ್ಮೆ ಉಂಟಾಗುತ್ತಿರುವ ಈ ಸಮಸ್ಯೆಯಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯಲು ಕಾರ್ಡ್ದಾರರು ಹರಸಾಹಸ ಪಡುವಂತಾಗಿದೆ. ರಾಜ್ಯಾದ್ಯಂತ ಈವರೆಗೆ ಶೇ.60 ಪಡಿತರ ವಿತರಣೆಯಾಗಿದೆ. ಸರ್ವರ್ ಸಮಸ್ಯೆ ಬಗೆಹರಿಸಲಾಗಿದೆ ಎಂದು ಇಲಾಖೆ ಹೇಳುತ್ತಿದ್ದರೂ ಪಡಿತರ ವಿತರಣೆಗೆ ತೊಂದರೆಯಾಗುತ್ತಿದೆ. ಕಾರ್ಡ್ದಾರರು ಬೆರಳಚ್ಚು ನೀಡಬೇಕಿದೆ. ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗಳ ಮುಂದೆ ತಮ್ಮ ಕೆಲಸ ಬಿಟ್ಟು ನೂರಾರು ಜನರು ಬಯೋಮೆಟ್ರಿಕ್ ನೀಡಲು ಸರದಿ ಸಾಲಿನಲ್ಲಿ ಕಾಯುವಂತಾಗಿದೆ.
ಅಪ್ಗ್ರೇಡೇಷನ್ ಅಪ್ಡೇಟ್ ಅಗತ್ಯ: ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಡಿಜಿಟಲ್ ಆಡಳಿತ ಆರಂಭವಾದಾಗಿನಿಂದ, ಇ-ಆಫೀಸ್ ಅನುಷ್ಠಾನದ ದಿನಗಳಿಂದಲೂ ಕಾಡುತ್ತಿದೆ. ಇದಕ್ಕೆ ಪರಿಹಾರವೆಂದರೆ, ಆಯಾ ಕಾಲಕ್ಕೆ ತಕ್ಕಂತೆ ಇಂಟರ್ನೆಟ್ ಸ್ಪೀಡ್, ಬ್ಯಾಂಡ್ವಿಡ್ತ್ಗಳನ್ನು ಬದಲಾಯಿಸಿಕೊಳ್ಳಬೇಕಿದೆ. ಜತೆಗೆ ಸಾಫ್ಟ್ ವೇರ್ಗಳನ್ನು ಆಗಾಗ ಅಪ್ಡೇಟ್ ಹಾಗೂ ಅಪ್ಗ್ರೇಡ್ ಮಾಡಿಕೊಳ್ಳುತ್ತಿರಬೇಕು. ಹೊಸ ಹಾರ್ಡ್ವೇರ್ಗಳು ಬಳಕೆಯಾಗಬೇಕು. ಆಂಬುಲೆನ್ಸ್ ಸೇವೆ ಸಮಸ್ಯೆಯಾದಾಗ ಸರ್ಕಾರ ಬ್ಯಾಕ್ಅಪ್ ಸರ್ವರ್ಗಳನ್ನು ಬಳಸಿಕೊಳ್ಳುವುದಾಗಿ ಹೇಳಿತು. ಜತೆಗೆ ಜಿಲ್ಲಾಮಟ್ಟದಲ್ಲೂ ಹಾರ್ಡ್ವೇರ್ಗಳ ಅಪ್ಗ್ರೇಡ್ಗೆ ಸೂಚಿಸಿತು. ಈ ವ್ಯವಸ್ಥೆ ಎಲ್ಲ ಜನಪರ ಯೋಜನೆಗಳ ಸೇವೆಗೂ ವಿಸ್ತರಣೆಯಾಗಬೇಕಿದೆ.